ಏನಿದು ಗ್ರೇಟ್ ನಿಕೋಬಾರ್ ಯೋಜನೆ? – ಇದರ ಪ್ರಾಮುಖ್ಯತೆ ಏನು? 

Public TV
4 Min Read

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದ ಮೂಲೆ ಮೂಲೆಗಳಲ್ಲೂ ವಿವಿಧ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಅದೇ ರೀತಿ ನಿಕೋಬಾರ್‌ ದ್ವೀಪದಲ್ಲೂ ಕೇಂದ್ರ ಸರ್ಕಾರ  ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಯ ಭಾಗವಾಗಿ ಗ್ರೇಟ್‌ ನಿಕೋಬಾರ್‌ ಯೋಜನೆಗೆ (Great Nicobar Project) ಕೈ ಹಾಕಿದೆ. ಈ ಯೋಜನೆ ಉದ್ದೇಶ, ಪ್ರಯೋಜನ, ವೆಚ್ಚ ಹಾಗೂ ಇದಕ್ಕೆ ಕಾಂಗ್ರೆಸ್‌ ನಾಯಕರ ವಿರೋಧ ಏಕೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

ಗ್ರೇಟ್‌ ನಿಕೋಬಾರ್‌ ಯೋಜನೆ?
ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಯೋಜನೆ ಇದಾಗಿದೆ.  ಈ ಯೋಜನೆಯ ಭಾಗವಾಗಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಮತ್ತು ನಗರ ಸೌಲಭ್ಯಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. 

ಯೋಜನೆಗೆ ಎಷ್ಟು ವೆಚ್ಚವಾಗಲಿದೆ?
ಈ ಯೋಜನೆಯ ಒಟ್ಟು ವೆಚ್ಚ ಸುಮಾರು 81,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಅಭಿವೃದ್ಧಿಯಿಂದ ದ್ವೀಪವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತನೆಯಾಗಲಿದೆ. ಇದು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬುದು ಕೇಂದ್ರದ ಲೆಕ್ಕಾಚಾರ.

ಏನೆಲ್ಲ ಅಭಿವೃದ್ಧಿಯಾಗಲಿದೆ?
ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ (ICTT): ಇಲ್ಲಿ ಬೃಹದಾಕಾರದ ಬಂದರು ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಸರಕು ಸಾಗಾಟಕ್ಕೆ ಅನುಕೂಲವಾಗಲಿದೆ. ಬಂದರುಗಳು ಆರ್ಥಿಕ  ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. 

ಚೀನಾಗೆ ಪರ್ಯಾಯ ಬಂದರು?
ಚೀನಾ ದೇಶ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಪಾಕಿಸ್ತಾನದ ಗ್ವಾದರ್, ಹಂಬಂಟೋಟ ಮತ್ತು ಕ್ಯುಕ್ಪ್ಯು ಬಂದರುಗಳ ಮೇಲೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಗ್ರೇಟ್ ನಿಕೋಬಾರ್‌ನ ವಿಶ್ವ ದರ್ಜೆಯ ಭಾರತೀಯ ಬಂದರು ಪ್ರಾದೇಶಿಕ ಮತ್ತು ಜಾಗತಿಕ ಸಾಗಣೆಗೆ ಚೀನಾದ ಬಂದರುಗಳಿಗೆ ಪರ್ಯಾಯ ವ್ಯವಸ್ಥೆ ಆಗಲಿದೆ. 

ಇಂಡೋ-ಪೆಸಿಫಿಕ್‌ನಲ್ಲಿ ಲಾಜಿಸ್ಟಿಕ್ಸ್ ಕೇಂದ್ರವಾಗಿ ಭಾರತಕ್ಕೆ ಮಹತ್ವದ ಸ್ಥಾನ ಒದಗಿಸಲಿದೆ. ಈ ಪ್ರದೇಶದಲ್ಲಿ ಏನಾದರೂ ಗಡಿ ಉದ್ವಿಗ್ನತೆ ಉಂಟಾದರೆ ಈ ಬಂದರು ಸಹಕಾರಿಯಾಗಲಿದೆ. 

ಮಿಲಿಟರಿ & ನೌಕಾ ಪ್ರಯೋಜನಗಳು
ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನೌಕಾಪಡೆ ಮತ್ತು ವಾಯುಪಡೆಯ ತ್ವರಿತ ನಿಯೋಜನೆಗೆ ಇದು ಸಹಕಾರಿಯಾಗಲಿದೆ. ಪ್ರಮುಖ ಕಡಲ ವಲಯವಾದ ಅಂಡಮಾನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ಮೇಲೆ ಭಾರತದ ಕಣ್ಗಾವಲನ್ನು ಇದು ಬಲಪಡಿಸುತ್ತದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ನಾಗರಿಕ ಮತ್ತು ರಕ್ಷಣೆಯ ಸಲುವಾಗಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಇಲ್ಲಿ ನಿರ್ಧರಿಸಲಾಗಿದೆ. 2050ರ ವೇಳೆಗೆ ಗಂಟೆಗೆ ಸುಮಾರು 4,000 ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. 

ನಗರ ಅಭಿವೃದ್ಧಿ
ಈ ಯೋಜನೆಯಡಿ ಗ್ರೇಟ್‌ ನಿಕೋಬಾರ್‌ 300,000 ರಿಂದ 400,000 ಜನರಿಗೆ ವಸತಿ, ವಾಣಿಜ್ಯ ಮತ್ತು ಸಾಂಸ್ಥಿಕ ಸ್ಥಳಗಳನ್ನು ಒಳಗೊಂಡ ಸುಸಜ್ಜಿತ ನಗರದ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದೆ. 

ವಿದ್ಯುತ್ ಸ್ಥಾವರ & ಮೂಲಸೌಕರ್ಯ
ರಸ್ತೆಗಳು, ನೀರು ಸರಬರಾಜು ಮತ್ತು ಮೂಲಸೌಕರ್ಯಗಳೊಂದಿಗೆ 450 MVA ಅನಿಲ ಮತ್ತು ಸೌರಶಕ್ತಿ ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಇದು ಸಾಧ್ಯವಾದರೆ ಭಾರತದ ಅದ್ಭುತ ಸ್ಮಾರ್ಟ್‌ ನಗರವೊಂದು ತಲೆ ಎತ್ತುವ ನಿರೀಕ್ಷೆ ಇದೆ. 

ವಿಪತ್ತು ನಿರ್ವಹಣೆ & ಪ್ರಾದೇಶಿಕ ಭದ್ರತೆ: 2004ರ ಸುನಾಮಿಯು ಈ ಪ್ರದೇಶದಲ್ಲಿನ ಮೂಲಸೌಕರ್ಯಗಳ ದುರ್ಬಲತೆಯನ್ನು ಎತ್ತಿ ತೋರಿಸಿತ್ತು. ಗ್ರೇಟ್ ನಿಕೋಬಾರ್‌ನಲ್ಲಿ ನಿರ್ಮಾಣಗೊಳ್ಳುವ ಆಧುನಿಕ ಬಂದರು ಮತ್ತು ವಿಮಾನ ನಿಲ್ದಾಣ ತುರ್ತು ಸಂದರ್ಭದಲ್ಲಿ ನೆರವಿಗೆ ಬಹಳ ಸಹಕಾರಿಯಾಗಲಿದೆ. 

ವಿರೋಧ ಪಕ್ಷದ ಟೀಕೆ ಯಾಕೆ? 
ಈ ಯೋಜನೆ ಪರಿಸರ ಮತ್ತು ಸಾಮಾಜಿಕ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಆ ಕಾರಣಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ. 

ದೊಡ್ಡ ಪ್ರಮಾಣದಲ್ಲಿ ಕಾಡುಗಳನ್ನು ಕಡಿಯುವುದು (8 ಲಕ್ಷಕ್ಕೂ ಹೆಚ್ಚು ಮರಗಳು) ಮತ್ತು ಅಪರೂಪದ ಜೀವಿಗಳ ಪ್ರಭೇದಗಳಿಗೆ (ನಿಕೋಬಾರ್ ಮೆಗಾಪೋಡ್ ಮತ್ತು ಲೆದರ್‌ಬ್ಯಾಕ್ ಆಮೆಗಳಂತಹ ಜಲಚರಗಳು) ಅಳಿವಿಗೆ ಈ ಯೋಜನೆ ಕಾರಣವಾಗಬಹುದು ಎಂದು ವಿರೋಧ ಪಕ್ಷದ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ಸಂಸದ ಮತ್ತು ಮಾಜಿ ಪರಿಸರ ಸಚಿವ ಜೈರಾಮ್ ರಮೇಶ್ ಈ ಬಗ್ಗೆ ಪ್ರತಿಕ್ರಿಯಿಸಿ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 8.5 ರಿಂದ  58 ಲಕ್ಷ ಮರಗಳನ್ನು ಕಡಿಯಲಾಗುತ್ತದೆ ಎಂದು ಹೇಳುತ್ತಿದೆ.  ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಅಗತ್ಯ ಎಂದಿದ್ದಾರೆ. 

ಸ್ಥಳೀಯ ಸಮುದಾಯಗಳ ಮೇಲೆ ಪರಿಣಾಮ
ಶೋಂಪೆನ್ಸ್ ಮತ್ತು ನಿಕೋಬಾರೀಸ್ ಬುಡಕಟ್ಟು ಜನಾಂಗದವರ ಸ್ಥಳಾಂತರ ಮತ್ತು ಸಾಂಸ್ಕೃತಿಕ ಪರಿಣಾಮಗಳ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಈ ಬುಡಕಟ್ಟು ಜನಾಂಗಗಳು ವಿಶೇಷವಾಗಿ ದುರ್ಬಲವಾಗಿವೆ. 

ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಮ್ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡುವಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ (FRA) ಉಲ್ಲಂಘನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ 2004ರ ಸುನಾಮಿಯ ಸಮಯದಲ್ಲಿ ಬುಡಕಟ್ಟು ಸಮುದಾಯದ ಜನರ ಸ್ಥಳಾಂತರದ ಬಳಿಕ ಅವರ ಪೂರ್ವಜರ ಜಾಗಕ್ಕೆ ಮರಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಯು ಅವರ ಜೀವನ ವಿಧಾನಕ್ಕೆ ಅಪಾಯವನ್ನುಂಟುಮಾಡುತ್ತದೆ. ಇದು ಅವರ ಅಳಿವಿಗೆ ಕಾರಣವಾಗಲಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಯೋಜನೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಸಹ ಖಂಡಿಸಿದ್ದಾರೆ. ಇದು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನ ಎಂದು ಅವರು ಆರೋಪಿಸಿದ್ದಾರೆ. 

Share This Article