ಕಾವೇರಿಗಾಗಿ ಕಾವೇರಿದ್ದ ಕಾಲಾನಿಗೀಗ ಖಾಕಿ ಕಣ್ಗಾವಲು- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

Public TV
3 Min Read

ಬೆಂಗಳೂರು: ರಾಜ್ಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಕಾಲಾ’ ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಚಿತ್ರ ಪ್ರದಶನಕ್ಕೆ ಪೊಲೀಸ್ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚಿಸಿದೆ.

ಕರ್ನಾಟಕದಲ್ಲಿ ‘ಕಾಲಾ’ ಸಿನಿಮಾ ಬಿಡುಗಡೆ ವಿಚಾರವಾಗಿ ರಜನಿ ಅಳಿಯ ಧನುಷ್ ಹೈಕೋರ್ಟ್ ನಲ್ಲಿ ಜೂ.4 ರಂದು ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‍ನ ಏಕ ಸದಸ್ಯ ಪೀಠ ಸಿನಿಮಾದ ಬಿಡುಗಡೆ ಮಧ್ಯಂತರ ಆದೇಶ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸ್ ಭದ್ರತೆಯೊಂದಿಗೆ ಚಿತ್ರ ಬಿಡುಗಡೆ ಅವಕಾಶ ನೀಡಿದ್ದು, ಚಲನಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗುತ್ತೆ ಎನ್ನುವ ವರದಿಯನ್ನು ಚಿತ್ರತಂಡ ಕೂಡಲೇ ಸರ್ಕಾರಕ್ಕೆ ನೀಡಬೇಕು ಎಂದು ಸೂಚನೆ ನೀಡಿದೆ.

ವಾದ-ಪ್ರತಿವಾದ ಹೇಗಿತ್ತು?
ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಬೆದರಿಕೆಯಿದ್ದು, ಚಿತ್ರ ಬಿಡುಗಡೆಗೆ ಸರಿಯಾದ ಭದ್ರತೆಯನ್ನು ನೀಡಬೇಕು ಎಂದು ಚಿತ್ರ ತಂಡದ ಪರ ವಕೀಲರು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕೊಲೆ ಬೆದರಿಕೆ ಇದೆ ಅಂತಾ ಹೇಳುತ್ತಿರುವಿರಿ, ಎಲ್ಲಿ ಬೆದರಿಕೆ ಇದೆ? ಯಾವುದಾದರೂ ಪ್ರದೇಶ ಬಗ್ಗೆ ತಿಳಿಸಿ. ಗಾಂಧಿನಗರದಲ್ಲಿ ಬೆದರಿಕೆ ಇದೆ ಎನ್ನುತ್ತಿರಾ ಅಥವಾ ನಿಮ್ಮ ಭಯ ಊಹೆ ಮೇಲೆ ನಿಂತಿದೆಯೇ? ಚಿತ್ರ ಬಿಡುಗಡೆಗೆ ಭಯ ಇದ್ದರೆ ಪೊಲೀಸ್ ರಕ್ಷಣೆ ಪಡೆದುಕೊಳ್ಳಬಹುದು. ನೀವು ಯಾರೊಬ್ಬರ ಮೇಲೂ ನೇರವಾಗಿ ಆರೋಪ ಮಾಡುತ್ತಿಲ್ಲ. ಆದರೆ ಬೆದರಿಕೆ ಇದೆ ಅಂತ ಆರೋಪ ವ್ಯಕ್ತ ಪಡಿಸುತ್ತಿರುವಿರಿ. ನಿಮಗೆ ಭಯ ಇರುವುದು ಸ್ಪಷ್ಟವಾಗಿದ್ದರೆ ಅದು ಯಾರಿಂದ ಇರುವುದೆಂದು ತಿಳಿಸಿ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗಳಿಗೆ ಉತ್ತರಿಸಿದ ವಕೀಲರು, ಸಾಕಷ್ಟು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಬಿಡುಗಡೆಯ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು. ಅವರ ಭಯವನ್ನು ಅರಿತ ನ್ಯಾಯಾಧೀರು, ಚಿತ್ರ ಬಿಡುಗಡೆಯಾದರೆ ಸರ್ಕಾರ ಭದ್ರತೆಯನ್ನು ನೀಡಲು ಯಾವುದೇ ತೊಂದರೆಗಳಿಲ್ಲವಲ್ಲ ಎಂದು ಎಎಜಿ ಶಿವಣ್ಣ ಅವರನ್ನು ಪ್ರಶ್ನಿಸಿದರು.

ಚಿತ್ರ ಬಿಡುಗಡೆಗೆ ತೊಂದರೆಯಿಲ್ಲ. ಆದರೆ ಚಿತ್ರತಂಡವು ಎಲ್ಲಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಬಗ್ಗೆ ನಮಗೆ ಇದುವರೆಗೂ ಮಾಹಿತಿ ನೀಡಿಲ್ಲವೆಂದು ಉತ್ತರಿಸಿದರು. ಹಾಗಾದರೆ ಚಿತ್ರತಂಡ ಸೂಕ್ತ ಮಾಹಿತಿ ಒದಗಿಸಿದರೆ ಬಿಡುಗಡೆಗೆ ನಿಮ್ಮ ಕಡೆಯಿಂದ ತೊಂದರೆ ಇಲ್ಲವಲ್ಲಾ ಎಂದು ಈ ವೇಳೆ ಜಡ್ಜ್ ಮರುಪ್ರಶ್ನೆ ಹಾಕಿದರು. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಎಎಜಿ ಉತ್ತರಿಸಿದರು.

ಚಿತ್ರ ಬಿಡುಗಡೆಗೆ ನಾವು ಯಾವುದೇ ನಿರ್ಬಂಧ ಹೇರಲು ಬರುವುದಿಲ್ಲ. ಅದರೆ ಈ ಕುರಿತು ಕನ್ನಡ ಪರ ಸಂಘಟನೆಗಳು ಹೇಳಿಕೆ ನೀಡಿವೆ. ಸಂಘಟನೆಗಳು ಫಿಲಂ ಚೇಂಬರ್ ಅಧೀನದಲ್ಲಿವೆ, ಹೀಗಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ಫಿಲಂ ಚೇಂಬರ್ ಪರ ವಕೀಲರು ತಮ್ಮ ವಾದವನ್ನು ಮುಂದಿಟ್ಟರು.

ಚೇಂಬರ್ ಪರ ವಕೀಲರ ವಾದಕ್ಕೆ, ಪ್ರತಿಭಟನೆ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ ಎಂದು ಜಡ್ಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕದಲ್ಲಿ ಹಿಂದಿ ಮತ್ತು ತೆಲುಗು ಚಿತ್ರಗಳಿಗೆ ಈ ತೊಂದರೆ ಆಗುವುದಿಲ್ಲ. ಆದರೆ ತಮಿಳು ಚಿತ್ರಕ್ಕೆ ಮಾತ್ರ ಇಂತಹ ಸಮಸ್ಯೆ ಎದುರಾಗುತ್ತದೆ ಎಂದು ಕಾಲಾ ಪರ ವಕೀಲರು ವಾದಿಸಿದರು. ಜನಾಭಿಪ್ರಾಯ, ಜನರ ಇಚ್ಛೆಯನ್ನು ಬದಲಿಸುವಂತೆ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಏನು ಬೇಕು ಅದನ್ನು ಸ್ವೀಕರಿಸ್ತಾರೆ ಅಷ್ಟೇ ಎಂದು ಜಡ್ಜ್ ಉತ್ತರಿಸಿದರು.

ದಯಮಾಡಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ, ನಿರ್ಮಾಪಕರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಕಾಳಾ ಪರ ವಕೀಲರು ನ್ಯಾಯಾಧೀಶರಿಯಲ್ಲಿ ಮನವಿ ಮಾಡಿಕೊಂಡರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಕರ್ನಾಟಕದಲ್ಲಿ ಜನರ ಶಾಂತಿಗೆ ಭಂಗ ಆಗದಂತೆ ಪೊಲೀಸ್ ಕಣ್ಗಾವಲಿನಲ್ಲಿ ಚಲನಚಿತ್ರ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಿ. ಯಾವುದೇ ತೊಂದರೆ ಆಗಬಾರದು. ಅಲ್ಲದೇ ಸರ್ಕಾರ ಯಾವ ಮಾಹಿತಿ ಕೇಳುತ್ತದೋ ಅದನ್ನು ನೀಡಿ ಎಂದು ಚಿತ್ರತಂಡಕ್ಕೆ ಆದೇಶ ನೀಡಿದರು.

ಹೈಕೋರ್ಟ್‍ನಲ್ಲಿ ಚಿತ್ರ ಬಿಡುಗಡೆ ಏನಾಗುತ್ತದೆ ಎಂದು ಕಾತುರದಲ್ಲಿ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳು ಆದೇಶದ ಬರುತ್ತಿದ್ದಂತೆ ಪಟಾಕಿ ಹೊಡೆದು ಸಂಭ್ರಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *