ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!

Public TV
2 Min Read

ನವದೆಹಲಿ: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್. ಈಗ ವಾಟ್ಸಪ್ ಮೂಲಕವೇ ಹಣವನ್ನು ಆಪ್ತರಿಗೆ ಸೆಂಡ್ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿಯು ಭಾರತದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಮುಖಾಂತರ ಹಣ ವರ್ಗಾವಣೆ ಮಾಡುವ ವಿಶೇಷತೆಯನ್ನು ಆ್ಯಪ್‍ಗೆ ಸೇರಿಸಿದೆ.

ಈ ಹೊಸ ವಿಶೇಷತೆಯನ್ನು ಐಓಎಸ್ ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಈ ಹೊಸ ವಿಶೇಷತೆಯನ್ನು ವಾಟ್ಸಪ್ 2.18.21 ಐಓಎಸ್ ಮತ್ತು ಆಂಡ್ರಾಯ್ಡ್ಗೆ 2.18.41 ಆವೃತ್ತಿಯ ಆ್ಯಪ್ ಬಳಸುವ ಮಂದಿಗೆ ಸಿಕ್ಕಿದೆ.

ವಾಟ್ಸಪ್‍ನ ಈ ವಿಶೇಷತೆಯು ಚಾಟ್ ವಿಂಡೋ ನಲ್ಲಿ ಕಾಣಿಸಲಿದ್ದು, ಅಟಾಚ್ಮೆಂಟ್ ಮೆನುವಿನಲ್ಲಿ ಸಿಗುವ ಗ್ಯಾಲರಿ, ವಿಡಿಯೋ, ಡಾಕ್ಯುಮೆಂಟ್‍ಗಳ ಜೊತೆಯಲ್ಲಿ ಈ ವಿಶೇಷತೆ ಸಿಗುತ್ತದೆ. ಇದರಲ್ಲಿ ಹಣ ಪಾವತಿಸುವ ವಿಶೇಷತೆಯನ್ನು ಕ್ಲಿಕ್ ಮಾಡಿದರೆ, ವಿವಿಧ ಬ್ಯಾಂಕ್‍ಗಳ ಆಯ್ಕೆ ಮಾಡಬಹುದಾಗಿದೆ.

ನಮಗೆ ಬೇಕಾದ ಬ್ಯಾಂಕ್ ಅನ್ನು ಸೆಲೆಕ್ಟ್ ಮಾಡಿ ನಂತರ ಯುಪಿಐಗೆ ಕನೆಕ್ಟ್ ಮಾಡಬೇಕು. ತದನಂತರ ಹೊಸ ಯುಪಿಐ ಖಾತೆ ತೆರೆದು ಪಿನ್ ಸೆಟ್ ಮಾಡಿ, ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಹುದು. ಹಣ ಕಳುಹಿಸುವ ಹಾಗು ಹಣ ಪಡೆದು ಕೊಳ್ಳುವ ವ್ಯಕ್ತಿಗಳಿಬ್ಬರು ಈ ವಿಶೇಷತೆ ಬಳಸಬೇಕಾದರೆ ಆ್ಯಪ್ ಅಪ್‍ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿದ್ದರು. ಈ ವೇಳೆ ಈ ವೇಳೆ ಬುಸಿನೆಸ್ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತೀರಿ ಎನ್ನುವ ಪ್ರಶ್ನೆಗೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು.

2017ರ ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ `ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

ನವೆಂಬರ್ 8ರಂದು ಕೇಂದ್ರ ಸರ್ಕಾರ 1 ಸಾವಿರ ಮತ್ತು 500 ರೂ. ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಭಾರತದಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಈಗ ಈ ಕ್ಷೇತ್ರದತ್ತ ಕಣ್ಣುಹಾಕಿದೆ. ಈ ಸಂಬಂಧವಾಗಿ ವಾಟ್ಸಪ್ ಕಂಪೆನಿ ಈ ಹಿಂದೆ ಜಾಹಿರಾತು ಪ್ರಕಟಿಸಿ, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಭೀಮ್ ಆ್ಯಪ್ ಮತ್ತು ಆಧಾರ್ ನಂಬರ್ ಇವುಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ತಿಳಿಸಿತ್ತು.

2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

ವಾಟ್ಸಪ್ ಪ್ರಕಟಿಸಿದ್ದ ಜಾಹಿರಾತು

Share This Article
Leave a Comment

Leave a Reply

Your email address will not be published. Required fields are marked *