Test Twenty | ಟೆಸ್ಟ್‌ನಲ್ಲೂ ಚುಟುಕು ಕ್ರಿಕೆಟ್ ಶುರು – ಏನಿದು ಟೆಸ್ಟ್ ಟ್ವೆಂಟಿ? ಯಾವಾಗ ಶುರು? ಸ್ವರೂಪ ಹೇಗಿದೆ?

Public TV
2 Min Read

2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಆಗ ಚುಟುಕು ಕ್ರಿಕೆಟ್‌ ಮಾದರಿಯನ್ನ ಬಹಳಷ್ಟು ಜನ ಟೀಕಿಸುತ್ತಿದ್ರು. ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡ ಬಳಿಕ ಜನಪ್ರಿಯತೆ ಪಡೆದುಕೊಂಡಿತು. 2008ರಲ್ಲಿ ಪದಾರ್ಪಣೆ ಮಾಡಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಚುಟುಕು ಕ್ರಿಕೆಟ್‌ ಮಹತ್ವವನ್ನ ಜಗತ್ತಿಗೇ ಸಾರಿತು. ಇದೀಗ ಟೆಸ್ಟ್‌ ಕ್ರಿಕೆಟ್‌ (Test Cricket) ಸ್ವರೂಪಕ್ಕೂ ಟಿ20 ಸ್ಪರ್ಶ ನೀಡಲು ಕ್ರಿಕೆಟ್‌ ತಜ್ಞರು ಮುಂದಾಗಿದ್ದಾರೆ.

ಕ್ರಿಕೆಟ್‌ ದಿಗ್ಗಜರಾದ ಎಬಿ ಡಿವಿಲಿಯರ್ಸ್ (AB De Villiers), ಸರ್ ಕ್ಲೈವ್ ಲಾಯ್ಡ್, ಮ್ಯಾಥ್ಯೂ ಹೇಡನ್ ಮತ್ತು ಹರ್ಭಜನ್ ಸಿಂಗ್ ಅವರನ್ನೊಳಗೊಂಡ ಸಲಹಾ ಮಂಡಳಿಯು ಈ ನಾಲ್ಕನೇ ಸ್ವರೂಪದ ಟೆಸ್ಟ್‌ ಕ್ರಿಕೆಟ್‌ನ್ನು ಅನುಮೋದಿಸಿದ್ದಾರೆ. ಈ ಸ್ವರೂಪದ ಟೂರ್ನಿ 2026ರ ಜನವರಿಯಿಂದಲೇ ಅನುಷ್ಠಾನಕ್ಕೆ ತರಲು ದಿ ಒನ್ ಒನ್ ಸಿಕ್ಸ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ರೀಡಾ ಉದ್ಯಮಿ ಗೌರವ್ ಬಹಿರ್ವಾನಿ ಮುಂದಾಗಿದ್ದಾರೆ.

ಏನಿದು ಟೆಸ್ಟ್‌ ಟ್ವೆಂಟಿ? ಹೇಗಿರಲಿದೆ ಸ್ವರೂಪ?
13 ರಿಂದ 19 ವರ್ಷದೊಳಗಿನವರಿಗಾಗಿ ಟೆಸ್ಟ್‌ 20 (Test Twenty) ಕ್ರಿಕೆಟ್‌ ಮಾದರಿಯನ್ನ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಸಹ ರೆಡ್‌ ಬಾಲ್‌ ಕ್ರಿಕೆಟ್‌ ಆಗಿರಲಿದ್ದು, 80 ಓವರ್‌ಗಳ ಪಂದ್ಯವಾಗಿರಲಿದೆ. ಉಭಯ ತಂಡಗಳು ಒಂದು ಪಂದ್ಯದಲ್ಲಿ ತಲಾ 20 ಓವರ್‌ನಂತೆ 2 ಇನ್ನಿಂಗ್ಸ್‌ಗಳನ್ನು ಟೆಸ್ಟ್‌ ಮಾದರಿಯಲ್ಲೇ ಆಡಲಿವೆ. 4 ವಿರಾಮಗಳು ಇರಲಿದ್ದು, ಒಂದು ದಿನದಲ್ಲೇ ಮುಕ್ತಾಯಗೊಳ್ಳುವ ಟೆಸ್ಟ್‌ ಸ್ವರೂಪದ ಕ್ರಿಕೆಟ್‌ ಆಗಿರಲಿದೆ.

ನಿಯಮ ಹೇಗೆ ಅನ್ವಯ?
ಪ್ರತಿ ತಂಡವು ಪಂದ್ಯದಲ್ಲಿ ಒಮ್ಮೆಗೆ 4 ಓವರ್‌ ಪವರ್‌ ಪ್ಲೇ ತೆಗೆದುಕೊಳ್ಳಬಹುದಾಗಿದೆ. ಅಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ 75 ರನ್‌ ಅಥವಾ ಅದಕ್ಕಿಂತಲೂ ಹೆಚ್ಚು ರನ್‌ಗಳಿಂದ ಮುನ್ನಡೆ ಸಾಧಿಸಿದ್ರೆ, ಎದುರಾಳಿ ತಂಡ ಫಾಲೋ ಆನ್‌ ಹೇರಬಹುದಾಗಿದೆ. ಪಂದ್ಯದುದ್ದಕ್ಕೂ ಗರಿಷ್ಠ 5 ಬೌಲರ್‌ಗಳನ್ನ ಬಳಸಬಹುದಾಗಿದೆ. ಪ್ರತಿ ಬೌಲರ್‌ಗೆ ಗರಿಷ್ಠ 8 ಓವರ್‌ ಬೌಲಿಂಗ್‌ ಮಾಡಲು ಅವಕಾಶ ಇರಲಿದೆ.

ಮೊದಲ ಸೀಸನ್‌ ಯಾವಾಗ?
ಟೆಸ್ಟ್‌ ಟ್ವೆಂಟಿಯ ಮೊದಲ ಸೀಸನ್‌ 2026ರ ಜನವರಿಯಲ್ಲಿ ಶುರುವಾಗಲಿದೆ. ಮೊದಲ ಟೂರ್ನಿ 6 ಜಾಗತಿಕ ಫ್ರಾಂಚೈಸಿಗಳನ್ನು ಒಳಗೊಂಡಿರಲಿದೆ. ಭಾರತರಿಂದ ಮೂರು ತಂಡಗಳು ಹಾಗೂ ದುಬೈ, ಲಂಡನ್ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಸುವ ಮೂರು ತಂಡಗಳು ಪಾಲ್ಗೊಳ್ಳಲಿವೆ. ಪ್ರತಿ ತಂಡವು 16 ಆಟಗಾರರನ್ನ ಒಳಗೊಂಡಿರಲಿದ್ದು, 8 ಭಾರತೀಯರು 8 ವಿದೇಶಿ ಆಟಗಾರರು ತಂಡದಲ್ಲಿರಲಿದ್ದಾರೆ.

ಎಬಿಡಿ ಹೇಳಿದ್ದೇನು?
ಟೆಸ್ಟ್‌ ಟ್ವೆಂಟಿ ಕುರಿತು ಮಾತನಾಡಿರುವ ಕ್ರಿಕೆಟ್‌ ದಿಗ್ಗಜ ಎಬಿಡಿ ವಿಲಿಯರ್ಸ್‌, ಭವಿಷ್ಯದ ದೃಷ್ಟಿಯಿಂದ ಆಟದ ಸ್ವರೂಪಗಳನ್ನ ನಾವು ಗೌರವಿಸಬೇಕು. ಇದು ಯುವ ಆಟಗಾರರ ಮುಂದಿನ ಭವಿಷ್ಯಕ್ಕೆ ದೊಡ್ಡ ವೇದಿಕೆಯಾಗಲಿದೆ. ಜೊತೆಗೆ ಅಭಿಮಾನಿಗಳಿಗೂ ಹೊಸತನದ ಅನುಭವ ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Share This Article