ಅಪ್ಪ-ಅಮ್ಮನ ಗುರುತು ಇಲ್ಲದೇ ಇರೋ ರಕ್ತವನ್ನು ಹೊಂದಿರುವವರು ಜಾತ್ಯತೀತರು: ಅನಂತಕುಮಾರ ಹೆಗ್ಡೆ

Public TV
2 Min Read

ಕೊಪ್ಪಳ: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಲ್ಲಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಜಾತ್ಯತೀತರ ಬಗ್ಗೆ ಹೊಸ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯಾತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ ತಮ್ಮ ಧರ್ಮವನ್ನು ಹೆಮ್ಮೆಯಿಂದ ಹೇಳಿಕೊಂಡರೆ ನನಗೆ ಖುಷಿ ಅನಿಸುತ್ತೆ. ಯಾಕಂದ್ರೆ ಅವರಿಗೆ ಅವರ ರಕ್ತದ ಅರಿವಿದೆ ಎಂದರ್ಥ. ಆದ್ರೆ ಈ ಜಾತ್ಯಾತೀತರು ಅಂತ ಕರೆದುಕೊಳ್ಳುತ್ತಾರೆ ಅಲ್ವ. ಅಂಥವರು ಅಪ್ಪ-ಅಮ್ಮನ ಗುರುತು ಇಲ್ಲದೇ ಇರುವ ರಕ್ತವನ್ನು ಹೊಂದಿರುವವರು ಜಾತ್ಯಾತೀತರು ಅಂತ ಕರೆದುಕೊಳ್ಳುತ್ತಾರೆ ಅಂತ ಹೇಳಿದ್ರು.

ಜಾತ್ಯಾತೀತರಿಗೆ ತಮ್ಮ ಗುರುತೇ ತಮಗಿರುವುದಿಲ್ಲ. ಮಾತೇತ್ತಿದ್ರೆ ದೊಡ್ಡ ವಿಚಾರವಾದಿಗಳು. ಅಪ್ಪ-ಅಮ್ಮನ ಪರಿಚಯ ಇಲ್ಲದೇ ಇರೋ ಇವರುಗಳು ದೊಡ್ಡ ವಿಚಾರವಾದಿಗಳು. ಇವರನ್ನು ಜಾತಿಯ ಜೊತೆ ಕೂರಿಸಿಕೊಳ್ಳುತ್ತಿರೋ ಅಥವಾ ನಿಮ್ಮ ಕುಲದ ಜೊತೆ ಕೂರಿಸಿಕೊಳ್ಳುತ್ತಿರೋ ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯ ಇದ್ದಿದ್ದೇ ಆದ್ರೆ ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದ್ರೆ ಜಾತ್ಯಾತೀತರು ಅಂತ ಹೇಳಿದ್ರೆ ಮಾತ್ರ ಸ್ವಲ್ಪ ನೀವು ಯಾರು ಅಂತ ಸಂಶಯ ಬರುತ್ತೆ ಅಂತ ಹೇಳಿದ್ದಾರೆ.

ಹೌದು. ಸಂವಿಧಾನ ಜಾತ್ಯಾತೀತರು ಅಂತರು ಹೇಳಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಬದಲಾಗುತ್ತೆ. ನಿಮಗೆ ಸಂಪ್ರದಾಯ, ಪರಂಪರೆ, ಸಂಸ್ಕೃತಿ ಇದರ ಐತಿಹಾಸಿಕ ಹೆಜ್ಜೆಯ ಗುರುತುಗಳೇ ನಿಮಗೆ ಗೊತ್ತಿಲ್ಲ. ನೀವು ಮೂರ್ಖರು. ಜಗತ್ತಿನ ಭೂಪಟಗಳು, ಸಾಮಾಜಿಕ ಚಿತ್ರಣ ಬದಲಾಗಿ ಹೋಗಿದೆ. ಆದ್ರೆ 800 ವರ್ಷಗಳು ಕಳೆದ್ರೂ ಕೂಡ ಭಾರತದಲ್ಲಿ ಪುಟುಗೋಸಿಗಳಿಗೆ ಇನ್ನು ಕೂಡ ತಲೆಯೆತ್ತಲು ಸಾಧ್ಯವಾಗಿಲ್ಲ ಅಂದ್ರು.

ಯಾರಿಗೆ ಸಭ್ಯತೆಯ ಅರಿವಿದೆ ಅಂತವರು ಸಂಸ್ಕಾರ ಎಂಬ ಶಬ್ದವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಯಾರಿಗೆ ಈ ಶಬ್ಧ ಪರಿಚಯ ಇಲ್ಲವೋ ಅಥವಾ ಒಳ್ಳೆದು ಮತ್ತು ಕೆಟ್ಟದರ ಮಧ್ಯೆ ಇರೋ ಕಂದಕ ಗೊತ್ತಿಲ್ಲವೋ ಅಂತವರು ಶಿಕ್ಷಣವೇ ಸಂಸ್ಕಾರ ಅಂದುಕೊಂಡಿರುತ್ತಾರೆ. ಅಂತಹ ಮೂಢಮತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *