ತಬ್ಬಲಿ ಮೇಕೆ ಮರಿಗೆ ಹಾಲುಣಿಸಿದ ಶ್ವಾನ..!

Public TV
2 Min Read

ಚೆನ್ನೈ: ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ. ಮೇಕೆ ಮತ್ತು ಶ್ವಾನದ ಈ ಸಂಬಂಧ ನಿಜಕ್ಕೂ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಹೌದು. ಇತ್ತೀಚೆಗೆ ಚಂಡಮಾರುತದಿಂದ ಜಿಲ್ಲೆಯ ಹಲವೆಡೆ ಪ್ರಾಣ ಹಾನಿಗಳು ಸಂಭವಿಸಿವೆ. ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸುವಾಗ ಜಾತಿ ತಾರತಮ್ಯವೂ ಎದುರಾಗಿದೆ. ಆದ್ರೆ ಮೂಕಪ್ರಾಣಿಗಳು ಯಾವುದೇ ರೀತಿಯ ತಾರತಮ್ಯವಿಲ್ಲದೇ ಮಾನವೀಯತೆ ಮೆರೆದಿರುವುದನ್ನು ನೋಡಿದಾಗ ನಿಜಕ್ಕೂ ಮನಕಲಕುತ್ತದೆ.

ಚೆನ್ನೈನ ಪುದುಕೊಟ್ಟೈ ಗ್ರಾಮದಲ್ಲಿ ಅನಾಥ ಮೇಕೆ ಮರಿಗೆ ಶ್ವಾನವೊಂದು ತಾಯಿಯಾಗಿದೆ. ಕನ್ನ ಎಂಬ ಮೇಕೆ ಮರಿ ಕೆಲ ದಿನಗಳ ಹಿಂದೆ ನಡೆದ ಚಂಡಮಾರುತದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು. ಸದ್ಯ ಶ್ವಾನವೇ ಮೇಕೆ ಮರಿಗೆ ಆಸರೆಯಾಗಿದೆ.

ನವೆಂಬರ್ 16ರಂದು ಜಿಲ್ಲೆಗೆ ಗಜ ಚಂಡಮಾರುತ ಅಪ್ಪಳಿಸಿದ್ದು, ಸಾಕಷ್ಟು ಹಾನಿಯಾಗಿದೆ. ಈ ಮೊದಲು ಅಂದ್ರೆ ಅವಘಡಕ್ಕೂ ಮೂರು ದಿನ ಮುಂಚೆ ಕನ್ನ ಕುಮಾರಮಲೈ ಸಮೀಪದ ತಿರುವಳ್ಳುವರ್ ನಗರ್ ನಲ್ಲಿ ಜನಿಸಿತ್ತು. ಈ ಅವಘಡ ನಡೆದ ಕೆಲ ದಿನಗಳ ಬಳಿಕ ಕನ್ನ ತಾಯಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೃತಪಟ್ಟಿತ್ತು.

ಮೇಕೆಯ ಮಾಲೀಕ ಆರ್ ದುರೈಸಮಿ ಮಾತನಾಡಿ, ಚಂಡಮಾರುತ ಬಂದ ಬಳಿಕ ಮೇಕೆ ಹುಲ್ಲು ಮೇಯುತ್ತಿರಲಿಲ್ಲ. ಹಸಿದ ಮೇಕೆ ಅದರ ಗೂಡಿನಲ್ಲಿರುವ ಬೌಲ್ ನಲ್ಲಿ ಇಟ್ಟ ಅನ್ನವನ್ನಷ್ಟೇ ತಿನ್ನುತ್ತಿತ್ತು. ಇದರಿಂದ ಗಾಬರಿಗೊಂಡ ನಾನು ವೈದ್ಯರನ್ನು ಕೆರೆಸಿ ಆಕೆಗೆ ಚಿಕಿತ್ಸೆಯನ್ನು ನೀಡಿದೆ. ಆದ್ರೆ ಆಕೆ ಬದುಕುಳಿಯಲೇ ಇಲ್ಲ. ತನ್ನ ಪುಟ್ಟ ಕಂದಮ್ಮನ ಒಟ್ಟಂಟಿಯಾಗಿ ಬಿಟ್ಟು ಜಗತ್ತಿನಿಂದಲೇ ದೂರವಾದಳು ಅಂತ ಕಣ್ಣೀರು ಹಾಕಿದ್ರು.

ತಾಯಿ ಮೇಕೆ ತೀರಿಕೊಂಡ ಬಳಿಕ ಮಾಲೀಕನ ಮನೆಯವರು ಮೇಕೆ ಮರಿಗೆ ಬಾಟಲಿ ಮೂಲಕ ಹಾಲನ್ನು ನೀಡುತ್ತಿದ್ದರು. ಆದ್ರೆ ಮರಿ ಈ ರೀತಿ ಕೊಟ್ಟ ಹಾಲನ್ನು ಕುಡಿಯುತ್ತಿರಲಿಲ್ಲ. ಇದರಿಂದ ಚಿಂತಿತರಾಗಿದ್ದ ದುರೈಸಾಮಿ ಒಂದು ದಿನ ಅಚ್ಚರಿ ಕಂಡರು. ಅದೇನೆಂದರೆ ತಮ್ಮ ಮನೆಯ ಶ್ವಾನ ಪೊನ್ನಿ ತನ್ನ ಮರಿಗಳೊಂದಿಗೆ ಮೇಕೆ ಮರಿಗೂ ಹಾಲುಣಿಸುತ್ತಿದ್ದಳು. ಇದನ್ನು ಕಣ್ಣಾರೆ ಕಂಡ ಮನೆಯವರು ಸಂತಸ ವ್ಯಕ್ತಪಡಿಸಿದ್ರು.

ಶ್ವಾನ ಮೇಕೆ ಮರಿ ಮೇಲೆ ದಾಳಿ ಮಾಡಬಹುದು ಎಂದು ನಾವು ನಂಬಿದ್ದೆವು. ಆದ್ರೆ ಆಕೆ ತನ್ನ ಮರಿಗಳೊಂದಿಗೆ ಮೇಕೆ ಮರಿಗೂ ಆಸರೆಯಾಗಿದ್ದಾಳೆ. ಪೊನ್ನಿ ಮೇಕೆ ಮರಿಗೂ ಹಾಲುಣಿಸುವ ಮೂಲಕ ತನ್ನ ಮರಿಗಳಂತೆಯೇ ಮುದ್ದಾಡುತ್ತಾಳೆ. ಹೀಗಾಗಿ ಪೊನ್ನಿಯ ಮರಿಗಳು ಕೂಡ ಮೇಕೆ ಮರಿ ಜೊತೆ ಕಳೆದ 1 ತಿಂಗಳಿನಿಂದ ಆಟವಾಡುತ್ತಾ ಖುಷಿ ಖುಷಿಯಾಗಿವೆ ಅಂತ ಮಾಲೀಕ ಹರ್ಷ ವ್ಯಕ್ತಪಡಿಸಿದ್ರು.

ದುರೈಸಾಮಿ ಮಗ 5 ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಸಹಪಾಠಿಗಳನ್ನು ಮನೆಗೆ ಕರೆದುಕೊಂಡು ಬಂದು ಪೊನ್ನಿಯು ಕನ್ನನನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದಾಳೆ ಅಂತ ಹೇಳಿ ಖುಷಿ ಹಂಚಿಕೊಳ್ಳುತ್ತಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *