ಮೋದಿ ಬಂದ ನಂತ್ರ ಕಾಶಿ ಬದಲಾಗಿದ್ಯಾ? ಜನ ಹೇಳೋದು ಏನು? ಗಂಗಾ ನದಿ ಹೇಗಿದೆ?

Public TV
6 Min Read

ಅರುಣ್ ಬಡಿಗೇರ್
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಗುಜರಾತಿನ ವಡೋದರದಿಂದ ಸ್ಪರ್ಧಿಸಿದ್ದ ಮೋದಿ ಈ ಬಾರಿ ವಾರಣಾಸಿಯಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ 5 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಕಾಶಿಯಲ್ಲಿ ಏನು ಬದಲಾಗಿದೆ? ಗಂಗಾ ನದಿ ಎಷ್ಟು ಸ್ವಚ್ಛವಾಗಿದೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಬುಲೆಟ್ ರಿಪೋರ್ಟರ್ ನಲ್ಲಿ ಉತ್ತರ ಸಿಕ್ಕಿದೆ. ಜನ ಹೇಳಿದ್ದು ಏನು? ಏನು ಆಗಬೇಕಿದೆ? ಜನ ಮತ್ತೆ ಮೋದಿಗೆ ವೋಟ್ ಹಾಕ್ತಾರಾ ಈ ಎಲ್ಲ ಪ್ರಶ್ನೆಗಳಿಗೆ ಜನ ನೀಡಿದ ಉತ್ತರ ಇಲ್ಲಿದೆ.

ವಾರಣಾಸಿ ಹೆಸರು ಬಂದಿದ್ದು ಹೇಗೆ?
‘ವರುಣಾ’ ಮತ್ತು ‘ಅಸ್ಸಿ’ ನದಿಗಳ ಮಧ್ಯ ಭಾಗದಲ್ಲಿರುವುದರಿಂದ ಈ ಪ್ರದೇಶಕ್ಕೆ ವಾರಣಾಸಿ ಹೆಸರು ಬಂದಿದೆ. ಆರಂಭದಲ್ಲಿ ಇದನ್ನ ವರುಣಾಆಸಿ ಎಂದು ಕರೆಯಲಾಗುತಿತ್ತು. ಕಾಲ ಕ್ರಮೇಣ ಅದು ವಾರಣಾಸಿ ಆಗಿ ಬದಲಾಯ್ತು. ಹಾಗೆಯೇ ಬನಾರಸ್ ಹೆಸರು ಬರಲು ಹಿನ್ನೆಲೆಯಿದೆ. ‘ಬನಾ’ ಅಂದ್ರೆ ಹಿಂದಿಯಲ್ಲಿ ‘ತಯಾರಿದೆ’, ‘ರಸ’ ಅಂದ್ರೆ ‘ನವರಸ’ಗಳು. ಇಲ್ಲಿಗೆ ಬರುವವರಿಗೆ 9 ನವರಸಗಳು ಸಿದ್ಧವಾಗಿ ಸಿಗುತ್ತದೆ ಎನ್ನುವುದಕ್ಕೆ ಬನಾರಸ್ ಅಂತಾ ಕರೆಯುತ್ತಾರೆ.

ಈ ಕ್ಷೇತ್ರ ಕಾಶಿ ವಿಶ್ವನಾಥನ ಸ್ಥಳ, ಶಿವನ ನಗರಿ ಎಂದು ಕರೆಯಲಾಗುತ್ತದೆ. 3500 ವರ್ಷಗಳ ಲಿಖಿತ ದಾಖಲೆ ಹೊಂದಿರೋ ಪುರಾತನ ನಗರಿ ಎಂದೇ ಕರೆಸಿಕೊಂಡಿದೆ. ಇಲ್ಲಿಗೆ 5,000ಕ್ಕೂ ಹೆಚ್ಚು ಪ್ರವಾಸಿಗರು ಪ್ರತಿ ನಿತ್ಯ ಬಂದು ಹೋಗುತ್ತಾರೆ.

ಎಲ್ಲೆಂದರಲ್ಲಿ ಜೋತು ಬಿದ್ದ ವೈರ್‍ಗಳು, ಎಲ್ಲೆಂದರಲ್ಲಿ ಎಸೆಯುತ್ತಿದ್ದ ಪ್ಲಾಸ್ಟಿಕ್ ಚೀಲಗಳು, ಗಂಗಾ ನದಿಯ ತಟದಲ್ಲಂತೂ ನಿಲ್ಲಲು ಅಸಾಧ್ಯವಾಗುವ ರೀತಿಯಲ್ಲಿ ನೈರ್ಮಲ್ಯ, ವಾಸನೆಯಿಂದ ತುಂಬಿರುತ್ತಿತ್ತು. ಆದರೆ ಈಗ ಕಾಶಿ ಬದಲಾಗಿದೆ. ಈ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಮಾತುಗಳು ಕೇಳಿ ಬರುತ್ತಿವೆ.

ಘಾಟ್‍ಗಳ ಸ್ವಚ್ಛತೆ ಆಗಿದ್ಯಾ?
ಎಲ್ಲರೂ ಹೇಳುವ ಹಾಗೆ ಘಾಟ್‍ಗಳಲ್ಲಿ ಸ್ವಚ್ಛತೆ ಕಾಣಿಸುತ್ತಿದೆ. 2014ರಲ್ಲಿದ್ದ ಘಾಟ್‍ಗಳಿಗೂ ಈಗಿರುವ ಘಾಟ್‍ಗಳಿಗೂ ತುಂಬಾ ವ್ಯತ್ಯಾಸವಿದೆ. ಘಾಟ್‍ಗಳಲ್ಲಿ ಪ್ರತಿ 4 ಗಂಟೆಗಳಿಗೊಮ್ಮೆ ಕಸವನ್ನು ಗುಡಿಸಲಾಗುತ್ತದೆ. ಗಂಗಾ ನದಿಯಲ್ಲಿ ಎಸೆಯುವ ಹೂ, ತೆಂಗಿನಕಾಯಿ, ಪ್ಲಾಸ್ಟಿಕ್ ಕಸವನ್ನು ಬೋಟ್‍ನಲ್ಲಿ ಹೋಗಿ ಸ್ವಚ್ಛಗೊಳಿಸಲಾಗುತ್ತದೆ. ಇನ್ನು ಪ್ರತಿ ಘಾಟ್‍ಗಳಲ್ಲೂ ಎರಡೆರಡು ಕಸದ ಡಬ್ಬಿಗಳನ್ನ ಇಡಲಾಗಿದೆ. ಜೊತೆಗೆ ಘಾಟ್‍ನಲ್ಲಿರುವ ಅರ್ಚಕರು, ನಾವಿಕರು, ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತದೆ. ಆದರೂ ಕೆಲ ಜನರು ಸಿಕ್ಕ ಸಿಕ್ಕ ಕಡೆ ಹೂವು, ತೆಂಗಿನಕಾಯಿ, ಪ್ಲಾಸ್ಟಿಕ್ ಚೀಲ ಎಸೆದು ಹೋಗುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.

ಗಂಗಾ ನದಿ ಸ್ವಚ್ಛವಾಗಿದ್ಯಾ?
ಘಾಟ್‍ಗಳಲ್ಲಿ ಸ್ವಚ್ಛತಾ ಕಾರ್ಯವೆಲ್ಲ ನಡೆಯುತ್ತಿದೆ. ಆದ್ರೆ, ವಾರಣಾಸಿಯಲ್ಲಿನ ಚರಂಡಿ ನೀರು ಇನ್ನೂ ಗಂಗಾ ನದಿಯನ್ನು ಸೇರುತ್ತಿದೆ. ಸುಮಾರು 175 ಕಡೆ ಇಂತಹ ಚರಂಡಿ ನೀರನ್ನು ಗಂಗಾ ನದಿಗೆ ಬಿಡುವ ಜಾಗಗಳಿವೆ. ಇದರಲ್ಲಿ ಪ್ರಮುಖ ಘಾಟ್‍ಗಳಲ್ಲಿನ ಈ ಮೋರಿ ನೀರನ್ನು ಬಿಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ ಆ ಎಲ್ಲ ಮೋರಿ ನೀರು ಘಾಟ್‍ಗಳನ್ನು ದಾಟಿ ಮುಂದೆ ಹೋದ ನಂತರ ಗಂಗಾ ನದಿಗೆ ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರನ್ನು ಬಿಡಲಾಗುತ್ತದೆ. ಬಳಿಕ ಇದೇ ಗಂಗಾ ನದಿಯ ನೀರನ್ನ ಶುದ್ಧೀಕರಿಸಿ ವಾರಣಾಸಿಯ ಜನತೆ ಕುಡಿಯುವ ನೀರನ್ನಾಗಿ ಸರಬರಾಜು ಮಾಡಲಾಗುತ್ತದೆ.

ಮೋದಿ ಬಂದ ನಂತರ ಘಾಟ್‍ಗಳಿಗೆ ಬೆಳಕಿನ ಅಲಂಕಾರ ಮಾಡಿಸಿದ್ರು, ಘಾಟ್‍ಗಳ ಸ್ವಚ್ಛತೆ ಮಾಡಿಸಿದ್ರು, ಆದ್ರೆ, ಘಾಟ್‍ಗಳಲ್ಲಿ ಕುಡಿಯುವ ನೀರಿಗಾಗಿ ಮಾಡಿಸಿದ ಟ್ಯಾಂಕ್‍ಗಳನ್ನು ಹಾಗೆ ಬಿಟ್ಟರು. ಪ್ರತಿ ಟ್ಯಾಂಕ್‍ಗಳಿಗೆ 5 ಲಕ್ಷ ಖರ್ಚಾಗಿದೆ. ಇನ್ನೂ ಗಂಗಾ ನದಿಗೆ ಬಿಡುವ ಕಲ್ಮಶ ನೀರನ್ನು ಮೊದಲು ನಿಲ್ಲಿಸಿ ಎನ್ನುವ ಮಾತನ್ನು ಇಲ್ಲಿನ ಸಾರ್ವಜನಿಕರು ಹೇಳುತ್ತಾರೆ. ನೋಡಲು ಚೆನ್ನಾಗಿದ್ದರೆ ಸಾಲದು, ಗಂಗಾ ನದಿಯೂ ಸ್ವಚ್ಛವಾಗಬೇಕು ಎನ್ನುವುದು ಜನರ ಕೂಗು.

ವಿದ್ಯುತ್ ತಂತಿಗಳು
ವಾರಣಾಸಿ ಗಲ್ಲಿ ಗಲ್ಲಿಗಳಿಂದ ಕೂಡಿದ ಜಾಗ. ಇಲ್ಲಿ ಒಂದು ಗಲ್ಲಿಯೊಳಗೆ ನುಗ್ಗಿದರೆ ಸಾಕು ಅದು ಇನ್ನೊಂದು ಜಾಗಕ್ಕೆ ತುಂಬಾ ಬೇಗನೆ ಮುಟ್ಟಿಸುತ್ತೆ, ಆದ್ರೆ ಸಿಕ್ಕಾಪಟ್ಟೆ ಇಕ್ಕಟ್ಟು ಇರುತ್ತೆ. ಇಂತಹ ಜಾಗದಲ್ಲೇ ಇಲ್ಲಿನ ಜನ ಬೈಕ್‍ನಲ್ಲಿ ಸವಾರಿ ಮಾಡ್ತಾರೆ. ಇಂತಹ ಜಾಗದಲ್ಲೇ ತರಕಾರಿ ಮಾರಲು ತಳ್ಳು ಗಾಡಿಯಲ್ಲಿ ಬರ್ತಾರೆ. ಈ ಜಾಗದಲ್ಲಿ ಸಂಚರಿಸುವುದೇ ಒಂದು ರೀತಿ ಚೆಂದ. ಇಂತಹ ಜಾಗದಲ್ಲಿ ಈ ಹಿಂದೆ ವಿದ್ಯುತ್ ಸಂಪರ್ಕಿಸುವ ತಂತಿಗಳು ಎಲ್ಲೆಂದರೆಲ್ಲಿ ತೂಗಾಡುತ್ತಿದ್ದವು, ಆದ್ರೆ ಇದೆಲ್ಲ ಈಗ ಬದಲಾಗಿದೆ. ಜೊತೆಗೆ ಕಾಶಿ ವಿಶ್ವನಾಥನ ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲೂ ಎಲ್ಲೆಂದರಲ್ಲಿ ಜೋತಾಡುತ್ತಿದ್ದ ವೈರ್‍ಗಳು ಈಗ ಭೂಮಿಯಡಿಯಲ್ಲಿ ಹೋಗಿವೆ. ಭೂಮಿಯ ಮೇಲ್ಭಾಗದಲ್ಲಿ ವಿದ್ಯುತ್ ದೀಪಗಳು ರಾರಾಜಿಸುತ್ತಿವೆ. ಇದು ಇಲ್ಲಿನ ಜನರ ಮನ ಸೆಳೆದಿದೆ. ಮಳೆಗಾಲ ಬಂದಾಗ ಯಾವಾಗ ಕೇಬಲ್‍ಗಳು ತುಂಡಾಗಿ ಬೀಳುತ್ತದೋ ಯಾವಾಗ ಶಾಕ್ ಹೊಡೆಯುತ್ತದೋ ಎನ್ನುವ ಭಯದಲ್ಲಿ ವಾಸಿಸುತ್ತಿದ್ದರಂತೆ. ಈಗ ಇದೆಲ್ಲ ಬದಲಾವಣೆ ನೋಡಿ ನಮಗೆ ತುಂಬ ಖುಷಿಯಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ವಿದ್ಯುತ್ ವ್ಯತ್ಯಯ ಇಲ್ಲ
ಇಲ್ಲಿನ ಜನರು ಮೋದಿ ಮತ್ತು ಯೋಗಿ ಆದಿತ್ಯನಾಥ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಲು ಕಾರಣ ಏನಂದ್ರೆ, ಅದು 24 ಗಂಟೆ ವಿದ್ಯುತ್ ಪೂರೈಕೆ. ಮುಂಚೆ ಇಲ್ಲಿ ದಿನಕ್ಕೆ 8 ರಿಂದ 10 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಆದ್ರೆ, ಈಗ ಇಲ್ಲಿ ವಿದ್ಯುತ್ ವ್ಯತ್ಯಯ ಇಲ್ಲದಿರೋದು ಜನರಿಗೆ ಮತ್ತಷ್ಟು ಮೋದಿ ಮೋದಿ ಅನ್ನುವಂತೆ ಮಾಡಿದೆ. ಆದರು ಇಲ್ಲಿ ಅಪರೂಪಕ್ಕೆ ಈಗ ದಿನಕ್ಕೆ ಒಂದೆರಡು ಗಂಟೆ ಕರೆಂಟ್ ಹೋಗುತ್ತದೆ. ಬೇಸಿಗೆಯಲ್ಲಿ ಇಲ್ಲಿನ 44-45 ಡಿಗ್ರಿ ಬಿಸಿಲನ್ನ ತಡೆದುಕೊಳ್ಳಲು ಫ್ಯಾನ್, ಕೂಲರ್, ಎಸಿ ಬೇಕಾಗುತ್ತದೆ. ಹಾಗಾಗಿ ಕರೆಂಟ್ ಇಲ್ಲದೆ ಇದ್ರೆ ಇಲ್ಲಿನ ಜನರ ಪಾಡು ಹೇಳೋ ಹಾಗೆ ಇಲ್ಲ. ಇನ್ನೂ ಅತೀ ಹೆಚ್ಚಾಗಿ ಇಲ್ಲಿ ಬಡವರ ಫ್ರಿಡ್ಜ್ ಮಡಿಕೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಗುಂಡಿಗಳಿಂದ ಮುಕ್ತಿ ಕಂಡ ರಸ್ತೆಗಳು
ನರೇಂದ್ರ ಮೋದಿ ಪ್ರಧಾನಿ ಅಂತಾ ವಾರಣಾಸಿ ಜನ ಮೋದಿ ಮೋದಿ ಅಂತಾ ಘೋಷಣೆ ಹಾಕುತ್ತಿಲ್ಲ. ಬದಲಾಗಿ ವಾರಣಾಸಿಯಲ್ಲಿ ಅಭಿವೃದ್ಧಿ ಆಗುತ್ತಿರುವುದರಿಂದ ಜನ ಮೋದಿಯನ್ನ ಪ್ರೀತಿಸೋಕೆ ಶುರು ಮಾಡಿದ್ದಾರೆ. ಮುಂಚೆ ಇಲ್ಲಿ ಗುಂಡಿಗಳಿಂದಲೇ ತುಂಬಿರುತ್ತಿದ್ದ ರಸ್ತೆಗಳು ಈಗ ನಯವಾಗಿ ಓಡುಡುವಂತಾಗಿವೆ. ವಿಮಾನ ನಿಲ್ದಾಣದಿಂದ ವಾರಣಾಸಿ ತಲುಪಲು ಸುಮಾರು 1 ಗಂಟೆ 45 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಕೇವಲ 45 ನಿಮಿಷದಲ್ಲಿ ವಾರಣಾಸಿ ತಲುಪಬಹದು. ಇದಕ್ಕಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಸೈಕಲ್ ಸವಾರರು, ಪ್ರಯಾಣಿಕರು ತುಂಬ ಸಂತಸ ವ್ಯಕ್ತಪಡಿಸುತ್ತಾರೆ.

ಶೌಚಾಲಯಗಳ ನಿರ್ಮಾಣ:
ಹಿಂದೆ ವಾರಣಾಸಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಭ್ಯಾಸವಾಗಿತ್ತು. ಇದರಿಂದ ಇಲ್ಲಿನ ಜನರು ಸೇರಿದಂತೆ ವ್ಯಾಪಾರಸ್ಥರು, ಪ್ರವಾಸಿಗರು ತುಂಬಾ ರೋಸಿ ಹೋಗಿದ್ದರು. ರಸ್ತೆ ಪಕ್ಕದಲ್ಲಿ ಓಡಾಡಬೇಕಾದರೂ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇತ್ತು. ಆದ್ರೆ ಈಗ ಪ್ರತಿ ಸರ್ಕಲ್‍ನಲ್ಲೊಂದು ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಎಲ್ಲರಿಗೂ ಶೌಚಾಲಯ ಬಳಕೆಯ ಅರಿವು ಮೂಡಿದೆ. ಈ ಬೆಳವಣಿಗೆಯಿಂದ ಮೋದಿ ಜನರ ಮನಸ್ಸನ್ನು ಗೆದ್ದಿದ್ದಾರೆ.

ಬದಲಾಗುತ್ತಿದ್ದಾರೆ ಜನ:
ಕೇವಲ ಕಾಶಿ ಬದಲಾಗುತ್ತಿಲ್ಲ, ಕೇವಲ ವಾರಣಾಸಿ ಅಭಿವೃದ್ಧಿ ಕಾಣುತ್ತಿಲ್ಲ. ಇಲ್ಲಿನ ಜನರು ಬದಲಾಗುತ್ತಿದ್ದಾರೆ, ಅಭಿವೃದ್ಧಿ ಆಗುತ್ತಿದ್ದಾರೆ. ಮೊದಲು ಇಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರು. ಆದ್ರೆ ಈಗ ಪ್ರತಿ ಅಂಗಡಿಯ ಮುಂಭಾಗದಲ್ಲಿ ಸ್ವತಃ ಅಂಗಡಿ ಮಾಲೀಕರೇ ಕಸದ ಡಬ್ಬಿಯನ್ನ ಇಟ್ಟಿರುತ್ತಾರೆ. ಎಲ್ಲೆಂದರಲ್ಲಿ ಬಿಸಾಕಿದರೆ ಅವರೇ ಬುದ್ಧಿ ಹೇಳುತ್ತಾರೆ. ಕಾರಿನಿಂದ ಗುಟ್ಕಾ ತಿಂದು ರ್ಯಾಪರ್ ಬಿಸಾಕುತ್ತಿದ್ದ ಚಾಲಕರು ಈಗ ಕಾರಿನಲ್ಲೇ ಗುಟಕಾ ರ್ಯಾಪರ್‍ಗಳನ್ನ ಇಟ್ಟುಕೊಳ್ಳುತ್ತಾರೆ, ಕಸದ ಡಬ್ಬಿ ಸಿಕ್ಕಾಗ ಅಲ್ಲಿ ಹಾಕುತ್ತಾರೆ. ಸ್ವಚ್ಛತೆಯನ್ನ ನೋಡಿ ಈಗ ತಾವು ಕೂಡ ಸ್ವಚ್ಛತೆ ಕಾಪಾಡೋದ್ರಲ್ಲಿ ನಿರತರಾಗಿದ್ದಾರೆ.

ಟ್ರಾಫಿಕ್ ಜಾಮ್:
ವಾರಣಾಸಿಯಲ್ಲಿನ ಟ್ರಾಫಿಕ್ ಜಾಮ್ ಬೆಂಗಳೂರನ್ನೂ ಮೀರಿಸುವಂತಿದೆ. ಬೆಂಗಳೂರಲ್ಲಿ ಕಾರುಗಳ ದರ್ಬಾರ್ ಇದ್ದರೆ ಇಲ್ಲಿ ಸೈಕಲ್ ರಿಕ್ಷಾ, ಆಟೋ, ಬ್ಯಾಟರಿ ಆಟೋ, ಬೈಕ್‍ಗಳು, ಕಾರುಗಳ ದರ್ಬಾರ್. ಇದರಲ್ಲಿ ಅತೀ ಮುಖ್ಯವಾಗಿ ಇಲ್ಲಿರುವ ಜನರಿಗೆ ಶಬ್ದಮಾಲಿನ್ಯದ ಅರಿವೇ ಇಲ್ಲದಂತಿದ್ದಾರೆ. ಒಂದು ಸಲ ರಸ್ತೆಗೆ ಹೋಗಿ ಬರುವಷ್ಟರಲ್ಲಿ ಕಿವಿ ಗುಂಯ್ ಅನ್ನೋದಂತೂ ಸತ್ಯ. ಹಾರ್ನ್ ಬಗ್ಗೆ ಇಲ್ಲಿರುವ ಜನರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ.

Share This Article
Leave a Comment

Leave a Reply

Your email address will not be published. Required fields are marked *