ಅಂದು ಜಯಾ ಜೈಲಿಗೆ, ಇಂದು ಸಂಕಷ್ಟದಲ್ಲಿ ಸೋನಿಯಾ, ರಾಹುಲ್‌ – ಇದು ಸ್ವಾಮಿ ದೂರಿನ ಕರಾಮತ್ತು

Public TV
4 Min Read

ಸುಬ್ರಮಣಿಯನ್‌ ಸ್ವಾಮಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ತಮಿಳುನಾಡಿನ ನಾಯಕಿ ಜಯಲಲಿತಾ ಅವರನ್ನೇ ಜೈಲಿಗೆ ಕಳುಹಿಸಿದ್ದ ಸುಬ್ರಮಣಿಯನ್‌ ಸ್ವಾಮಿ ನೀಡಿದ ದೂರು ಈಗ ಕಾಂಗ್ರೆಸ್‌ಗೆ ಸಂಕಷ್ಟ ತಂದಿದೆ. ಎಜಿಎಲ್‌ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುಬ್ರಮಣಿಯನ್‌ ಸ್ವಾಮಿ ನೀಡಿದ ಹಿನ್ನೆಲೆಯಲ್ಲಿ ಇಡಿ ಈಗ ರಾಹುಲ್‌ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದೆ. ಹೀಗಾಗಿ ಇಲ್ಲಿ ಏನಿದು ಎಜೆಎಲ್‌ ಪ್ರಕರಣ? ಕಾಂಗ್ರೆಸ್‌ ನಾಯಕರ ಮೇಲಿರುವ ಆರೋಪ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಏನಿದು ಪ್ರಕರಣ?
1937ರಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರೂ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಹೆಸರಿನಲ್ಲಿ ಕಂಪನಿಯನ್ನು ಆರಂಭಿಸಿತು. 1938ರಲ್ಲಿ ನೆಹರೂ ನೇತೃತ್ವದಲ್ಲಿ ಎಜೆಎಲ್‌ ಕಂಪನಿ ಇಂಗ್ಲಿಷ್‌ ಭಾಷೆಯ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಆರಂಭಿಸಿತು.ಇದಾದ ಬಳಿಕ ನವಜೀವನ್‌ (ಹಿಂದಿ) ಮತ್ತು ಕ್ವಾಮಿ ಆವಾಜ್‌ (ಉರ್ದು) ಪತ್ರಿಕೆಗಳನ್ನು ಹೊರತಂದಿತ್ತು.

ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎಜೆಎಲ್‌ ಕಂಪನಿಗೆ ಸಾಕಷ್ಟು ಪ್ರಮಾಣದಲ್ಲಿ ದೇಣಿಗೆ ಹರಿದುಬಂದಿತ್ತು. ಅಷ್ಟೇ ಅಲ್ಲದೇ ನೆಹರೂ ಅವರು ದೇಶದ ವಿವಿಧ ಭಾಗದಲ್ಲಿ ಜಮೀನನ್ನು ಮಂಜೂರು ಮಾಡಿದ್ದರು.

ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವೈಫಲ್ಯ, ಜಾಹೀರಾತು ಆದಾಯದ ಕೊರತೆ, ಆರ್ಥಿಕ ಸಂಕಷ್ಟ ಇನ್ನಿತರ ಕಾರಣದಿಂದ 2007ರ ಏಪ್ರಿಲ್‌ 1ರಂದು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಲಾಯಿತು. ಹಾಗೇ ನವಜೀವನ್‌, ಕ್ವಾಮಿ ಆವಾಜ್‌ ಪತ್ರಿಕೆಗಳನ್ನು ನಿಲ್ಲಿಸಲಾಯಿತು.

ಯುಪಿಎ ಎರಡನೇ ಅವಧಿಯ ಸರ್ಕಾರದ ಅವಧಿಯ ವೇಳೆ 2011ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ಶೇ.38ರಷ್ಟು ಷೇರು ಹೂಡಿಕೆ ಮಾಡಿ ಯಂಗ್ ಇಂಡಿಯಾ ಲಿಮಿಟೆಡ್‌ (ವೈಐಎಲ್‌) ಹೆಸರಿನಲ್ಲಿ ಕಂಪನಿ ಆರಂಭಿಸಿದರು. ಸೋನಿಯಾ, ರಾಹುಲ್ ಅಲ್ಲದೇ ಆಸ್ಕರ್ ಫರ್ನಾಂಡಿಸ್‌ ಮತ್ತು ಮೋತಿಲಾಲ್‌ ವೋರಾ ಈ ಕಂಪನಿಯ ಆಡಳಿತ ಮಂಡಳಿ ಸೇರಿಕೊಂಡರು. ಈ ಪೈಕಿ ವೋರಾ ಮತ್ತು ಫರ್ನಾಂಡಿಸ್‌ ತಲಾ ಶೇ. 24ರಷ್ಟು ಷೇರುಗಳನ್ನು ಹೊಂದಿದ್ದರು.

ಹಣಕಾಸು ನಷ್ಟದಲ್ಲಿದ್ದ ಎಜೆಎಲ್‌ ಕಂಪನಿಯನ್ನು 90.21 ಕೋಟಿ ರೂ. ಮೊತ್ತಕ್ಕೆ ವೈಐಎಲ್‌ ಕಂಪನಿ ಖರೀದಿ ಮಾಡಿತು. 90 ಕೋಟಿ ಪೈಕಿ 50 ಲಕ್ಷ ಮೊತ್ತವನ್ನು ಕಾಂಗ್ರೆಸ್‌ ತನ್ನ ಖಜಾನೆಯಿಂದಲೇ ವರ್ಗಾಯಿಸಿದೆ. ಎಜೆಎಲ್‌ ಮಾಲೀಕತ್ವದ ಹೆರಾಲ್ಡ್‌ ಹೌಸ್‌ನ ನವೀಕರಣಕ್ಕೆ ವೈಐಎಲ್‌ 1 ಕೋಟಿ ರೂ. ನೆರವು ನೀಡಿದೆ.

ಆರೋಪ ಏನು?
ಎಜೆಎಲ್ ಕಂಪನಿ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ಆಸ್ತಿಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಆಸ್ತಿಯನ್ನು ಹೊಂದಿರುವ ಕಂಪನಿಯನ್ನು ಕೇವಲ 90 ಕೋಟಿ ರೂ.ಗೆ ಖರೀದಿಸಿದ್ದು ಹೇಗೆ ಎನ್ನುವುದು ಮೊದಲ ಪ್ರಶ್ನೆ. ಅಷ್ಟೇ ಅಲ್ಲದೇ ಎಜೆಎಲ್‌ ಕಂಪನಿಯನ್ನು ಆರಂಭಿಸಿದವರು ಜವಾಹರ ಲಾಲ್‌ ನೆಹರೂ. ಕಾಂಗ್ರೆಸ್‌ ಪಕ್ಷದ ನಾಯಕರೇ ಆರಂಭಿಸಿದ ಕಂಪನಿಗೆ ಕಾಂಗ್ರೆಸ್ ಪಕ್ಷದಿಂದಲೇ ಹಣವನ್ನು ವರ್ಗಾಯಿಸಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.

ಸುಬ್ರಮಣಿಯನ್‌ ಸ್ವಾಮಿ ದೂರು
ಎಜೆಎಲ್‌ನ ಖರೀದಿ ವ್ಯವಹಾರದಲ್ಲಿ ಭಾರೀ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012ರ ಜೂನ್‌ನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್‌ ಮುಖಂಡ ಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್‌, ಪತ್ರಕರ್ತ ಸುಮನ್ ದುಬೆ, ದೂರಸಂಪರ್ಕ ಎಂಜಿನಿಯರ್‌ ಸ್ಯಾಮ್‌ ಪಿತ್ರೊಡ ಮತ್ತು ಯಂಗ್ ಇಂಡಿಯಾ ಲಿಮಿಟೆಡ್‌ ಕಂಪನಿಯನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ. ಇವರಲ್ಲಿ ಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್‌ ನಿಧನರಾಗಿದ್ದಾರೆ.

ಎಜೆಎಲ್‌ ಕಂಪನಿಯ ಒಟ್ಟು ಆಸ್ತಿ ಹಾಗೂ ಅದರ ಖರೀದಿ ವ್ಯವಹಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಹಿಂದೆ ತಾಂತ್ರಿಕ ಕಾರಣಗಳಿಂದ ತನಿಖೆ ನಿಲ್ಲಿಸುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಹೇಳಿತ್ತು. ಆದರೆ ಈ ತನಿಖೆಯನ್ನು ಮತ್ತೆ ಆರಂಭಿಸುವುದಾಗಿ 2015ರ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಪ್ರಕಟಿಸಿತ್ತು.

ಕಳೆದ ಏಪ್ರಿಲ್‌ ತಿಂಗಳಲ್ಲಿ ಕಾಂಗ್ರೆಸ್‌ ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ್‌ ಜಾರಿ ಮಾಡಿದ್ದು ರಾಹುಲ್‌ ಗಾಂಧಿ ವಿಚಾರಣೆಗೆ ಹಾಜರಾಗಿದ್ದಾರೆ. ಕೋವಿಡ್‌ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ವಿಚಾರಣೆಗೆ ಗೈರಾಗಿದ್ದು ಆರೋಗ್ಯ ಸುಧಾರಣೆಯಾದ ಬಳಿಕ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.

ಜಯಲಲಿತಾ ವಿರುದ್ಧ ದೂರು
ಜಯಲಲಿತಾ ಸಿಎಂ ಆದ ಸಂದರ್ಭದಲ್ಲಿ ಕೇವಲ ಒಂದು ರೂಪಾಯಿ ಮಾತ್ರ ಸಂಬಳ ಪಡೆಯುವುದಾಗಿ ಘೋಷಿಸಿದ್ದರು. ಹೀಗಿದ್ದರೂ ಅವರ ಆಸ್ತಿ ವರ್ಷ ವರ್ಷ ಏರಿಕೆ ಆಗುತ್ತಿತ್ತು. 1989-90 ರಲ್ಲಿ ಆದಾಯ ಶೂನ್ಯ ಎಂದು ದಾಖಲಿಸಿದ್ದರೆ 1990-91ರಲ್ಲಿ 1.89 ಕೋಟಿ, 1991-92ರಲ್ಲಿ 5.82 ಕೋಟಿ ರೂ., 1992-93 ರಲ್ಲಿ 91.33 ಕೋಟಿ ರೂ. ಆದಾಯ ತೋರಿಸಿದ್ದರು. ಸಿಎಂ ಆಗಿದ್ದಾಗ ಆಕ್ರಮವಾಗಿ ಆದಾಯ ಸಂಪಾದಿಸಿದ್ದಾರೆ ಎಂದು ಆರೋಪಿಸಿ 1996ರಲ್ಲಿ ಸುಬ್ರಮಣಿಯನ್‌ ಸ್ವಾಮಿ ಕೋರ್ಟ್‌ನಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪು ಬರುವಷ್ಟರಲ್ಲಿ ಜಯಲಲಿತಾ ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *