ಏನಿದು ಸಿಮ್ ಬೈಂಡಿಂಗ್? ಇನ್ಮುಂದೆ ಮೊಬೈಲ್‌ನಿಂದ ಸಿಮ್ ತೆಗೆದ್ರೆ ವಾಟ್ಸಪ್ ಬಂದ್!

4 Min Read

ತಂತ್ರಜ್ಞಾನ ಬೆಳೆದಂತೆ ಅದರ ಉಪಯೋಗದ ಜೊತೆಗೆ ದುರುಪಯೋಗವು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಅನುಕೂಲಕ್ಕಿಂತ ಹೆಚ್ಚಾಗಿ ಅದನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂದೇ ಯೋಚಿಸುತ್ತಾರೆ. 

ಹೌದು, ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಯಾವುದೇ ಒಂದು ಸಂದೇಶ ಅಥವಾ ಮೇಲ್ ಬಂದಾಗ ಆದಷ್ಟು ಜಾಗರೂಕರಾಗಿರಬೇಕು. ಅಪ್ಪಿತಪ್ಪಿಯೂ ಎಡವಟ್ಟಾದರೆ ನಿಜಕ್ಕೂ ಬೆಲೆ ತೆರಬೇಕಾಗುತ್ತದೆ. ನಾವೆಲ್ಲರೂ ತುಂಬಾ ಕಡೆ ನೋಡಿರುತ್ತೇವೆ ಅಲ್ಲದೆ ಅದು ನಮ್ಮ ಅನುಭವಕ್ಕೂ ಬಂದಿರುತ್ತದೆ. ಸಾಮಾನ್ಯವಾಗಿ ಮೊಬೈಲ್‌ನಿಂದ ಸಿಮ್‌ನ್ನು ಹೊರತೆಗೆದಾಗ ವೈಫೈ ಮೂಲಕ ವಾಟ್ಸಪ್ ಬಳಸಬಹುದು. ಜೊತೆಗೆ ಟೆಲಿಗ್ರಾಂ ಅನ್ನು ಕೂಡ ಒಂದು ಬಾರಿ ಲಾಗಿನ್‌ ಆದರೆ ಸಿಮ್ ಇಲ್ಲದೆ ಬಳಸಬಹುದು. ಇದೀಗ ದೂರ ಸಂಪರ್ಕ ಇಲಾಖೆ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಸ್ನಾಪ್ ಚಾಟ್, ಶೇರ್ ಚಾಟ್ ಸೇರಿದಂತೆ ಹೆಚ್ಚಿನ ಆಪ್‌ಗಳು ಮೊಬೈಲ್‌ನಲ್ಲಿ ಸಿಮ್ ಇದ್ದರೆ ಮಾತ್ರ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಸೂಚಿಸಿದೆ. 

ಏನಿದು ಸಿಮ್ ಬೈಂಡಿಂಗ್?

ಸದ್ಯಕ್ಕೆ ಗಮನಿಸಿದರೆ ನಿಮ್ಮ ಮೊಬೈಲ್‌ನಲ್ಲಿರುವ ಸಿಮ್‌ಅನ್ನು ಹೊರತೆಗೆದಾಗ ವಾಟ್ಸಪ್, ಟೆಲಿಗ್ರಾಂ ಸೇರಿದಂತೆ ಇನ್ನಿತರ ಆಪ್ ಗಳು ಮೊಬೈಲ್ ಇಂಟರ್ನೆಟ್ ಇಲ್ಲದೆ ವೈಫೈ ಮೂಲಕ ಕಾರ್ಯನಿರ್ವಹಿಸುತ್ತವೆ. ಇನ್ನು ಮುಂದೆ ಮೊಬೈಲ್ ನಲ್ಲಿ ಸಿಮ್ ಇಲ್ಲದಿದ್ದರೆ ಈ ಕೆಲವು ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಇದೇ ವಿಷಯವಾಗಿ ಸರ್ಕಾರ ಹೊಸ ಬದಲಾವಣೆಯೊಂದನ್ನು ತರುತ್ತಿದೆ. ಇದನ್ನೇ ಸಿಮ್ ಬೈಂಡಿಂಗ್ ಎಂದು ಕರೆಯಲಾಗುತ್ತದೆ.

ಯಾಕೆ ಈ ಕ್ರಮ?

ವಾಟ್ಸಪ್‌, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್‌ನಂತಹ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಆರಂಭದದಲ್ಲಿ ಸಿಮ್‌ ಮೂಲಕ ಒಟಿಪಿ ಪಡೆದು ಲಾಗಿನ್‌ ಆಗುತ್ತದೆ. ಒಂದು ಬಾರಿ ಲಾಗಿನ್‌ ಆದ ಬಳಿಕ ಸಿಮ್‌ ಕಾರ್ಡ್‌ ಮೊಬೈಲ್‌ನಲ್ಲಿ ತೆಗೆದರೂ ಅದು ಸಕ್ರಿಯವಾಗಿರುತ್ತದೆ.

ಈ ರೀತಿ ಸಿಮ್‌ ಸಕ್ರಿಯವಾಗಿರುವುದು ಸೈಬರ್‌ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿದೆ. ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧಿಗಳು, ಸಿಮ್‌ಗಳನ್ನು ಬದಲಾಯಿಸಿದ ಅಥವಾ ನಿಷ್ಕ್ರಿಯಗೊಳಿಸಿದ ನಂತರವೂ ಈ ಅಪ್ಲಿಕೇಶನ್‌ಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದಾರೆ. ಇದರಿಂದಾಗಿ ಕರೆ ದಾಖಲೆಗಳು, ಸ್ಥಳ ದಾಖಲೆಯ ಮೂಲಕ ವಂಚನೆಯ ಚಟುವಟಿಕೆಯನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ. ಈ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ನಿಯಮವನ್ನು ಬಿಗಿಗೊಳಿಸುತ್ತಿದೆ.

ಸೈಬರ್ ವಂಚಕರು ಭಾರತದ ಮೊಬೈಲ್ ನಂಬರ್ ಗಳನ್ನು ಬಳಸಿಕೊಂಡು ದೇಶದ ಹೊರಗಡೆ ಜನರನ್ನ ವಂಚಿಸುತ್ತಾರೆ. ಹಳೆಯ ಅಥವಾ ನಿಷ್ಕ್ರಿಯವಾಗಿರುವ ಭಾರತೀಯ ಸಿಮ್‌ಗಳನ್ನು ಬಳಸಿಕೊಂಡು ಆಪ್ ಗಳಲ್ಲಿ ಲಾಗಿನ್ ಆಗುತ್ತಾರೆ. ಬಳಿಕ ಆ ಸಿಮ್ ಅನ್ನು ಮೊಬೈಲ್‌ನಿಂದ ಹೊರತೆಗೆಯುತ್ತಾರೆ. ಹೀಗೆ ಮಾಡುವುದರಿಂದ ಮೊಬೈಲ್ ನ ಅಥವಾ ವಾಟ್ಸಪ್ ಬಳಕೆ ಮಾಡುತ್ತಿರುವ ಮೊಬೈಲ್‌ನ ನಿಜವಾದ ಸ್ಥಳ ಪತ್ತೆಯಾಗುವುದಿಲ್ಲ ಹಾಗೂ ಅದರ ಯಾವುದೇ ದಾಖಲೆಗಳು ರೆಕಾರ್ಡ್ ಆಗುವುದಿಲ್ಲ. ಇದರಿಂದ ಸೈಬರ್ ವಂಚಕರು ಹಾಗೂ ಇನ್ನಿತರ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗುತ್ತದೆ. 

ಸರ್ಕಾರದ ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಯಾವುದೇ ಆ್ಯಪ್‌ಗೆ ಲಾಗಿನ್ ಆಗುವಾಗ ಮಾತ್ರ ಅದು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸುತ್ತದೆ. ಬಳಿಕ ನೀವು ಮೊಬೈಲ್ ನಿಂದ ಸಿಮ್ ಹೊರ ತೆಗೆದರೂ ಕೂಡ ಆ ಅಪ್ಲಿಕೇಶನ್ ಹಾಗೆಯೇ ಕಾರ್ಯನಿರ್ವಹಿಸುತ್ತದೆ. ಇದೇ ವ್ಯವಸ್ಥೆಯನ್ನ ಹ್ಯಾಕರ್ಸ್, ಸ್ಕ್ಯಾಮರ್ ಹಾಗೂ ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ? 

ಮೊದಲನೆಯದಾಗಿ ಅಪ್ಲಿಕೇಶನ್ ಯಾವಾಗಲೂ ಮೊಬೈಲ್‌ನಲ್ಲಿ ಸಿಮ್ ಇದೆಯೇ ಎಂಬುದನ್ನ ಪರಿಶೀಲಿಸುತ್ತಿರಬೇಕು ಅಥವಾ ಟ್ರ್ಯಾಕ್ ಮಾಡುತ್ತಿರಬೇಕು. ಒಂದು ವೇಳೆ ಸಿಮ್ ಇಲ್ಲದಿದ್ದರೆ ಅಥವಾ ಸರಿಯಾದ ರೀತಿಯಲ್ಲಿ ಸಿಮ್ ಹಾಕಿಲ್ಲದ್ದರೆ ಅಪ್ಲಿಕೇಶನ್ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕು. 

ಇನ್ನು ಕೆಲವರು ತಮ್ಮ ವಾಟ್ಸಪ್ ಖಾತೆಗಳನ್ನು ವಾಟ್ಸಾಪ್ ವೆಬ್‌ನಲ್ಲಿ ಲಾಗಿನ್ ಆಗಿರುತ್ತಾರೆ. ಇವರುಗಳಿಗಾಗಿ ಪ್ರತಿ ಬಾರಿ ಲಾಗಿನ್ ಆದ ನಂತರ ಖಾತೆಯು 6 ಗಂಟೆಗಳ ಬಳಿಕ ಸ್ವಯಂ ಚಾಲಿತವಾಗಿ ಲಾಗ್ ಔಟ್ ಆಗುತ್ತದೆ. ಮತ್ತೆ ಲಾಗಿನ್ ಆಗಲು QR ಸ್ಕ್ಯಾನ್ ಅಥವಾ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು. ಈ ಮೂಲಕ ನಿಜವಾದ ಬಳಕೆದಾರರು ಎಂದು ಖಚಿತಪಡಿಸಿಕೊಳ್ಳಬಹುದು. 

ಇನ್ನೂ ಕೆಲವರು ಒಂದು ಮೊಬೈಲ್‌ನಲ್ಲಿ ಸಿಮ್, ಇನ್ನೊಂದು ಮೊಬೈಲ್‌ನಲ್ಲಿ ವಾಟ್ಸಪ್ ಲಾಗಿನ್ ಆಗಿರುತ್ತಾರೆ. ಈ ರೀತಿ ಅವರಿಗೆ ಇದು ಸಮಸ್ಯೆಯನ್ನು ಉಂಟುಮಾಡುತ್ತದೆ. 

ಕೇಂದ್ರ ಸರ್ಕಾರ ಹೇಳಿದ್ದೇನು?

ಬಳಕೆದಾರರ ಮೊಬೈಲ್‌ನಲ್ಲಿ ಸಕ್ರಿಯವಾಗಿರುವ ಸಿಮ್‌ ಇದ್ದಾಗ ಮಾತ್ರ ವಾಟ್ಸಪ್‌ ಸೇರಿದಂತೆ ಆ್ಯಪ್‌ ಆಧಾರಿತ ಸಂವಹನ ಸೇವೆ ಕಾರ್ಯನಿರ್ವಹಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತಂತೆ 120 ದಿನಗಳೊಳಗಾಗಿ ದೂರಸಂಪರ್ಕ ಇಲಾಖೆಗೆ(DoT) ಅನುಪಾಲನಾ ವರದಿಯನ್ನು ಸಲ್ಲಿಸಬೇಕು. ವರದಿ ಸಲ್ಲಿಸಲು ವಿಫಲವಾದಲ್ಲಿ ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆ್ಯಪ್‌ ಆಧಾರಿತ ಕಂಪನಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಹೊಸ ನಿಯಮದಲ್ಲಿ ಏನಿದೆ?

ಹೊಸ ನಿಯಮದ ಅಡಿಯಲ್ಲಿ ಈ ಅಪ್ಲಿಕೇಶನ್‌ಗಳು 90 ದಿನಗಳಲ್ಲಿ ಸಿಮ್ ಕಾರ್ಡ್‌ಗಳು ತಮ್ಮ ಸೇವೆಗಳಿಗೆ ನಿರಂತರವಾಗಿ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಇದರ ಜೊತೆ ವೆಬ್ ಬ್ರೌಸರ್ ಲಾಗಿನ್‌ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ.  

ಹೊಸ ಸಿಮ್-ಬೈಂಡಿಂಗ್ ಪದ್ಧತಿಯಡಿಯಲ್ಲಿ, ಬಳಕೆದಾರರು ಸಿಮ್-ಬೌಂಡ್ ಮೊಬೈಲ್ ಫೋನ್ ಮೂಲಕ ಸೆಷನ್ ಅನ್ನು ಮರುಪರಿಶೀಲಿಸದ ಹೊರತು, ಈ ಡೆಸ್ಕ್‌ಟಾಪ್ ಸೆಷನ್‌ಗಳನ್ನು ಪ್ರತಿ ಆರು ಗಂಟೆಗಳಿಗೊಮ್ಮೆ ಬಲವಂತವಾಗಿ ಲಾಗೌಟ್‌ ಮಾಡಲಾಗುತ್ತದೆ. ಅಂದರೆ ಪ್ರತಿ ಆರು ಗಂಟೆಗಳಿಗೊಮ್ಮೆ, ಬಳಕೆದಾರರು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತೊಮ್ಮೆ ಲಾಗಿನ್‌ ಆಗಬೇಕಾಗುತ್ತದೆ.

ಚೀನಾ ಈಗಾಗಲೇ ಈ ರೀತಿಯ ನಿಯಮವನ್ನು ಅಳವಡಿಸಿಕೊಂಡಿದೆ. ಅಲ್ಲಿ WeChat ನಂತಹ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳು ಸಿಮ್ ಕಾರ್ಡ್‌ ಸಕ್ರಿಯವಾಗಿರುವ ಫೋನಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ.

Share This Article