ಶಿಕ್ಷಣ ಸಂಸ್ಥೆಗಳ ಬಳಿ ಪೊಲೀಸರಿಗೇನು ಕೆಲಸ, ಮಕ್ಕಳನ್ನು ಹೆದರಿಸೋದ್ಯಾಕೆ: ಸಿದ್ದರಾಮಯ್ಯ ಪ್ರಶ್ನೆ

Public TV
3 Min Read

ಬೆಂಗಳೂರು: ಶಿಕ್ಷಣ ಸಂಸ್ಥೆಗಳ ಬಳಿ ಪೊಲೀಸರಿಗೇನು ಕೆಲಸ. ಪೊಲೀಸರ ಮೂಲಕ ಚಿಕ್ಕ ಮಕ್ಕಳನ್ನು ಹೆದರಿಸುವುದು ಯಾಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಸ್, ಹಾಕ್ತೀವಿ, ಅರೆಸ್ಟ್ ಮಾಡ್ತೀವಿ ಎಂಬ ಚಿಕ್ಕ ಮಕ್ಕಳನ್ನು ಹೆದರಿಸೋದು ಯಾಕೆ? ಇದೇನು ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರವೋ? ಸರ್ಕಾರವೇ ಇದನ್ನು ಇತ್ಯರ್ಥ ಮಾಡಬಹುದಿತ್ತು, ನ್ಯಾಯಾಲಯದ ಮೆಟ್ಟಿಲು ಹತ್ತಲು ಅವಕಾಶವೇ ಕೊಡಬಾರದಿತ್ತು. ಸರ್ಕಾರ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ದುರುದ್ದೇಶದಿಂದ ವಿವಾದದ ಆರಂಭದಲ್ಲೇ ಅಲಕ್ಷ್ಯ ತೋರಿದ ಕಾರಣಕ್ಕೆ ಇಂದು ದೊಡ್ಡದಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರ ವಿರೋಧಿಸಿಲ್ಲ. ಸಮವಸ್ತ್ರದೊಂದಿಗೆ ಮೊದಲಿನಿಂದಲೂ ಹಿಜಬ್ ಧರಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್ ದಾಖಲು ಮಾಡುತ್ತಿರುವುದು ತಪ್ಪು. ಇದಕ್ಕೆಲ್ಲ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ವಿದ್ಯಾರ್ಥಿನಿಗೆ ಶರ್ಟ್ ಬಿಚ್ಚಿಕೊಡಲು ಮುಂದಾದ ಕಾಫಿನಾಡಿನ ಸರ್ಕಲ್ ಇನ್ಸ್‌ಪೆಕ್ಟರ್

ಸಂಘ ಪರಿವಾರದವರು ಅನಗತ್ಯವಾಗಿ ಹಿಜಬ್ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಜಬ್ ಧರಿಸುವುದು ನಿನ್ನೆ ಮೊನ್ನೆ ಆರಂಭವಾದುದ್ದಲ್ಲ, ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವರು ಧರಿಸುತ್ತಾರೆ, ಕೆಲವರು ಧರಿಸಲ್ಲ. ಅದು ಮುಸ್ಲಿಂ ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆ. ಹಿಜಬ್ ಧರಿಸುವುದರಿಂದ ಇತರರಿಗೆ ಯಾವ ತೊಂದರೆ ಕೂಡ ಆಗಲ್ಲ. ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಧರ್ಮದ ಸಂಪ್ರದಾಯದ ಪ್ರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಯಾವ ತಕರಾರು ಇರಲಿಲ್ಲ. ಇದಕ್ಕೆ ಸಂವಿಧಾನ ಕೂಡ ಅವಕಾಶ ನೀಡಿದೆ. ಇದು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು. ಮುಸ್ಲಿಮರು ಇತ್ತೀಚೆಗೆ ಶಿಕ್ಷಣದ ಕಡೆಗೆ ಒಲವು ತೋರಿ ಶಾಲಾ ಕಾಲೇಜಿಗೆ ಬರುತ್ತಿದ್ದಾರೆ. ಮೊದಲೆಲ್ಲ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಪ್ರಮಾಣ ಕಡಿಮೆಯಿತ್ತು, ಸಂಘ ಪರಿವಾರದವರು ಹಿಜಬ್ ವಿವಾದ ಮಾಡಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ಮಾಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರಿಗೂ ಈ ರೀತಿ ಮಾಡಬಾರದು, ಶಿಕ್ಷಣ ಮೂಲಭೂತ ಹಕ್ಕಾಗಿದೆ. ಮನಮೋಹನ್ ಸಿಂಗ್ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ತಂದಿತ್ತು. ಆ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ನೀಡಿದೆ ಎಂದರು. ಇದನ್ನೂ ಓದಿ: ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಮಧ್ಯಂತರ ತೀರ್ಪು ಬಂದಿದೆ. ಶಾಲಾಭಿವೃದ್ಧಿ ಸಮಿತಿ ಇರುವ ಶಾಲೆಗಳಲ್ಲಿ ಅವರು ಒಂದು ಸಮವಸ್ತ್ರ ನೀತಿ ರೂಪಿಸಿದ್ದರೆ ಅಲ್ಲಿ ಮಾತ್ರ ಈ ಆದೇಶ ಅನ್ವಯವಾಗುತ್ತೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಎಲ್ಲರಿಗೂ ಇದು ಅನ್ವಯವಾಗಲ್ಲ. ಚಾಮರಾಜನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಅವರು ಈ ಸಮವಸ್ತ್ರ ನೀತಿ ಪದವಿ ಕಾಲೇಜುಗಳಿಗೆ ಅನ್ವಯವಾಗಲ್ಲ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಎಂಬುವವರು ಮೊನ್ನೆ 16 ನೇ ತಾರೀಖು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಮೇಲ್ಕಂಡ ಆದೇಶವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ ಶಾಲೆಗಳು (ಆಂಗ್ಲ ಮಾಧ್ಯಮ) ಶಾಲೆಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ. ಮೊದಲನೆಯದಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯೇ ಇರುವುದಿಲ್ಲ, ಶಾಲಾಭಿವೃದ್ಧಿ ಕಮಿಟಿ ಇಲ್ಲದಿದ್ದಾಗ ಸಮವಸ್ತ್ರ ನೀತಿ ರೂಪಿಸುವುದು ಯಾರು? ಹೀಗಿದ್ದಾಗ ನ್ಯಾಯಾಲಯದ ಆದೇಶ ಪಾಲನೆ ಎಲ್ಲಿ ಸಾಧ್ಯ? ಈ ಸುತ್ತೋಲೆ ಸಂಪೂರ್ಣ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *