IPL 2024: ಫೈನಲ್‌ ಪಂದ್ಯಕ್ಕೆ ʻರೆಮಲ್‌ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?

Public TV
2 Min Read

ಚೆನ್ನೈ: ಸನ್‌ ರೈಸರ್ಸ್‌ ಹೈದರಾಬಾದ್‌ ಹಾಗೂ ಕೆಕೆಆರ್‌ ನಡುವಿನ ಐಪಿಎಲ್‌ ಫೈನಲ್‌ (IPL Final) ಪಂದ್ಯವು ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸೂಪರ್‌ ಸಂಡೇ (ಮೇ 26) ನಡೆಯಲಿದೆ. ಅಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಆದ್ರೆ ಫೈನಲ್‌ ಪಂದ್ಯಕ್ಕೆ ಇದೀಗ ʻರೆಮಲ್‌ʼ ಚಂಡಮಾರುತದ (Cyclone Remal) ಆತಂಕ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರಿತ್ಯದಿಂದ ತೀವ್ರ ಚಂಡಮಾರುತ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.

ಫೈನಲ್‌ ಪಂದ್ಯವು ಮಳೆಗೆ ಬಲಿಯಾದರೆ ವಿಜೇತರು ಯಾರಾಗ್ತಾರೆ? ನಿಯಮಗಳು ಹೇಗೆ ಅನ್ವಯವಾಗುತ್ತದೆ ಅನ್ನೋ ಬಗ್ಗೆ ತಿಳಿಯುವ ಕುತೂಹಲ ನಿಮಿಗಿದ್ದರೆ ಮುಂದೆ ಓದಿ..

ಭಾನುವಾರ ಚೆನ್ನೈ ಹವಾಮಾನ ಹೇಗಿರಲಿದೆ?
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ತಮಿಳುನಾಡಿನ ಚೆನ್ನೈನಲ್ಲಿ (Chennai weather) ಭಾನುವಾರ ಬಿಸಿಲು ಹಾಗೂ ಮೋಡ ಮುಸುಕಿದ ವಾತಾವರಣ ಇರಲಿದೆ. 20% ಮಳೆ ಸಾಂದ್ರತೆಯಿರಲಿದ್ದು, 56% ತೇವಾಂಶ ಇರಲಿದೆ. ಗಂಟೆಗೆ 23 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: 2024ರ ಐಪಿಎಲ್‌ಗೆ ವಿದಾಯ; ಅಭಿಮಾನಿಗಳೊಂದಿಗೆ ಸಿಹಿ-ಕಹಿ ನೆನಪು ಹಂಚಿಕೊಂಡ ಆರ್‌ಸಿಬಿ!

ಮಳೆ ಅಡ್ಡಿಯಾದ್ರೆ ಮೀಸಲು ದಿನ ಇದೆಯೇ?
ಲೀಗ್‌ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನ ಇರಲಿಲ್ಲ. ಫೈನಲ್​ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್​ವರ್ತ್​ ಲೂಯಿಸ್‌ (DSL) ನಿಯಮದ ಅನುಸಾರ ಓವರ್​ ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ. ಕಳೆದ ವರ್ಷ ಏಕದಿನ ಏಷ್ಯಾಕಪ್‌ (ODI Asia Cup) ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈ ನಿಯಮವನ್ನು ಅನ್ವಯಿಸಲಾಗಿತ್ತು. ಇದನ್ನೂ ಓದಿ: ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ

ಮೀಸಲು ದಿನಕ್ಕೂ ಮಳೆ ಬಂದರೆ ಕಥೆ ಏನು?
ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾಗಿ ಮೀಸಲು ದಿನಕ್ಕೂ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವುಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಪಡೆದ ರನ್‌ರೇಟ್‌, ಅಂಕಗಳ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಪಾಯಿಂಟ್ಸ್‌ ಪಟ್ಟಿಯಲ್ಲಿ ವಿಜೇತರನ್ನ ನಿರ್ಧರಿಸುವುದಾದರೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವೇ ಚಾಂಪಿಯನ್‌ ಆಗಲಿದೆ, ಸನ್‌ ರೈಸರ್ಸ್‌ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಲಿದೆ. ಏಕೆಂದರೆ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ಸಾಧಿಸಿರುವ ಕೋಲ್ಕತ್ತಾ ನೈಟ್‌ರೈಡರ್ಸ್‌ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿ 17 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

Share This Article