ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

Public TV
2 Min Read

ಬೆಂಗಳೂರು: ಕರಾವಳಿಯಲ್ಲಿ ಹಿಜಬ್‌ನಿಂದ ಆರಂಭಗೊಂಡ ವಿವಾದ ಈಗ ಎಲ್ಲೆಲ್ಲೋ ಹೋಗುತ್ತಿದೆ. ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧ ಅಭಿಯಾನ ಹೊಸ ರೂಪ ಪಡೆದುಕೊಂಡಿದೆ. ಯುಗಾದಿ ಹೊಸತೊಡಕು ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ, ಹಿಂದೂಗಳ ಬಳಿಯೇ ಮಾಂಸ ಖರೀದಿ ಮಾಡುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದೆ.

ಇದಿಗ ಹಲಾಲ್ ತ್ಯಜಿಸಿ, ಜಟ್ಕಾ ಬಾಡು ಖರೀದಿಸಿ ಎಂದು ಹಿಂದೂ ಸಮುದಾಯದವರು ಕರೆ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ಬಹಿರಂಗ ಬೆಂಬಲ ನೀಡಿದೆ. ಹಲಾಲ್ ಅನ್ನು ಆರ್ಥಿಕ ಜಿಹಾದ್ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಮುಸಲ್ಮಾನರು ಹಿಂದೂಗಳ ಬಳಿ ಮಾಂಸ ಖರೀದಿ ಮಾಡಲ್ಲ. ಹಿಂದೂಗಳೇಕೆ ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಯಾವ ಅಂಶ ಪ್ರಚೋದನೆ ಕೊಡ್ತಿದೆ ನೀವೇ ಹೇಳಿ ಎಂದು ಸಿಟಿ ರವಿ ಕೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಭಟ್‌ಗೆ ಆಹ್ವಾನ – ಎಸ್‌ಎಫ್‌ಐ ವಿರೋಧ

ಹಲಾಲ್ ಮಾಂಸದ ವಿಚಾರ ವಿವಾದ ಆಗಿರೋದು ಹೋಟೆಲ್ ಮಾಲೀಕರಿಗೆ ಹೊಸ ಪೀಕಲಾಟ ತಂದಿಟ್ಟಿದೆ. ಬೆಂಗಳೂರಿನ ಜಿಎಫ್‌ಸಿ ಬಿರಿಯಾನಿ ಮಳಿಗೆಯ ಬೋರ್ಡ್‌ನಲ್ಲಿ ಉಲ್ಲೇಖಿಸಿದ್ದ ಹಲಾಲ್ ಎಂಬ ಪದ ಮುಚ್ಚಲಾಗಿದೆ. ಹಲಾಲ್ ಬಹಿಷ್ಕಾರ ಅಭಿಯಾನಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆಯ್ತು ಹಲಾಲ್ ತ್ಯಜಿಸುತ್ತೇವೆ. ಆರ್‌ಎಸ್‌ಎಸ್‌ನವರು ಪ್ರತಿ ಹಳ್ಳಿಯಲ್ಲೂ ಮಾಂಸದಂಗಡಿ ತೆರೆಯಲಿ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಲಿ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 

ಇದೀಗ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂದರೇನು ಎಂಬ ಪ್ರಶ್ನೆ ಎದ್ದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೆ ಇರುವ ವ್ಯತ್ಯಾಸ ಇಲ್ಲಿದೆ.

ಹಲಾಲ್ ಕಟ್:
ಹಲಾಲ್ ಎಂಬುದು ಅರೇಬಿಕ್ ಪದ. ಇದರ ಅರ್ಥ ಅನುಮತಿ ಇದೆ ಎಂಬುದು. ಹಲಾಲ್ ಕಟ್ ಪ್ರಕಾರ ಪ್ರಾಣಿಯ ಗಂಟಲು ಸೀಳಿ ರಕ್ತ ಬರಿದಾಗಿಸಿ ಕೊಲ್ಲಲಾಗುತ್ತದೆ. ಪ್ರಾಣಿ ಮೊದಲೇ ಸತ್ತಿದ್ದರೆ ಅಥವಾ ಅನಾರೋಗ್ಯವಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ.

ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಬೇಕು. ಪ್ರಾಣಿಯನ್ನು ಕೊಲ್ಲುವಾಗ ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ ಮಾಡಬೇಕು. ಮಾಂಸ ತಿನ್ನುವವರೂ ಪ್ರಾಣಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಬೇಕು.

ಹಲಾಲ್ ಕಟ್ ಮಾಡುವವರು ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ವತಿಯಿಂದ ಹಣ ಪಾವತಿಸಿ ಪ್ರಮಾಣ ಪತ್ರ ಪಡೆದಿರಬೇಕು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎನ್ನುವ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್‌ಡಿಕೆ ಆಗ್ರಹ

ಜಟ್ಕಾ ಕಟ್:
ಜಟ್ಕಾ ಕಟ್ ಎಂದರೆ ಬಲಿ ಅಥವಾ ದೈವ ಬಲಿ ಎಂದರ್ಥ. ಈ ರೀತಿಯ ಪ್ರಾಣಿ ಬಲಿ ಬಗ್ಗೆ ಸನಾತನ ಹಿಂದೂ ಪದ್ಧತಿಯಲ್ಲಿ ಉಲ್ಲೇಖವಿದೆ. ಜಟ್ಕಾ ಕಟ್ ಪ್ರಕಾರ ಒಂದೇ ಏಟಿಗೆ ಪ್ರಾಣಿಯ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿಯಲ್ಲಿ ಪ್ರಾಣಿಯ ಜೀವ ಒಂದೇ ಬಾರಿಗೆ ಹೋಗುತ್ತದೆ.

ಇವೇ ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೂ ಇರುವ ವ್ಯತ್ಯಾಸ. ಮಾಂಸದ ಖರೀದಿಯಲ್ಲೂ ಧರ್ಮದ ವೈವಿಧ್ಯತೆ ಇರುವ ಕಾರಣಕ್ಕೆ ಇದೀಗ ಮತ್ತೆ ಹಿಂದೂ-ಮುಸ್ಲಿಂ ವಿವಾದ ಭುಗಿಲೇಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *