ಗರಿಗೆದರಿದ ಬಿಜೆಪಿ ರಾಜಕೀಯ ಲೆಕ್ಕಾಚಾರ- ಡಿಸಿಎಂ ಪಟ್ಟ ಯಾರಿಗೆ?

Public TV
1 Min Read

ಬೆಂಗಳೂರು: ದೋಸ್ತಿ ಸರ್ಕಾರ ಪತನವಾಗುತ್ತಿದ್ದಂತೆಯೇ ಮತ್ತೆ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿಯಲ್ಲಿ ಇದೀಗ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರುವ ಬೆನ್ನಲ್ಲೇ ಎಷ್ಟು ಜನ ಉಪಮುಖ್ಯಮಂತ್ರಿಗಳು ಇರುತ್ತಾರೆ, ಯಾರಿಗೆ ಸಚಿವ ಸ್ಥಾನ ಭಾಗ್ಯ ಅನ್ನೋ ಚರ್ಚೆ ಶುರುವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈ ಹಿಂದೆ ಸಚಿವ ಡಿವಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಆರ್ ಅಶೋಕ್ ಮತ್ತು ಕೆ.ಎಸ್ ಈಶ್ವರಪ್ಪ ಇಬ್ಬರೂ ಡಿಸಿಎಂಗಳಾಗಿದ್ದರು. ಈ ಬಾರಿ ದೋಸ್ತಿ ಸರ್ಕಾರವನ್ನ ಉರುಳಿಸುವಲ್ಲಿ ಮುಂಚೂಣಿಯಲ್ಲಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರಚಂಡ ಜಯದ ಬಳಿಕ ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಿದ್ದ ಬಿಜೆಪಿ ಇಬ್ಬರು ಡಿಸಿಎಂಗಳನ್ನು ಹೊಂದಿದೆ. ಇತ್ತ ಮೂರು ಬಾರಿ ಗೆದ್ದಿರೋ ಹಾವೇರಿ ಶಾಸಕ ನೆಹರೂ ಓಲೇಕಾರ್‍ರನ್ನ ಮಂತ್ರಿ ಮಾಡುವಂತೆ ಯಡಿಯೂರಪ್ಪರನ್ನ ಭೇಟಿ ಆಗಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕೈಕ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಬಹುಮತ ಸಾಬೀತು ಮಾಡಲು ಕೊರತೆ ಬಂದ ಕಾರಣ ಬಿಎಸ್‍ವೈ ಅವರು ತಮ್ಮ ಮೂರು ದಿನಗಳ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯ ಎದುರಾಗಿತ್ತು. ಆ ಬಳಿಕ ಮತ್ತೆ ಅಧಿಕಾರಕ್ಕೆ ಏರಬೇಕೆಂಬ ಹಠ ಬಿಎಸ್‍ವೈ ಅವರಲ್ಲಿ ಮೂಡಿದ್ದು, ಈ ಬಾರಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *