ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

Public TV
2 Min Read

ರಾಮನಗರ: ಶ್ರೀಗಳು ಹೇಳಿದ ಮಾತು ನಿಜ ಆಗುತ್ತದೆ. ಪವಿತ್ರವಾದ ನಾಲಿಗೆಯಲ್ಲಿ ಈ ವಿಚಾರವನ್ನು ನುಡಿದಿದ್ದಾರೆ. ಭಕ್ತಿಯಿಂದ ದೇವರ ಧ್ಯಾನ ಮಾಡುವ ಶ್ರೀಗಳು ಇದನ್ನ ಹೇಳಿದ್ದಾರೆ. ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನ ಹೇಳಿಸಿರಬಹುದು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain)ಹೇಳಿದ್ದಾರೆ.

ಡಿಸಿಎಂ ಡಿಕೆಶಿಗೆ (DK Shivakumar) ಉನ್ನತ ಸ್ಥಾನ ಸಿಗಬೇಕು ಎಂಬ ರಂಭಾಪುರಿ ಶ್ರೀ (Rambhapuri Shri) ಹೇಳಿಕೆ ವಿಚಾರ ಕುರಿತು ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾಕಷ್ಟು ಶ್ರೀಗಳು, ಕಾರ್ಯಕರ್ತರು ಇದನ್ನ ಹೇಳುತ್ತಿದ್ದಾರೆ. ನಾನು ಕೂಡಾ ಹೇಳಿದ್ದೆ, ಅದಕ್ಕೆ ಈಗಲೂ ಬದ್ಧ. ಶರಣರು ಭಕ್ತಿಯಿಂದ ಅವರ ಬಾಯಲ್ಲಿ ನುಡಿದಿರೋದು ಫಲ ಕೊಡುತ್ತದೆ. ಕೋಟಿಜನ ಹೇಳೋದು ಒಂದೇ, ಶ್ರೀಗಳು ಹೇಳೋದು ಒಂದೇ. ಭಗವಂತ ಎಲ್ಲರ ಮಾತನ್ನ ಕೇಳಲು ಸಾಧ್ಯವಿಲ್ಲ, ಅವರಿಗೆ ಹತ್ತಿವಿರುವವರ ಪ್ರಾರ್ಥನೆ ಕೇಳ್ತಾನೆ. ಹಾಗಾಗಿ ಅವರ ನಾಲಿಗೆಯಲ್ಲಿ ಈ ಮಾತು ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭಾಗಶಃ ಭರ್ತಿಯಾದ ತುಂಗಭದ್ರಾ ಜಲಾಶಯ

ಇನ್ನೂ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಒಬಿಸಿ ಸದಸ್ಯ ಸ್ಥಾನ ನೀಡಿರೋ ವಿಚಾರ ಕುರಿತು ಮಾತನಾಡಿ, ಸಿದ್ದರಾಮಯ್ಯಗೆ ಹಿಂದುಳಿದ ವರ್ಗದ ಮೇಲೆ ಬಹಳ ಪ್ರೀತಿ. ಅಲ್ಪಸಂಖ್ಯಾತರ ಸಮುದಾಯದ ಸೇರಿ ಸಣ್ಣಪುಟ್ಟ ಸಮುದಾಯಕ್ಕೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಆ ಜಾಗದಲ್ಲಿ ಅಂತವರಿದ್ದರೆ ಮಾತ್ರ ಹಿಂದುಳಿದ ವರ್ಗಕ್ಕೆ ಅನುಕೂಲ. ಸಿದ್ದರಾಮಯ್ಯನರಿಗೆ ಬಹಳ ಅನುಭವ ಇದೆ, ದಾಖಲೆ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯನ್ನ ಎಐಸಿಸಿ ಆಯ್ಕೆ ಮಾಡಿದೆ. ಇದಕ್ಕೆ ಬಿಜೆಪಿ ನಾಯಕರು ಟೀಕೆ ಮಾಡೋದು ಸಹಜ. ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡೋದು. ಅಧಿಕಾರ ಇದ್ದಾಗ ಅವರು ಅಭಿವೃದ್ಧಿ ಮಾಡಲಿಲ್ಲ, ಈಗ ಕೇವಲ ಟೀಕೆ, ಟಿಪ್ಪಣಿ ಮಾಡುತ್ತಾರೆ. ಅವರ ಕೆಲಸ ಅವರು ಮಾಡಲಿ. ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು. ಹಿಂದುಳಿದ ವರ್ಗದ ಬಗ್ಗೆ ವಿಶೇಷ ಕಾಳಜಿ ಹೊಂದಿರುವವರು. ಅವರಿಗೆ ಎರಡೂ ಸ್ಥಾನವನ್ನ ನಿಭಾಯಿಸುವ ಸಾಮರ್ಥ್ಯ ಇದೆ ಎಂದರು. ಇದನ್ನೂ ಓದಿ: ಸ್ವಾಮೀಜಿಗಳು ಹೇಳಿಕೆ‌ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ – ರಂಭಾಪುರಿ ಶ್ರೀ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ

Share This Article