ಸಾಕು ಪ್ರಾಣಿಗಳಿಗಾಗಿ ಬ್ಲಡ್‌ ಬ್ಯಾಂಕ್‌ ನೆಟ್‌ವರ್ಕ್ – ಏನಿದು ಕೇಂದ್ರದ ಹೊಸ ಯೋಜನೆ?

Public TV
4 Min Read

ಭಾರತದಲ್ಲಿ ಜನ ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೇ ಭಾವಿಸಿ ಸಾಕುತ್ತಾರೆ. ಮನುಷ್ಯರಂತೆ ಹೆಸರಿಟ್ಟು, ಮಗನೇ ಅಂತ ಕರೆಯೋದನ್ನ ನಾವೆಲ್ಲ ನೋಡಿದ್ದೇವೆ ಅಲ್ವಾ..?! ಅಷ್ಟೊಂದು ಮುದ್ದಾಗಿ ಸಾಕು ಪ್ರಾಣಿಗಳನ್ನು ನಮ್ಮ ಜನ ನೋಡಿಕೊಳ್ಳುತ್ತಾರೆ. ಇಷ್ಟೊಂದು ಮುದ್ದಾಗಿ ನೋಡಿಕೊಳ್ಳುವ ಪ್ರಾಣಿಗಳ ಆರೋಗ್ಯ ಸಹ ಮುಖ್ಯ ಅಲ್ವಾ..? ಇದೇ ಕಾರಣಕ್ಕೆ ಕೇಂದ್ರ ಸರ್ಕಾರ (Central Government) ಸಾಕುಪ್ರಾಣಿಗಳಿಗಾಗಿ ಬ್ಲಡ್‌ ಬ್ಯಾಂಕ್‌ (Pet Blood Banks), ರಕ್ತದ ಲಭ್ಯತೆಯ ಬಗ್ಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಲು ಚಿಂತನೆ ನಡೆಸುತ್ತಿದೆ. 

ಅಂದ ಹಾಗೆ ಭಾರತದಲ್ಲಿ (India) ಇತ್ತೀಚೆಗೆ ಜನ ಅತೀ ಹೆಚ್ಚು ಸಾಕುಪ್ರಾಣಿಗಳನ್ನು ಸಾಕುತ್ತಿದ್ದಾರೆ. ಸುಮಾರು 53.6 ಕೋಟಿ ಜಾನುವಾರುಗಳು ಭಾರತದಲ್ಲಿವೆ! ಅವುಗಳಿಗೆ ಅಗತ್ಯ ಚಿಕಿತ್ಸೆಗಾಗಿ, ವ್ಯವಸ್ಥಿತವಾದ ಪ್ರಮಾಣೀಕೃತ ರಕ್ತನಿಧಿಗಳು ಇಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಸಾಕು ಪ್ರಾಣಿಗಳಿಗಾಗಿ ಸುಲಭವಾಗಿ ಹಾಗೂ ಪ್ರಮಾಣಿಕೃತವಾದ ರಕ್ತನಿಧಿಗಳನ್ನು ಸ್ಥಾಪಿಸಿ, ಅದರ ಮಾಹಿತಿಗಳು, ರಕ್ತದ ಲಭ್ಯತೆ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಮುಂದಾಗಿದೆ. ಇದಕ್ಕಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ (Department of Animal Husbandry & Dairying under the Ministry of Fisheries) ಸಾರ್ವಜನಿಕರ ಅಭಿಪ್ರಾಯವನ್ನೂ ಸಹ ಕೇಳಿದೆ. ಅಲ್ಲದೇ ರಕ್ತದಾನಕ್ಕೆ ಪ್ರಾಣಿಗಳಿಗೆ ಇರಬೇಕಾದ ಅರ್ಹತೆ ಹಾಗೂ ಮಾನದಂಡವನ್ನು ಮಾರ್ಗಸೂಚಿಯಲ್ಲಿ ಸರ್ಕಾರ ಪ್ರಕಟಿಸಿದೆ. 

ಸಾಕುಪ್ರಾಣಿಗಳಿಗೆ ರಕ್ತ ನಿಧಿಯ ಅಗತ್ಯವೇನು?

2019 ರಲ್ಲಿ ನಡೆಸಿದ 20ನೇ ಜಾನುವಾರು ಜನಗಣತಿಯ ಪ್ರಕಾರ ಭಾರತದಲ್ಲಿ 53.6 ಕೋಟಿ ಜಾನುವಾರುಗಳಿವೆ. ಈಗ ಅದು ಮತ್ತಷ್ಟು ಜಾಸ್ತಿಯಾಗಿರುವ ಸಾಧ್ಯತೆ ಇದೆ. ಸಾಕು ಪ್ರಾಣಿಗಳಲ್ಲಿ ದನಗಳು, ಎಮ್ಮೆಗಳು, ಮೇಕೆಗಳು ಮತ್ತು ಕುರಿಗಳು, ಹಾಗೆಯೇ ಕುದುರೆಗಳು, ಕತ್ತೆಗಳು, ಒಂಟೆಗಳು ಮತ್ತು ಹಂದಿಗಳಂತಹ ಪ್ರಾಣಿಗಳು ಸೇರಿವೆ. 

ಜಾನುವಾರುಗಳು ದೇಶದ ಕೃಷಿ ಆರ್ಥಿಕತೆ ಮತ್ತು ಗ್ರಾಮೀಣ ಜನರ ಉದ್ಯೋಗದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ವಲಯವು ಕೃಷಿ ವಲಯದ ಸುಮಾರು 30% ಆದಾಯ ನೀಡುತ್ತದೆ. ಇದೇ ಕಾರಣಕ್ಕೆ ಸಾಕು ಪ್ರಾಣಿಗಳ ಆರೋಗ್ಯ ಸಹ ಮುಖ್ಯವಾಗಿದೆ. ಅವುಗಳಿಗೆ ಉಂಟಾಗುವ ರಕ್ತ ಹೀನತೆ, ಗಾಯ, ರಕ್ತ ಹೆಪ್ಪುಗಟ್ಟುವಿಕೆ, ಸಾಂಕ್ರಾಮಿಕ ರೋಗ, ಅಸ್ವಸ್ಥತೆಯ ಸಂದರ್ಭದಲ್ಲಿ ಚಿಕಿತ್ಸೆಗಾಗಿ ರಕ್ತದ ಅಗತ್ಯ ಇರುತ್ತದೆ.  

ಯಾವ ಸಾಕು ಪ್ರಾಣಿಗಳಲ್ಲಿ ಎಷ್ಟು ರಕ್ತ ಇರುತ್ತೆ? 

ಪ್ರಾಣಿಗಳಲ್ಲಿ ರಕ್ತದ ಪ್ರಮಾಣ ದೇಹದ ತೂಕದ 7% ರಿಂದ 9% ವರೆಗೆ ಇರುತ್ತದೆ. ರಕ್ತದ ಪ್ರಮಾಣವು ಈ ಮಟ್ಟಕ್ಕಿಂತ ಕಡಿಮೆಯಾದಾಗ ರಕ್ತ ನೀಡುವ ಅಗತ್ಯ ಇರುತ್ತದೆ. 

ದನಗಳು ದೇಹದ ತೂಕದ ಪ್ರತಿ ಕೆಜಿಗೆ 55 ml ರಕ್ತವನ್ನು ಹೊಂದಿರುತ್ತವೆ. ಸರಾಸರಿ 300 ಕೆಜಿ ತೂಕದ ದನ 16.5 ಲೀಟರ್ ರಕ್ತವನ್ನು ಹೊಂದಿರುತ್ತದೆ. ನಾಯಿಗಳು 86 ml/kg, ಕುದುರೆಗಳು 76 m;/kg, ಮೇಕೆಗಳು, ಕುರಿಗಳು,  ಹಂದಿಗಳು  66 ml/kg ಮತ್ತು, ಹಂದಿಗಳು  65  ml /kg ಮತ್ತು ಬೆಕ್ಕುಗಳು 55ml / kg, ರಕ್ತದ ಪ್ರಮಾಣವನ್ನು ಹೊಂದಿರುತ್ತವೆ. 

ಪ್ರಾಣಿಗಳಲ್ಲೂ ರಕ್ತದ ಗುಂಪುಗಳಿವೆ 

ಮಾನವರಂತೆ, ಪ್ರಾಣಿಗಳಲ್ಲಿ ಹೆಚ್ಚಿನ ಸಂಖ್ಯೆಯ ರಕ್ತ ಗುಂಪುಗಳಿವೆ, ದನಗಳಲ್ಲಿ 11, ನಾಯಿಗಳಲ್ಲಿ 9, ಕುದುರೆಗಳಲ್ಲಿ 8 ಮತ್ತು ಬೆಕ್ಕುಗಳಲ್ಲಿ 4 ರಕ್ತ ಗುಂಪುಗಳಿವೆ.

ಪ್ರಾಣಿಗಳ ರಕ್ತ ದಾನಕ್ಕಿರೋ ಮಾನದಂಡಗಳೇನು?

ರಕ್ತ ದಾನ ಮಾಡುವ ಪ್ರಾಣಿಗಳು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಬೇಕು. ಅವುಗಳಲ್ಲಿ ಅನಾರೋಗ್ಯದ ಸಮಸ್ಯೆಗಳಿರಬಾರದು. ಉಣ್ಣೆ, ಇನ್ನಿತರೆ ಕೀಟಗಳ ಸಮಸ್ಯೆಯಿಂದ ಅವು ಮುಕ್ತವಾಗಿರಬೇಕು.

ವಯಸ್ಸು & ತೂಕ

ನಾಯಿಗಳು 1 ರಿಂದ 8 ವರ್ಷ ವಯಸ್ಸಿನದ್ದಾಗಿರಬೇಕು, ಕನಿಷ್ಠ 25 ಕೆಜಿ ತೂಕ ಹೊಂದಿರಬೇಕು. ಬೆಕ್ಕುಗಳು 1 ರಿಂದ 5 ವರ್ಷ ವಯಸ್ಸಿನವಗಿರಬೇಕು, ಕನಿಷ್ಠ 4 ಕೆಜಿ ತೂಕ ಹೊಂದಿರಬೇಕು. ಅವುಗಳಿಗೆ ಬೊಜ್ಜು ಇರಬಾರದು.  

ವ್ಯಾಕ್ಸಿನೇಷನ್

ದಾನಿ ಪ್ರಾಣಿಗೆ ವಿಶೇಷವಾಗಿ ರೇಬೀಸ್‌ ನಿರೋಧಕ ಲಸಿಕೆ ಹಾಕಿಸಬೇಕು. ನಿಯಮಿತವಾಗಿ ಜಂತುಹುಳು ನಿವಾರಣ ಔಷಧಿ ನೀಡಿರಬೇಕು. ಹೆಣ್ಣು ದಾನಿ ಪ್ರಾಣಿಗಳು ಗರ್ಭ ಧರಿಸಿರಬಾರದು. ಮರಿಗಳಿಗೆ ಹಾಲುಣಿಸುವ ಪ್ರಾಣಿಗಳಾಗಿರಬಾರದು. 

ಎಷ್ಟು ದಿನಕ್ಕೊಮ್ಮೆ ದಾನ ಮಾಡ್ಬಹುದು? 

ನಾಯಿಗಳು ಪ್ರತಿ 4-6 ವಾರಗಳಿಗೊಮ್ಮೆ, ಬೆಕ್ಕುಗಳು ಪ್ರತಿ 8-12 ವಾರಗಳಿಗೊಮ್ಮೆ ರಕ್ತ ದಾನಕ್ಕೆ ಅರ್ಹವಾಗಿವೆ.  

ಪಶುವೈದ್ಯಕೀಯ ರಕ್ತನಿಧಿಗಳು ಎಲ್ಲಿವೆ?

ಪಶುವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು, ಉಲ್ಲೇಖಿತ ಆಸ್ಪತ್ರೆಗಳು ಮತ್ತು ಪಾಲಿಕ್ಲಿನಿಕ್‌ಗಳು, ದೊಡ್ಡ ಪಶುವೈದ್ಯಕೀಯ ರೋಗನಿರ್ಣಯ ಕೇಂದ್ರಗಳು ಮತ್ತು ಸರ್ಕಾರದಿಂದ ನಿರ್ವಹಿಸಲ್ಪಡುವ ಬಹು-ವಿಶೇಷ ಪ್ರಾಣಿ ಆಸ್ಪತ್ರೆಗಳಲ್ಲಿ ಪಶುವೈದ್ಯಕೀಯ ರಕ್ತನಿಧಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಪಶುವೈದ್ಯಕೀಯ ರಕ್ತನಿಧಿಗಳು 24/7 ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. 

ಡಿಜಿಟಲ್ ತಂತ್ರಜ್ಞಾನ ಬಳಕೆ

* ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸಂಯೋಜಿತ ದಾನಿಗಳ ನೋಂದಣಿ ಮಾಡಲಾಗುತ್ತದೆ. ಇದು ಪ್ರಾಣಿಗಳ ಜಾತಿಗಳು, ತಳಿ, ಸ್ಥಳ ಮತ್ತು ರಕ್ತದ ವಿಧದ ಮಾಹಿತಿಯನ್ನು ಒಳಗೊಂಡಿರುತ್ತದೆ. 

* ರಕ್ತನಿಧಿಯಲ್ಲಿ ಘಟಕಗಳ ನಕ್ಷೆ, ನೈಜ-ಸಮಯದ ದಾಸ್ತಾನು, ನಿರ್ವಹಣಾ ವ್ಯವಸ್ಥೆಯ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. 

* ತುರ್ತು ಸಂದರ್ಭಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯಗಳು, ಆಸ್ಪತ್ರೆಗಳು ಮತ್ತು ದಾನಿಗಳನ್ನು ಸಂಪರ್ಕಿಸಲು ಸಹಾಯವಾಣಿ ಮತ್ತು ಆನ್‌ಲೈನ್ ಪೋರ್ಟಲ್ ವ್ಯವಸ್ಥೆ ಮಾಡಲಾಗುತ್ತದೆ.

* ಭವಿಷ್ಯದಲ್ಲಿ ದಾನ ಮಾಡುವ – ಸ್ವೀಕರಿಸುವವರ ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸುವ ಗುರಿ ಇದೆ. 

ಜಾನುವಾರುಗಳಿಂದ ಮಾಡಿದ ರಕ್ತದಾನಕ್ಕೆ ಹಣ ಪಡೆಯಬಹುದೇ?

ಸಾಕುಪ್ರಾಣಿಗಳ ಮಾಲೀಕರು ಅಥವಾ ಜಾನುವಾರು ಮಾಲೀಕರಿಗೆ ಪ್ರಾಣಿಗಳ ರಕ್ತದಾನಕ್ಕಾಗಿ ಹಣ ನೀಡಲಾಗುವುದಿಲ್ಲ. ಸಾಕುಪ್ರಾಣಿ ಮಾಲೀಕರು ಅಥವಾ ಜಾನುವಾರು ಸಾಕಣೆದಾರರಿಗೆ ಯಾವುದೇ ಹಣಕಾಸಿನ ಪ್ರೋತ್ಸಾಹವನ್ನು ನೀಡಬಾರದು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಪ್ರತಿ ದಾನಕ್ಕೂ ಮಾಲೀಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ.

Share This Article