ಗರ್ಭಕಂಠ ಕ್ಯಾನ್ಸರ್‌ ಎಂದರೇನು?- ಹೇಗೆ ಹರಡುತ್ತೆ, ಲಕ್ಷಣಗಳೇನು?

By
2 Min Read

ಬೆಂಗಳೂರು: ನಿನ್ನೆಯಷ್ಟೇ ಮಂಡನೆಯಾದ ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ 9-14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ವ್ಯಾಕ್ಸಿನೇಷನ್‌ ಅನ್ನು ಘೋಷಣೆ ಮಾಡಲಾಗಿತ್ತು. ಇದಾದ ಮರುದಿನವೇ ಬಾಲಿವುಡ್‌ ಖ್ಯಾತ ನಟಿ ಪೂನಂ ಪಾಂಡೆ ನಿಧನದಿಂದಾಗಿ ಇದೀಗ ಗರ್ಭಕಂಠ ಕ್ಯಾನ್ಸರ್‌ ಭಾರೀ ಚರ್ಚೆ ಹುಟ್ಟುಹಾಕಿದೆ.

ಹೌದು, ಸ್ತನ ಕ್ಯಾನ್ಸರ್‌ ಹಾಗೂ ಗರ್ಭಕೋಶ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇತ್ತೀಚೆಗೆ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer) ಹೆಚ್ಚಾಗುತ್ತಿದೆ. ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ಮಹಿಳೆ ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರಾಣಕಳೆದುಕೊಳ್ಳುತ್ತಿದ್ದಾರೆ ಎಂದು ಮುಂಬೈನ ಟಾಟಾ ಮೆಮೋರಿಯಲ್​ ಆಸ್ಪತ್ರೆ ಶಾಕಿಂಗ್ ವರದಿಯೊಂದನ್ನು ನೀಡಿದೆ.

ಏನಿದು ಗರ್ಭಕಂಠ ಕ್ಯಾನ್ಸರ್?:‌
ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೋಂಕು ಆಗಿದೆ. ಗಂಟಲು, ಜನನಾಂಗ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆಯಾಗಿದೆ. ಇದು ಯೋನಿ ಸ್ರಾವದಲ್ಲಿ ಕಂಡು ಬಂದರೂ ರೋಗಲಕ್ಷಣಗಳು ಮಾತ್ರ ಕ್ಯಾನ್ಸರ್‌ನ ಮುಂದುವರಿದ ಹಂತಗಳಲ್ಲಷ್ಟೇ ಕಂಡು ಬರಬಹುದಾಗಿದೆ.

ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು, ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಹ್ಯೂಮನ್‌ ಪ್ಯಾಪಿಲೋಮ ವೈರಸ್ (HPV) ಎಂದು ಕರೆಯಲ್ಪಡುವ ವಿವಿಧ ತಳಿಗಳು ಈ ಗರ್ಭಕಂಠದ ಕ್ಯಾನ್ಸರ್‌ ಉಂಟುಮಾಡುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ. HPV ಲೈಂಗಿಕ ಸಂಪರ್ಕದ ಮೂಲಕ ಹಾದುಹೋಗುವ ಸಾಮಾನ್ಯ ಸೋಂಕು. HPVಗೆ ಒಡ್ಡಿಕೊಂಡಾಗ ನಮ್ಮ ದೇಹದ ರೋಗನಿರೋಧಕ ಶಕ್ತಿಯು ಸಾಮಾನ್ಯವಾಗಿ ಈ ವೈರಸ್ ದೇಹದ ಅಂಗಗಳಿಗೆ ಹಾನಿ ಮಾಡದಂತೆ ತಡೆಯುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಈ ವೈರಸ್ ಹಲವು ವರ್ಷಗಳವರೆಗೆ ಬದುಕುತ್ತದೆ. ಇದು ಗರ್ಭಕಂಠದ ಕೋಶಗಳನ್ನು ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುತ್ತದೆ.

ಹೇಗೆ ಬರುತ್ತೆ ಈ ಕ್ಯಾನ್ಸರ್?
* HPV ವೈರಸ್ ನಿಂದ ಈ ಸೋಂಕು ಹರಡುತ್ತದೆ
* ಕೆಲವೊಮ್ಮೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೂ ಈ ಕಾಯಿಲೆ ಹರಡುತ್ತದೆ
* ಹಲವು ಸಂದರ್ಭಗಳಲ್ಲಿ ಕುಡಿತ, ಸ್ಮೋಕ್ ಮಾಡುವ ಮಾದಕ ವ್ಯಸನಿಗಳಲ್ಲಿ ಇದು ಕಂಡುಬರುತ್ತದೆ.
* ಬೊಜ್ಜು, ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ

ಗುಣಲಕ್ಷಣಗಳು ಏನು..!?
– ವಾಸನೆಯುಕ್ತ ಬಿಳಿಸೆರಗು, ಆಗಾಗ ರಕ್ತಸ್ರಾವ ಸಮಸ್ಯೆ ಕಂಡುರುತ್ತದೆ.
– ಸಂಭೋಗದ ನಂತರ, ಪಿರಿಯಡ್ಸ್​ ಮುಗಿದ ನಂತರ ಯೋನಿಯಲ್ಲಿ ರಕ್ತಸ್ರಾವ ಉಂಟಾಗುವುದು.
– ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವ ಹಾಗೂ ಇದು ದೀರ್ಘಕಾಲದವರೆಗೆ ಇರುವುದು.
– ಸಂಭೋಗದ ಸಮಯದಲ್ಲಿ ನೋವು ಉಂಟಾಗುವುದು
– ಇಡೀ ಜೀವಕೋಶಗಳ ಮೇಲೆ ಈ ಗರ್ಭಕಂಠದ ಕ್ಯಾನ್ಸರ್‌ ಪರಿಣಾಮ ಬೀರುತ್ತದೆ. ನಾಲ್ಕನೆ ಹಂತಕ್ಕೆ ಹೋದಾಗ ಇದ್ರ ಚಿಕಿತ್ಸೆ ಕಷ್ಟ.
– ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು
– ಋತುಚಕ್ರದ ಅವಧಿಯಲ್ಲಿ ಬೆನ್ನು ನೋವು, ತುರಿಕೆ ಮತ್ತು ಉರಿ, ಹೆಚ್ಚು ಆಯಾಸ, ತುರ್ತು ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ

ಚಿಕಿತ್ಸೆ:
ಬಹುತೇಕರಿಗೆ ಮೊದಲ ಹಂತದ ಗರ್ಭಕಂಠದ ಕ್ಯಾನ್ಸರ್‌ ಗುಣಲಕ್ಷಣಗಳು ಪತ್ತೆಯಾಗುವುದಿಲ್ಲ. ಈ ಗರ್ಭಕಂಠ ಕ್ಯಾನ್ಸರ್‌ 30 ಮತ್ತು 65 ವರ್ಷ ವಯೋಮಾನದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಈ ವಯಸ್ಸಿನಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಮೂಲಕ ನೀವು ಗರ್ಭಕಂಠದ ಕ್ಯಾನ್ಸರ್ ಅಪಾಯದಿಂದ ಪಾರಾಗಬಹುದು.

ಆರಂಭಿಕ ಹಂತದಲ್ಲಿಯೇ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಸುಳಿವು ಸಿಕ್ಕಲ್ಲಿ ರೆಡಿಯೇಷನ್​ ಥೆರಪಿ, ಶಸ್ತ್ರಚಿಕಿತ್ಸೆಯ ಮೂಲಕ ಕ್ಯಾನ್ಸರ್​ಕಾರಕ ಕೋಶಗಳನ್ನು ಸಾಯಿಸಿ ರೋಗಿಯನ್ನು ಬದುಕಿಸಬಹುದು.

Share This Article