PublicTV Explainer: ಏನಿದು ಹಸಿರು ಪಟಾಕಿ? ಖರೀದಿಸುವಾಗ ಅವುಗಳನ್ನು ಗುರುತಿಸುವುದು ಹೇಗೆ?

Public TV
3 Min Read

ಭಾರತೀಯ ಸಂಸ್ಕೃತಿ ಪ್ರತೀಕ ಬೆಳಕಿನ ಹಬ್ಬ ದೀಪಾವಳಿ (Diwali) ಸಮೀಪಿಸುತ್ತಿದೆ. ಮನೆಗಳಲ್ಲಿ ದೀಪಗಳನ್ನು ಬೆಳಗಿ, ಪಟಾಕಿ ಸಿಡಿಸಿ ಸಂಭ್ರಮಿಸಲು ಎಲ್ಲರೂ ಕಾಯುತ್ತಿದ್ದಾರೆ. ಪಟಾಕಿ ಹಬ್ಬ ಬಂತೆಂದರೆ ಸಾಕು, ಪರಿಸರ ಕಾಳಜಿ ಕೂಗೂ ಕೇಳಿಬರುತ್ತೆ. ವಾಯುಮಾಲಿನ್ಯ ಸಮಸ್ಯೆ ಕಾರಣ ಹಾನಿಕಾರಕ ಪಟಾಕಿಗಳ ಬದಲಿಗೆ ಪರಿಸರಕ್ಕೆ ಪೂರಕವಾದ ಪಟಾಕಿಗಳನ್ನು ಸಿಡಿಸುವಂತೆ ಸರ್ಕಾರಗಳು ಪ್ರತಿ ವರ್ಷ ಜಾಗೃತಿ ಮೂಡಿಸುತ್ತಲೇ ಇವೆ. ಈ ಅಭಿಯಾನಕ್ಕೆ ಅನೇಕ ಸಂಘಟನೆಗಳು ಸಹ ಕೈಜೋಡಿಸಿವೆ.

ವಾಯುಮಾಲಿನ್ಯದ ಕೇಂದ್ರ ಸ್ಥಾನವಾದ ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಜೈಲು ಗ್ಯಾರಂಟಿ. ಅಂತೆಯೇ ಅನೇಕ ರಾಜ್ಯಗಳಲ್ಲಿ ಸಂಪೂರ್ಣ ನಿರ್ಬಂಧ ವಿಧಿಸದಿದ್ದರೂ, ಪರಿಸರ ಸ್ನೇಹಿಯಾದ ಹಸಿರು ಪಟಾಕಿಗಳನ್ನು (Green Crackers) ಸಿಡಿಸುವಂತೆ ಸಲಹೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್

ಹಾಗಾದರೆ ಏನಿದು ಹಸಿರು ಪಟಾಕಿ? ಮಾರುಕಟ್ಟೆಗಳಲ್ಲಿ ಅತ್ಯಾಕರ್ಷಕ ಪ್ಯಾಕೆಟ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪರಿಸರಕ್ಕೆ ಹಾನಿಕಾರವಾದ ಪಟಾಕಿಗಳ ನಡುವೆ ಹಸಿರು ಪಟಾಕಿಗಳನ್ನು ಗುರುತಿಸಿ ಖರೀದಿಸುವುದಾದರೂ ಹೇಗೆ?

ಸಾಮಾನ್ಯ ಪಟಾಕಿ ಹಾಗೂ ಹಸಿರು ಪಟಾಕಿಗೆ ಇರುವ ವ್ಯತ್ಯಾಸವೇನು?
ಒಂದರ್ಥದಲ್ಲಿ ಹೇಳುವುದಾದರೆ, ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಎರಡು ಕೂಡ ಮಾಲಿನ್ಯ ಉಂಟು ಮಾಡುತ್ತವೆ. ಆದರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇಕಡಾ 30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕವನ್ನು ಹೊರಸೂಸುತ್ತದೆ. ಹಸಿರು ಪಟಾಕಿಗಳು ಮಾಲಿನ್ಯಕಾರಕ ಹೊಗೆ ಹೊರಸೂಸುವುದನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಧೂಳನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಬೇರಿಯಮ್ ನೈಟ್ರೇಟ್‌ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ. ಸಾಮಾನ್ಯ ಪಟಾಕಿಗಳಲ್ಲಿನ ವಿಷಕಾರಿ ಲೋಹಗಳನ್ನು ಕಡಿಮೆ ಅಪಾಯಕಾರಿ ಸಂಯುಕ್ತಗಳೊಂದಿಗೆ ಬದಲಾಯಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರಕಾರ, ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಕಳಪೆಯಾಗಿರುವ ನಗರಗಳು ಮತ್ತು ಪಟ್ಟಣಗಳಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ. ಇದನ್ನೂ ಓದಿ: ಸೂರ್ಯಗ್ರಹಣ ಬರಿಗಣ್ಣಲ್ಲಿ ನೋಡಲೇಬೇಡಿ – ಗ್ರಹಣದ ಬಗ್ಗೆ ಮಾಹಿತಿ ನೀಡಿದ್ದಾರೆ ಭೌತಶಾಸ್ತ್ರಜ್ಞ ಎ.ಪಿ ಭಟ್

FIRE CRACKERS

ಹಸಿರು ಪಟಾಕಿ ಎಲ್ಲಿ ಸಿಗುತ್ತೆ? ಗುರುತಿಸುವುದು ಹೇಗೆ?
ಹಸಿರು ಪಟಾಕಿಗಳ ಉತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರ ದೇಶದ 230 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಸಿರು ಪಟಾಕಿಗಳ ಲಭ್ಯತೆ ಹಾಗೂ ಅವುಗಳನ್ನು ಗುರುತಿಸುವ ಬಗ್ಗೆ ಜನರಲ್ಲಿ ಗೊಂದಲ ಇದೆ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆದಿರುವ ಮಳಿಗೆಗಳಿಗಷ್ಟೇ ಮಾರಾಟಕ್ಕೆ ಅನುಮತಿ ನೀಡಿರುತ್ತದೆ.

ಗ್ರಾಹಕರು ತಾವು ಖರೀದಿಸುವ ಪಟಾಕಿಗಳು ಹಸಿರು ಪಟಾಕಿ ಹೌದೆ? ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು, ಪಟಾಕಿ ಪ್ಯಾಕ್‌ ಮೇಲಿನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಮೂಲಕ ಸಹ ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ರಾಜ್ಯಾದ್ಯಂತ 10,889 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿದ ಸರ್ಕಾರ

CSIR NEERI ಗ್ರೀನ್ ಕ್ಯೂಆರ್ ಕೋಡ್ ಅಪ್ಲಿಕೇಶನ್
ಹಸಿರು ಪಟಾಕಿಗಳು ಹೂ ಕುಂಡ, ಸುರುಸುರು ಬತ್ತಿ ರೀತಿ ಇರುತ್ತವೆ. ನಕಲಿ ಉತ್ಪನ್ನಗಳ ಮಾರಾಟ ತಪ್ಪಿಸಲು ಹಸಿರು ಪಟಾಕಿಗಳ ಮೇಲೆ ಕ್ಯೂಆರ್‌ ಕೋಡ್‌ ವ್ಯವಸ್ಥೆ ಇರುತ್ತದೆ. ಹಸಿರು ಪಟಾಕಿಗಳು ಶೆಲ್‌ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಬಾರದು. ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಗೂಗಲ್ ಪ್ಲೇಸ್ಟೋರ್‌ನಿಂದ CSIR NEERI ಗ್ರೀನ್ ಕ್ಯೂಆರ್ ಕೋಡ್ ಅಪ್ಲಿಕೇಶನ್ ಬಳಸಿ ಸ್ಕ್ಯಾನರ್ ಅನ್ನು ಡೌನ್‌ಲೋಡ್ ಮಾಡಿ ಅದರ ಮೂಲಕ ಗ್ರಾಹಕರು ಹಸಿರು ಪಟಾಕಿಗಳನ್ನು ಗುರುತಿಸಬಹುದು.

ಹಸಿರು ಪಟಾಕಿ ಸಿಡಿಸುವವರು ಈ ಅಂಶಗಳನ್ನು ಗಮನದಲ್ಲಿಡಿ
ಹಸಿರು ಪಟಾಕಿಗಳನ್ನು ಸುಡುವಾಗ ಪಟಾಕಿ ಹಾಗೂ ನಿಮ್ಮ ನಡುವಿನ ಅಂತರ ಹೆಚ್ಚಿರಬೇಕು. ಕೈಯನ್ನು ನೇರವಾಗಿ ಇರಿಸಿ ಪಟಾಕಿಗೆ ಕಿಡಿ ತಾಗಿಸಬೇಕು. ಪಟಾಕಿಗಳನ್ನು ಸಿಡಿಸುವಾಗ ಬೂಟುಗಳನ್ನು ಧರಿಸುವುದು ಉತ್ತಮ. ಆಟದ ಮೈದಾನಗಳಂತಹ ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದು ಒಳಿತು. ಹಸಿರು ಪಟಾಕಿಗಳನ್ನು ಬೆಳಗಿಸುವ ಸಂದರ್ಭದಲ್ಲಿ ಒಂದೆರಡು ಬಕೆಟ್‌ಗಳಷ್ಟು ನೀರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು. ಪಟಾಕಿ ಸಿಡಿಸುವವರು ಉದ್ದವಾದ, ಸಡಿಲವಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *