ಭಾರತದಲ್ಲಿ ಸಮುದಾಯ ಹಂತಕ್ಕೆ ಸೋಂಕು ಹೋಗಿಲ್ಲ: ತಪ್ಪು ಒಪ್ಪಿಕೊಂಡ ಡಬ್ಲ್ಯೂಎಚ್‍ಒ

Public TV
1 Min Read

ನವದೆಹಲಿ: ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತ ತಲುಪಿದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ತೋರಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ತನ್ನ ಯಥಾಸ್ಥಿತಿ ವರದಿಯ ದೋಷವನ್ನು ಒಪ್ಪಿಕೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಯಥಾಸ್ಥಿತಿ ವರದಿಯಲ್ಲಿ, ‘ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ಹೋಗಿ’ ಎಂದು ಹೇಳಿತ್ತು. ಆದರೆ ಈಗ ತಮ್ಮ ತಪ್ಪನ್ನು ಒಪ್ಪಿಕೊಂಡು, ಭಾರತದಲ್ಲಿ ಸೋಂಕು ಹರಡುವ ಕ್ಲಸ್ಟರ್ ಕಾಣಿಸಿಕೊಂಡಿವೆ. ಆದರೆ ಸಮುದಾಯ ಪ್ರಸರಣದ ಸ್ಥಿತಿ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟನೆ ನೀಡಿದೆ. ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಮೂರನೇ ಹಂತ (ಸಮುದಾಯ ಪ್ರಸಾರ)ಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ ಮತ್ತು ಎಚ್ಚರಕೆಯಿಂದ. ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದರು.

ದೇಶದಲ್ಲಿ ಕೊರೊನಾ ಮಹಾಮಾರಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಸೆಷ್ಟೆಂಬರ್ ವರೆಗೂ ವೈರಸ್ ಇರುವ ಸಾಧ್ಯತೆಗಳಿವೆ ಎಂದು ಚಂಡೀಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ.

ಈ ವೈರಸ್ ಶೇ.58ರಷ್ಟು ಮಂದಿಗೆ ಕಾಡುವ ಸಾಧ್ಯತೆಗಳಿವೆ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿರುವುದು ಆತಂಕ ಮೂಡಿಸಿದೆ. ಈ ತಿಂಗಳ ಅಂತ್ಯದವರೆಗೂ ಯಾವುದೇ ಹಬ್ಬ-ಹರಿದಿನ ಆಚರಣೆ ಮಾಡಲು ಅವಕಾಶ ನೀಡದಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಎಚ್ಚರಿಕೆ ನೀಡಿದೆ. ಮಧ್ಯ ಪ್ರದೇಶದ ಇಂಧೋರ್ ನಲ್ಲಿ ಇವತ್ತು ಕೂಡ ಓರ್ವ ಆರ್ಯುವೇದ ವೈದ್ಯ ನಿಧನರಾಗಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,061ಕ್ಕೆ ಏರಿದ್ದು, ಸಾವಿನ ಸಂಖ್ಯೆ 241 ಆಗಿದೆ. ಕಳೆದ 24 ಗಂಟೆಯಲ್ಲಿ 37 ಸಾವಾಗಿದ್ದು, ದಾಖಲೆಯ 896 ಜನರಿಗೆ ಸೋಂಕು ದೃಢವಾಗಿದೆ. 692 ಜನ ಡಿಸ್ಚಾರ್ಜ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *