ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

Public TV
2 Min Read

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಬರ್ತ್ಡೇಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ʻಕಾಂತಾರ ಚಾಪ್ಟರ್ 1ʼ ಸಿನಿಮಾದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. 2022ರಲ್ಲಿ ತೆರೆಕಂಡು ಹೊಸ ದಾಖಲೆ ಬರೆದಿದ್ದ “ಕಾಂತಾರ” (Kantara Chapter 1) ಸಿನಿಮಾ ಇದೀಗ ಪ್ರೀಕ್ವೆಲ್ ಆಗುತ್ತಿದೆ. ಈ ಸಿನಿಮಾ ಇದೇ 2025ರ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ರಿಷಬ್ ಶೆಟ್ಟಿ ಜನ್ಮ ದಿನದ ಪ್ರಯುಕ್ತ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ ಹೊಂಬಾಳೆ ಫಿಲಂಸ್ (Hombale Films).

2022ರಲ್ಲಿ ಬಿಡುಗಡೆಯಾದ “ಕಾಂತಾರ” ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ನಿಸರ್ಗ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಹಿನ್ನಲೆಯಲ್ಲಿ ಮೂಡಿಬಂದ ಚಿತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಬಾಕ್ಸ್ ಆಫೀಸ್ನಲ್ಲಿಯೂ ಹವಾ ಸೃಷ್ಟಿಸಿತ್ತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಪ್ಯಾನ್ ಇಂಡಿಯಾ (Pan India) ಅವತಾರತಾಳಿತ್ತು. ಇದೀಗ ಇದೇ ಕಾಂತಾರ ಸಿನಿಮಾದ ಪ್ರೀಕ್ವೆಲ್ ಆಗಮನಕ್ಕೆ ಹೆಚ್ಚು ದಿನ ಉಳಿದಿಲ್ಲ. ರಿಷಬ್ ಶೆಟ್ಟಿ ಬರ್ತ್ಡೇಗೆ ಹೊಸ ಪೋಸ್ಟರ್ ಮೂಲಕ ಸರ್ಪ್ರೈಸ್ ನೀಡಿದೆ ಹೊಂಬಾಳೆ ಸಂಸ್ಥೆ.

ʻದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತʼ ಎಂಬ ಕ್ಯಾಪ್ಷನ್ ಮೂಲಕ “ಕಾಂತಾರ ಚಾಪ್ಟರ್ 1” ಚಿತ್ರದ ಹೊಸ ಲುಕ್ ಬಿಡುಗಡೆ ಮಾಡಿದೆ ಹೊಂಬಾಳೆ ಫಿಲಂಸ್. ಈ ಹೊಸ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಂಡಿದ್ದಾರೆ. ಸಿನಿಮಾ ಶೂಟಿಂಗ್ ಸಹ ಮುಕ್ತಾಯವಾದ ವಿಚಾರವನ್ನೂ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

ಆಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣ
“ಕಾಂತಾರ: ಚಾಪ್ಟರ್ 1” ಚಿತ್ರ ಹಲವು ವಿಶೇಷತೆಗಳಿಂದ ಕೂಡಿದ ಸಿನಿಮಾ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಕ್ಕೆ ಹೋಲಿಕೆ ಮಾಡಿದರೆ, ಹಲವು ಹೊಸತನಗಳಿರುವ ಸಿನಿಮಾ. ಆಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣವೂ ಈ ಸಿನಿಮಾದಲ್ಲಾಗಿದೆ. ಈ ಹಿಂದಿನ ಟೀಸರ್‌ನಲ್ಲಿಯೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು “ಕಾಂತಾರ ಚಾಪ್ಟರ್ 1”. ಇದೀಗ ಇದೇ ಭವ್ಯಕಥೆ ತೆರೆಮೇಲೆ ಬರಲು ಸಿದ್ಧವಾಗಿದೆ.

ಭವ್ಯ ಸೆಟ್, 3ಸಾವಿರಕ್ಕೂ ಅಧಿಕ ಕಲಾವಿದರು..
ಬರೋಬ್ಬರಿ 25 ಎಕ್ರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ. ಕಾಲ್ಪನಿಕ ಊರಿನಲ್ಲಿ “ಕಾಂತಾರ ಚಾಪ್ಟರ್ 1” ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ. ಭಾರತೀಯ ಹಾಗೂ ಅಂತಾರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ.

“ಕಾಂತಾರ: ಚಾಪ್ಟರ್ 1” ಜೊತೆಗೆ ಹೊಂಬಾಳೆ ಫಿಲಂಸ್ ಬತ್ತಳಿಕೆಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. “ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ” ಸೇರಿದಂತೆ ಹಲವು ಸಿನಿಮಾಗಳು ಲೈನಪ್‌ನಲ್ಲಿವೆ. ಈಗ “ಕಾಂತಾರ: ಚಾಪ್ಟರ್ 1” ಚಿತ್ರಕ್ಕೆ ಕ್ಷಣಗಣನೆ ಶುರುವಾಗಿದೆ.

Share This Article