ಬಡವರಿಗೆ ಕಡಿಮೆ ದರದಲ್ಲಿ ಔಷಧಿ ನೀಡಿದರೆ ಏನು ಸಮಸ್ಯೆ – ಸರ್ಕಾರದ ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದು

1 Min Read

ಧಾರವಾಡ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷಧಿ (Jan Aushadhi) ಕೇಂದ್ರವನ್ನು ಬಂದ್‌ ಮಾಡುವ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರದ (Karnataka Government) ಆದೇಶಕ್ಕೆ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ಆದೇಶವನ್ನು ಧಾರವಾಡ ಹೈಕೋರ್ಟ್ (Dharawada High Court) ಪೀಠ ರದ್ದುಗೊಳಿಸಿ ಮಹತ್ವದ ಆದೇಶ ಪ್ರಕಟಿಸಿದೆ.

ಜನೌಷಧಿ ಅಂಗಡಿಯವರ ಲೀಸ್ ತಿಂಗಳು ಮುಗಿದ ಹಿನ್ನೆಲೆ ಅವರಿಗೆ ಸರ್ಕಾರಿ ಆಸ್ಪತ್ರೆ ಆವರಣದಿಂದ ಹೊರಗೆ ಔಷಧಿ ಅಂಗಡಿ ಇಡಲು ಸೂಚಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಜನೌಷಧಿ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಹಣ ಪಾವತಿಸಿ ಔಷಧಿ ತೆಗೆದುಕೊಳ್ಳುತ್ತಾರೆ.  ಹೀಗಾಗಿ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಎರಡು ಕಡೆಯ ವಾದ ಆಲಿಸಿದ ನ್ಯಾಯಾಲಯ, 120 ಚದರ ಅಡಿ ಜಾಗದಲ್ಲಿ ಜನೌಷಧಿ ಇಟ್ಟು ಬಡವರಿಗೆ ಕಡಿಮೆ ಹಣದಲ್ಲಿ ಔಷಧಿ ನೀಡಿದರೆ ಏನು ಸಮಸ್ಯೆ? ಜನೌಷಧಿ ಬಗ್ಗೆ ಯಾರಾದರೂ ದೂರು ಕೊಟ್ಟಿದ್ದಾರಾ? ಬಸ್ ಉಚಿತ ಮಾಡಿ ಎಂದು ತಮಗೆ ಯಾರು ಹೇಳಿದ್ದರು ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿತು. ಇದನ್ನೂ ಓದಿ:  ಬಾಗಲಕೋಟೆಯಲ್ಲಿ ಅಕ್ರಮ ಮಸೀದಿ ನಿರ್ಮಾಣ – ಹಿಂದೂ ಸಂಘಟನೆಗಳಿಂದ ಆಕ್ರೋಶ

 

ಈ ಪ್ರಕರಣ ನ್ಯಾಯಾಲಯಕ್ಕೆ ಬಾರಬಾರದಿತ್ತು. ಜನೌಷಧಿ ಅಂಗಡಿ ಇಡಲು ಅವಕಾಶ ಕೊಡದೇ ಇದ್ದರೆ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟು ಸರ್ಕಾರದ ಆದೇಶವನ್ನು ರದ್ದು ಮಾಡಿದೆ.

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಿತ್ತು. ಈ ನಿರ್ಧಾರವು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿದ್ದ ಈ ಕೇಂದ್ರಗಳು ಸ್ಥಗಿತಗೊಂಡರೆ, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.

Share This Article