ಮೋದಿ ಸರ್ಕಾರದ ಕ್ರಾಂತಿಕಾರಿ ನಡೆ – ರಾಜಕಾರಣ ಶುದ್ಧೀಕರಣಕ್ಕೆ ಹೊಸ ಮಸೂದೆ!

Public TV
6 Min Read

ರಾಜಕಾರಣದಲ್ಲಿ ಶುದ್ಧೀಕರಣ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳನ್ನು ಹುದ್ದೆಯಿಂದ ಕೆಳಗಿಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಇದು ರಾಷ್ಟ್ರ ರಾಜಕಾರಣದಲ್ಲಿ ಒಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಇಂದು ವೇಳೆ ಇದು ಕಾನೂನಾಗಿ ಜಾರಿಯಾದ್ರೆ, ರಾಷ್ಟ್ರ ರಾಜಕಾರಣವಾಗಲಿದೆ ಇನ್ನಷ್ಟು ಶುದ್ಧೀಕರಣ…

ಆದರೆ ವಿಪಕ್ಷಗಳು ಕೆಲ ಕಾನೂನು ತಜ್ಞರು ಈ ಮಸೂದೆಯನ್ನ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಮಸೂದೆಗಳು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತಿವೆ. ಅಲ್ಲದೆ, ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯನ್ನು ರೂಪಿಸಿರುವ ಮೂಲ ಪರಿಕಲ್ಪನೆಗಳಿಗೆ ಕೂಡ ಇವು ವಿರುದ್ಧವಾಗಿವೆ. ಈ ಮಸೂದೆಗಳನ್ನು ಬಹಳ ತಪ್ಪು ಗ್ರಹಿಕೆಯಿಂದ ರೂಪಿಸಲಾಗಿದೆ. ಮಸೂದೆಗಳ ಹಿಂದಿನ ಆಶಯವು ತಪ್ಪಾಗಿದೆ ಹಾಗೂ ಇವು ಕಾನೂನಿನ ರೂಪ ಪಡೆದು ಜಾರಿಗೆ ಬಂದಲ್ಲಿ ಅನುಷ್ಠಾನದಲ್ಲಿ ಅನ್ಯಾಯ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ವಿಪಕ್ಷ ನಾಯಕರು. ಅತ್ತ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರು ಕನಿಷ್ಠ ಐದು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗುವ ಅಪರಾಧ ಎಸಗಿದ ಆರೋಪದ ಅಡಿಯಲ್ಲಿ ಬಂಧಿತರಾಗಿ, ಸತತ 30 ದಿನಗಳವರೆಗೆ ಜೈಲಿನಲ್ಲಿ ಇದ್ದರೆ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವ ಈ ಮಸೂದೆಗಳು, ಅವರ ವಿರುದ್ಧದ ಆರೋಪಗಳು ಸಾಬೀತಾಗುವ ಮುನ್ನವೇ ಅವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಮಾಡಿಕೊಡುತ್ತವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಸದ್ಯ ಮಸೂದೆಗಳನ್ನು ಈಗ ಸಂಸತ್ತಿನ ಜಂಟಿ ಸಮಿತಿಯ ಪರಾಮರ್ಶೆಗೆ ರವಾನಿಸಲಾಗಿದೆ. ಮಸೂದೆಗಳನ್ನು ಆದಷ್ಟು ಬೇಗ ಕಾನೂನಿನ ರೂಪದಲ್ಲಿ ಜಾರಿಗೆ ತರುವ ಉದ್ದೇಶದಿಂದ, ಸಂಸತ್ತಿನ ಮುಂದಿನ ಅಧಿವೇಶನಕ್ಕೆ ಮೊದಲು ಮಸೂದೆಯ ಬಗ್ಗೆ ಅಭಿಪ್ರಾಯ ನೀಡಬೇಕು ಎಂದು ಸಮಿತಿಗೆ ತಿಳಿಸಲಾಗಿದೆ.

ಇದು ಕಾನೂನಾಗಿ ಪರಿವರ್ತನೆಯಾದ ಬಳಿಕ ಬಂಧನಕ್ಕೊಳಗಾದ 30 ದಿನಗಳೊಳಗೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾದ್ರೆ ಏನಿದು ಪಿಎಂ, ಸಿಎಂ, ಸಚಿವರ ಪದಚ್ಯುತಿ ಮಸೂದೆ? ಇದು ಯಾವ ರೀತಿ ಬದಲಾವಣೆಯನ್ನು ತರುತ್ತದೆ? ಇದರ ಹಿಂದಿನ ಉದ್ದೇಶ ಏನು? ಈ ಮಸೂದೆಯಿಂದ ಉಂಟಾಗುವ ಸವಾಲುಗಳೇನು? ಎಂಬುದನ್ನು ತಿಳಿಯೋಣ… ಅದಕ್ಕೂ ಮುನ್ನ ಈ ಮಸೂದೆ ರಚಿಸಲು ಮೂಲ ಕಾರಣ ಏನು ಎಂಬುದನ್ನು ತಿಳಿಯೋಣ.

ಹೊಸ ಮಸೂದೆ ತರಲು ಕಾರಣ ಏನು?
ಈ ಹಿಂದೆ ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮತ್ತು ತಮಿಳುನಾಡಿನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಂತವರು ಗಂಭೀರ ಆರೋಪಗಳಲ್ಲಿ ಅರೆಸ್ಟ್‌ ಆಗಿ ಜೈಲಿನಲ್ಲಿದ್ದರು. ಈ ವೇಳೆ ವಿಕ್ಷಗಳು ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದ್ದವು. ಆದ್ರೆ ತಿಂಗಳಾನುಗಟ್ಟಲೆ ಜೈಲು ಸೇರಿದ್ದ ಹೊರತಾಗಿಯೂ ಹುದ್ದೆಗೆ ರಾಜೀನಾಮೆ ನೀಡದೇ ಹುದ್ದೆಯಲ್ಲಿ ಮುಂದುವರಿದಿದ್ದರು. ಮದ್ಯನೀತಿ ಹಗರಣದಲ್ಲಿ ಜೈಲು ಸೇರಿದ್ದ ಕೇಜ್ರಿವಾಲ್‌ 6 ತಿಂಗಳ ಕಾಲ ಜೈಲಿನಿಂದಲೇ ಅಧಿಕಾರ ನಡೆಸಿದ್ದರು, ಆದೇಶಗಳನ್ನ ಪಾಸ್‌ ಮಾಡಿದ್ದರು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸುವುದನ್ನು ತಡೆಯಲು ಹಾಗೂ ಜನರ ಆಯ್ಕೆಯ ವಿಶ್ವಾಸ ಉಳಿಸಿಕೊಳ್ಳುವ ಉದ್ದೇಶದಿಂದ ಈ ಮಸೂದೆಯನ್ನ ಪರಿಚಯಿಸಲಾಗಿದೆ.

ರಾಹುಲ್‌ ಗಾಂಧಿ ಪ್ರಕರಣದಲ್ಲಿ ಏನಾಗಿತ್ತು?
2019ರ ಲೋಕಸಭಾ ಚುನಾವಣೆ ವೇಳೆ ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣ ಪ್ರಕಾರ ಸಂಸತ್‌ ಸದಸ್ಯತ್ವವನ್ನೂ ರದ್ದುಗೊಳಿಸಲಾಗಿತ್ತು. ಇನ್ನೇನು ಜೈಲು ಸೇರುತ್ತಾರೆ ಎಂದೇ ಭಾವಿಸಲಾಗಿತ್ತು. ಅಷ್ಟರಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯತ್ವ ಪೀಠ ತಡೆ ನೀಡಿತ್ತು. ಲೋಕಸಭೆ ಸದಸ್ಯತ್ವ ಮರುಸ್ಥಾಪನೆಗೊಂಡಿತು. ಆದ್ರೆ ಪರಿಚಯಿಸಲಾದ ಪದಚ್ಯುತಿ ಮಸೂದೆಯಲ್ಲಿ 5 ವರ್ಷ ಶಿಕ್ಷೆಗೆ ಗುರಿಯಾಗುವ ಅಪರಾಧದಲ್ಲಿ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಕುರ್ಚಿ ಕಳೆದುಕೊಳ್ಳಲಿದ್ದಾರೆ.

ಆ ಮೂರು ಮಸೂದೆಗಳು ಯಾವುವು?
* ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025
* ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ
* ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ- 2025

ಯಾರ‍್ಯಾರಿಗೆ ಅನ್ವಯ?
* ಭಾರತದ ಪ್ರಧಾನ ಮಂತ್ರಿ
* ರಾಜ್ಯಗಳ & ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು
* ಕೇಂದ್ರ ಸಚಿವರು
* ರಾಜ್ಯ & ಕೇಂದ್ರಾಡಳಿತ ಪ್ರದೇಶಗಳ ಸಚಿವರು

ಪದಚ್ಯುತಿಗೆ ಕಾರಣ ಏನು?
* ಕನಿಷ್ಠ 5 ವರ್ಷ, ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಅರ್ಹವಾದ ಗಂಭೀರ ಅಪರಾಧದ ಆರೋಪದ ಮೇಲೆ ಬಂಧನ.
* ಸತತವಾಗಿ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರುವುದು.

ಮಸೂದೆಯಲ್ಲಿ ಏನಿದೆ?
* ಗಂಭೀರ ಸ್ವರೂಪದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದಾಗ ಅಂಥಹವರನ್ನು ಹುದ್ದೆಗಳಿಂದ ಪದಚ್ಯುತಿಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ.
* 30 ದಿನಗಳ ಕಾಲ ನಿರಂತರ ಬಂಧನದಲ್ಲಿದ್ದವರನ್ನ 31ನೇ ದಿನ ಪದಚ್ಯುತಿಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ.
* ಬಂಧನದಿಂದ ಬಿಡುಗಡೆ ಆದವರನ್ನ ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ನೇಮಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
* ಇದಕ್ಕಾಗಿ ಸಂವಿಧಾನದ 75ನೇ ವಿಧಿಗೆ ಸೆಕ್ಷನ್ 5(ಎ) ಅನ್ನು ಸೇರ್ಪಡೆ ಮಾಡಲಾಗುತ್ತಿದೆ.
* ಪ್ರಧಾನಿಯು, ಶಿಫಾರಸು ಮಾಡದಿದ್ದರೂ ಅಂಥಹ ಸಚಿವರು 31ನೇ ದಿನದಂದು ಅಧಿಕಾರ ಕಳೆದುಕೊಳ್ಳುತ್ತಾರೆ.
* ಇದೇ ನಿಯಮ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅನ್ವಯಿಸಲಿದೆ.
* ರಾಜ್ಯಗಳಲ್ಲಿ ರಾಜ್ಯಪಾಲರು ಪದಚ್ಯುತಗೊಳಿಸುವ ಅಧಿಕಾರ ಹೊಂದಿರುತ್ತಾರೆ.
* ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ.
* ಹಾಲಿ ಇರುವ ನಿಯಮಗಳ ಅನ್ವಯ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ತಮ್ಮ ಜನಪ್ರತಿನಿಧಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ. ಜೊತೆಗೆ ಶಿಕ್ಷೆ ಮುಗಿದ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.

ಪಿಎಂ, ಸಿಎಂಗಳನ್ನ ಕೆಳಗಿಳಿಸೋದು ಹೇಗೆ?
ಈ ಮಸೂದೆಯ ಅನ್ವಯ ನೋಡಿದ್ರೆ, ಪ್ರಧಾನ ಮಂತ್ರಿಯವರೇ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ, ಅವರು 31ನೇ ದಿನದೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ, 31ನೇ ದಿನದ ನಂತರ ಅವರ ಹುದ್ದೆಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ.
ಅದೇ ರೀತಿ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಸತತ 30 ದಿನ ಜೈಲಿನಲ್ಲಿದ್ದರೆ, 31ನೇ ದಿನದೊಳಗೆ ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ, ಅವರ ಪದವಿಯೂ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ಅದೇ ರೀತಿ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಸತತ 30 ದಿನ ಜೈಲಿನಲ್ಲಿದ್ದರೆ, 31ನೇ ದಿನದೊಳಗೆ ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೆ, ಅವರ ಪದವಿಯೂ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ.

ಸಚಿವರ ವಿಷಯದಲ್ಲಿ ಪ್ರಕ್ರಿಯೆ ಹೇಗೆ?
ಸಚಿವರ ವಿಷಯದಲ್ಲಿ ಕೇಂದ್ರ ಸಚಿವರಾಗಿದ್ದರೆ, ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅವರನ್ನು ಪದಚ್ಯುತಿಗೊಳಿಸುತ್ತಾರೆ. ಒಂದು ವೇಳೆ, 30 ದಿನ ಕಳೆದರೂ ಪ್ರಧಾನ ಮಂತ್ರಿಯವರು ಸಲಹೆ ನೀಡದಿದ್ದರೆ, 31ನೇ ದಿನದಂದು ಆ ಸಚಿವರ ಹುದ್ದೆಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ರಾಜ್ಯದಲ್ಲಿ ಸಿಎಂ ಸಲಹೆ ಮೇರೆಗೆ ರಾಜ್ಯಪಾಲರು ಅವರನ್ನು ಪದಚ್ಯುತಗೊಳಿಸುತ್ತಾರೆ. ಸಿಎಂ ಸಲಹೆ ನೀಡದಿದ್ದರೆ, 31ನೇ ದಿನ ಆಟೋಮ್ಯಾಟಿಕ್‌ ಆಗಿ ಅವರ ಪದವಿ ರದ್ದಾಗುತ್ತದೆ.

ಒಟ್ಟಿನಲ್ಲಿ ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಂಡಿದೆ. ಈ ಮಸೂದೆಗಳಲ್ಲಿ ಸಾರ್ವಜನಿಕ ಹಿತ ಅಡಗಿದೆ, ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕರಾಗಿ ಹಾಗೂ ಅನುಮಾನಗಳಿಗೆ ಅತೀತರಾಗಿ ಇರಬೇಕಾದ್ದರ ಅಗತ್ಯ ಇದೆ ಎಂದು ಹೇಳಿದೆ. ಆದ್ರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಗಳನ್ನು ಗಮನಿಸಿ ಹೇಳುವುದಾದ್ರೆ, ನೈತಿಕ ನೆಲೆಗಟ್ಟಿನ ಈ ವಾದಗಳು ರಾಜಕೀಯ ವಿರೋಧಿಗಳ ವಿರುದ್ಧ ಕ್ರಮ ಜರುಗಿಸುವುದಕ್ಕೆ ಒಂದು ನೆಪವಾಗಿ ಬರುತ್ತವೆ. ಅಷ್ಟೇ. ಕಾನೂನು ಪ್ರಕ್ರಿಯೆಗಳ ನಿಧಾನಗತಿ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದನ್ನು ಗಮನಿಸಿ ಕೇಂದ್ರ ಸರ್ಕಾರವು ತನ್ನ ವಿರೋಧಿಗಳ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವುದಕ್ಕೆ ಈ ಹೆಜ್ಜೆ ಇರಿಸಿರಬಹುದು. ಈ ಮಸೂದೆಗಳು ಭ್ರಷ್ಟಾಚಾರವನ್ನು ಕೊನೆಗೊಳಿಸುವುದಿಲ್ಲ, ಇವು ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುತ್ತವೆ ಅನ್ನೋದು ಕಾನೂನು ತಜ್ಞರು ಹಾಗೂ ವಿಪಕ್ಷಗಳ ವಾದ.

Share This Article