ಕನ್ನಂಬಾಡಿ ಕಟ್ಟೆ ಕಟ್ಟಿದ್ದು ವಿಶ್ವೇಶ್ವರಯ್ಯ ಅಲ್ವಂತೆ – ವಿವಾದಕ್ಕೆ ಎಡೆಮಾಡಿಕೊಟ್ಟ ನಂಜರಾಜ ಅರಸ್ ಪುಸ್ತಕ

Public TV
2 Min Read

ಮೈಸೂರು: `ನಾನು ಕನ್ನಂಬಾಡಿ ಕಟ್ಟೆ’ ಹೀಗೊಂದು ಆತ್ಮಕಥೆ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ರಾಣಿಬಹದ್ದೂರು ಇನ್‍ಸ್ಟಿಟ್ಯೂಟ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸಿಎಂ, ಕೆಆರ್‍ಎಸ್ ಅಣೆಕಟ್ಟು ಪ್ರಮುಖವಾದ ಜಲಾಶಯ. ಅದರ ಇತಿಹಾಸದ ಸತ್ಯ ಎಲ್ಲರಿಗೂ ಗೊತ್ತಾಗಬೇಕಿತ್ತು. ಹೀಗಾಗಿ ನಂಜರಾಜ ಅರಸ್ ಸಂಶೋಧನೆ ನಡೆಸಿ ಸತ್ಯ ದರ್ಶನ ಮಾಡಿಸಿದ್ದಾರೆ. ನೀರಿನ ಹಂಚಿಕೆಯಲ್ಲಿ ಆದ ಒಪ್ಪಂದದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯದಿಂದ ಇವತ್ತು ಸಮಸ್ಯೆ ಇದೆ. ನಾವು ಈಗಲೂ ಕಷ್ಟ ಅನುಭವಿಸುತ್ತಿದ್ದೇವೆ. ಇದರ ಬಗ್ಗೆಯೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ ಅಂತಾ ಹೇಳಿದ್ರು.

ಕೆಆರ್‍ಎಸ್ ಕಟ್ಟಿದ್ದು ಸರ್.ಎಂ. ವಿಶ್ವೇಶ್ವರಯ್ಯ ಅಲ್ಲ ಕ್ಯಾಪ್ಟನ್ ಡಾಸ್ ಅಂತಾ ಪುಸ್ತಕದಲ್ಲಿ ಹೇಳಲಾಗಿದೆ. ಸಂಶೋಧನೆ ಮಾಡಿ ನಂಜರಾಜ ಅರಸ್ ಪುಸ್ತಕ ಬರೆದಿರೋ ಕಾರಣ ಇದನ್ನು ಸತ್ಯ ಅಂತಾ ನಂಬಬಹುದು. ಪುಸ್ತಕದಲ್ಲಿನ ಅಂಶವನ್ನು ಒಪ್ಪಿಕೊಳ್ಳುವುದು ಬಿಡುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ಸತ್ಯ ಸರ್ವ ಸಮ್ಮತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು ಎಂದು ಸಿಎಂ ಹೇಳಿದ್ದಾರೆ.

ಇವತ್ತು ಜಲಾಶಯದಲ್ಲಿ ನೀರಿಲ್ಲ. ಅದರೂ ಪ್ರತಿ ದಿನ 2,000 ಕ್ಯೂಸೆಕ್ ನೀರು ಬಿಡಲು ಆದೇಶ ಮಾಡಲಾಗಿದೆ. ಆದರೆ ಜಲಾಶಯದಲ್ಲಿ ನೀರಿಲ್ಲದ ಕಾರಣ ಆದೇಶವನ್ನು ನಾವು ಪಾಲಿಸುತ್ತಿಲ್ಲ. ರಾಜ್ಯದಲ್ಲಿ ಕಂಡು ಕೇಳರಿಯದ ಬರ ಇದೆ. ಹೀಗಾಗಿ ಜಲಸಂಪನ್ಮೂಲ ಸಚಿವರು ಮಳೆಗಾಗಿ ಪೂಜೆ ಮಾಡುತ್ತಿದ್ದಾರೆ. ಈ ಪೂಜೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ನನಗೆ ಇಂತಹ ಪೂಜೆ ಮೇಲೆ ನಂಬಿಕೆ ಇಲ್ಲ ಸಚಿವರು ತಮ್ಮ ಸ್ವಂತ ಹಣದಲ್ಲಿ ಪೂಜೆ ಮಾಡುತ್ತಿದ್ದಾರೆ ಅಂದ್ರು.

`ನಾನು ಕನ್ನಂಬಾಡಿ ಕಟ್ಟೆ’ ಪುಸ್ತಕದ ಬಗ್ಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಮಾತನಾಡಿ, ಊಹಾಪೂಹಗಳಿಗೆ ಅವಕಾಶ ನೀಡದಂತೆ ಪುಸ್ತಕ ಬರೆದಿದ್ದಾರೆ. ಕಾವೇರಿ ನದಿಯ ಪ್ರತಿ ಅಂಚನ್ನು ವಿವರಿಸಿದ್ದಾರೆ. ಅತ್ಯಂತ ಸ್ವಾರಸ್ಯಕರವಾಗಿ ಪುಸ್ತಕ ಮೂಡಿ ಬಂದಿದೆ. ನಾನು ಪುಸ್ತಕವನ್ನು ಸಂಪೂರ್ಣ ಓದಿದ್ದೇನೆ. ಸಿಎಂ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಿರುವುದು ಔಚಿತ್ಯಪೂರ್ಣ. ಪ್ರೊ. ನಂಜರಾಜ ಅರಸು ನೇರ ಮಾತಿನವರು. ಅವರು ಮಾಡಿರುವ ಕೆಲಸಕ್ಕೆ ಸೂಕ್ತ ಸ್ಥಾನ ಮಾನ ಸಿಗಲಿ ಅಂತಾ ಹೇಳಿದರು.

ವಿಶ್ವೇಶ್ವರಯ್ಯ ತೇಜೋವಧೆ: `ನಾನು ಕನ್ನಂಬಾಡಿ ಕಟ್ಟೆ’ ಆತ್ಮಕಥೆ ಪುಸ್ತಕದಲ್ಲಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ತೇಜೋವಧೆ ಮಾಡಲಾಗಿದೆ. ‘ನಾನು ಕನ್ನಂಬಾಡಿ ಕಟ್ಟೆ’ ಕೃತಿಯ ಕರ್ತೃ ಪ್ರೊ. ನಂಜರಾಜ ಅರಸ್ ಇತಿಹಾಸವನ್ನು ತಿರುಚಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಸೇನಾಪಡೆ ಸಂಘಟನೆ ಸಂಚಾಲಕ ಪ್ರೇಮಕುಮಾರ್ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *