ಗನ್ ಮ್ಯಾನ್, ಚಾಲಕನನ್ನು ಬಿಟ್ಟು ಪತ್ನಿ ಜೊತೆ ಕಾರಿನಲ್ಲಿ ಆನಂದ್ ಸಿಂಗ್ ಹೋಗಿದ್ದು ಎಲ್ಲಿಗೆ?

Public TV
2 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡುತ್ತಿದ್ದು, ಈ ಮಧ್ಯೆ ಇತ್ತೀಚೆಗಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಳ್ಳಾರಿ ಶಾಸಕ ಆನಂದ್ ಸಿಂಗ್ ನಡೆ ಭಾರೀ ಕುತೂಹಲ ಕೆರಳಿಸಿದೆ.

ರೆಸಾರ್ಟ್ ರಾಜಕಾರಣಕ್ಕೆಂದು ಬುಧವಾರ ಬಳ್ಳಾರಿಯಿಂದ ಹೊರಟವರು ಇದೂವರೆಗೂ ಬೆಂಗಳೂರು ತಲುಪಿಲ್ಲ. ಇಷ್ಟು ಮಾತ್ರವಲ್ಲದೇ ಚಾಲಕ, ಗನ್ ಮ್ಯಾನ್ ಗಳನ್ನು ಬಿಟ್ಟು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಬಳ್ಳಾರಿಯಿಂದ ಹೊರಟಿದ್ದವರು ಇನ್ನೂ ಬೆಂಗಳೂರು ತಲುಪಿಲ್ಲದ್ದು ಅಚ್ಚರಿ ಮೂಡಿಸುತ್ತಿದೆ.

ಕಾಂಗ್ರೆಸ್ ಮುಖಂಡರಿಗೆ ಖುದ್ದು ಕರೆ ಮಾಡಿ ಬೆಂಗಳೂರಿಗೆ ಬರ್ತಿದ್ದೀನಿ ಡೋಂಟ್ ವರಿ ಅಂತ ಹೇಳಿದ್ದರು. ಆದ್ರೆ ಇದೂವರೆಗೂ ಶಾಸಕರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಲ್ಲ. ಹೀಗಾಗಿ ಸದ್ಯ ಕಾಂಗ್ರೆಸ್ಸಿನ 78 ಶಾಸಕರಲ್ಲಿ 77 ಜನ ಮಾತ್ರ ಇದ್ದಾರೆ. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ ಅನ್ನೋದಕ್ಕೆ ಉತ್ತರಿಸಿದ್ರು ಹೆಚ್‍ಡಿಕೆ

ಚುನಾವಣಾ ಫಲಿತಾಂಶದ ಬಳಿಕ ಕಾರ್ಯಕರ್ತರ ಸಂಭ್ರಮ ಕಾರ್ಯಕ್ರಮವಿದ್ದುದರಿಂದ ಮೊನ್ನೆ ರಾತ್ರಿ ಹೊರಡಬೇಕಾಗಿದ್ದ ಆನಂದ್ ಸಿಂಗ್ ನಿನ್ನೆ ಬೆಳಗ್ಗೆ ಹೊರಟಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಬಳ್ಳಾರಿ ಗಡಿಯಲ್ಲಿ ರೆಡ್ಡಿ ಬ್ರದರ್ಸ್ ಅವರ ಸಂಪರ್ಕದಲ್ಲಿದ್ದು, ಅವರನ್ನು ಹೈಜಾಕ್ ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ಅವರ ಆಪ್ತವಲಯದಿಂದ ಕೇಳಿಬಂದಿದೆ. ಆದ್ರೆ ಈ ವಿಚಾರವನ್ನು ಸ್ಪಷ್ಟಪಡಿಸುವುದಾಗಿ ಅಥವಾ ನಿರಾಕರಿಸುವುದಾಗಿ ಆಪ್ತ ವಲಯಗಳು ಬಿಟ್ಟು ಕೊಡುತ್ತಿಲ್ಲ.

ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದ ವೇಳೆ ಆನಂದ್ ಸಿಂಗ್ ಅವರು ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಈಗಲೂ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಆಪರೇಷನ್ ಕಮಲ ಮಾಡೋದಿಕ್ಕೆ ಜನಾರ್ದನ ರೆಡ್ಡಿಯವರು ಫೀಲ್ಡ್ ಗೆ ಇಳಿದಿದ್ದಾರಾ ಎಂಬ ಅನುಮಾನವೊಂದ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ಗುಜರಾತ್‍ಗೆ ತೆರಳಿದ್ದಾರಾ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್?

ಬಿಜೆಪಿಯನ್ನು ತೊರೆದು ಬಿಜೆಪಿ ವಿರುದ್ಧವೇ ತೊಡೆತಟ್ಟಿ ಕಾಂಗ್ರೆಸ್ ಸೇರಿ ಗೆದ್ದಿರುವ ಶಾಸಕರು ಇದೀಗ ಮತ್ತೆ ಬಿಜೆಪಿ ಪರ ಯಾಕೆ ಬೆಂಬಲ ಸೂಚಿಸುತ್ತಾರೆ ಎಂಬ ಯಕ್ಷಪ್ರಶ್ನೆ ಕಾಂಗ್ರೆಸ್ಸಿಗರನ್ನು ಕಾಡುತ್ತದೆ. ಆದ್ರೆ ಅವರು ಇಂತಹ ನಿರ್ಧಾರ ಕೈಗೊಳ್ಳಲಾರರು ಎಂಬ ನಂಬಿಕೆಯಲ್ಲಿ ಕೈ ನಾಯಕರಿದ್ದಾರೆ.

ಒಟ್ಟಿನಲ್ಲಿ ಬಳ್ಳಾರಿಯಿಂದ 3 ಶಾಸಕರು ಒಟ್ಟಾಗಿದ್ದು, ಆನಂದ್ ಸಿಂಗ್ ಅವರು ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸುತ್ತೇವೆ ಅಂತ ಹೇಳಿದ್ರೂ ಕೂಡ ಖಚಿತ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ದೂರ ಉಳಿದಿರಬಹುದೆಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *