ಹಾಸನ: ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದಗೌಡ ಅದ್ಯಾವಾಗ ಜ್ಯೋತಿಷಿಯಾದ್ರು ಗೊತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕುರಿತು ಭವಿಷ್ಯ ನುಡಿಯಲು ಸದಾನಂದಗೌಡ್ರು ಯಾವಾಗ ಜ್ಯೋತಿಷಿಯಾದ್ರು ಎಂದು ತಿರುಗೇಟು ನೀಡಿದರು. ಈಗ ಸದಾನಂದಗೌಡ್ರು ಸಂತೋಷವಾಗಿದ್ದಾರೆ. ಅವರು ಆನಂದವಾಗಿಯೇ ಇರಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ವಿರೋಧ ಪಕ್ಷ ಮಲಗಿದೆ ಎನ್ನುತ್ತಿರುವ ಸದಾನಂದಗೌಡ್ರು ಮೊದಲು ಎಚ್ಚರವಾಗಲಿ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಬಜೆಟ್ ಬಗ್ಗೆ ಕೇವಲ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಮ್ಮಿಶ್ರ ಸರ್ಕಾರ ಮಂಡಿಸಿರುವ ರಾಜ್ಯ ಬಜೆಟ್ ಅತ್ಯಂತ ಶಕ್ತಿಶಾಲಿಯಾಗಿದೆ. ರೈತರ ಬೆಳೆಸಾಲ ಮನ್ನಾ ಮಾಡಿರುವುದು ಕೆಲವು ಜಿಲ್ಲೆಗೆ ಸೀಮಿತವಾಗಿರದೆ ರಾಜ್ಯದ ಎಲ್ಲ ರೈತರಿಗೂ ಅನುಕೂಲವಾಗಲಿದೆ ಎಂದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನವಾಗಬಹುದು. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತೆ ಎಂದು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಿಡಿತ ಕಳಕೊಂಡಿದ್ದು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ ಅನ್ನೋದು ನಿಶ್ಚಿತ ಅಂತ ಡಿವಿಎಸ್ ರಾಜ್ಯ ಸರಕಾರದ ಬಗ್ಗೆ ಭವಿಷ್ಯ ನುಡಿದಿದ್ದರು.