ಅಳುವ ಕ್ಲಬ್‌ಗಳು ಎಂದರೇನು? ಮೊದಲು ಎಲ್ಲಿ ಆರಂಭವಾಯ್ತು?

Public TV
3 Min Read

ಕೆಲಸದ ಒತ್ತಡ, ಒಂಟಿ ಜೀವನ ಅಥವಾ ಮಾನಸಿಕ ಖಿನ್ನತೆ ಇದನ್ನೆಲ್ಲಾ ದೂರ ಮಾಡಲು ಬೆಂಗಳೂರಿನಂತಹ ನಗರಗಳಲ್ಲಿ ಲಾಫಿಂಗ್ ಕ್ಲಬ್ ಅಂತ ಬೆಳಗ್ಗೆ ಅಥವಾ ಸಂಜೆ ಜನ ಸೇರಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹೋಗುವುದನ್ನು ನಾವು ಕೇಳಿದ್ದೇವೆ. ಅದೇ ರೀತಿ ತನ್ನ ಎಲ್ಲಾ ಬೇಸರಗಳನ್ನು ಹೊರಹಾಕಲು ಅಳುವ ಕ್ಲಬ್ (Crying Club) ಅಂತ ಇದೆ ಅಂದ್ರೆ ನೀವು ನಂಬ್ತೀರಾ?

ಹೌದು, ಇದು ಆಶ್ಚರ್ಯವೆನಿಸಿದರೂ ಸತ್ಯ. ಒತ್ತಡ ಮತ್ತು ನಿರಾಶೆಗಳ ನಡುವೆ ನಮ್ಮ ಭಾವನೆಗಳನ್ನು ಹೊರಹಾಕಲು ಮಾಡಿಕೊಳ್ಳಲು ಮುಂಬೈ, ದೆಹಲಿ ಸೇರಿ ಅನೇಕ ಮಹಾನಗರಗಳು  ಅಳುವ ಕ್ಲಬ್ ಅನ್ನು ಪರಿಚಯಿಸಿದೆ. 

ಸಾಂದರ್ಭಿಕ ಚಿತ್ರ

ಅಳುವ ಕ್ಲಬ್‌ಗಳು ಎಂದರೇನು? 

ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲಿರುವ ಸುರಕ್ಷಿತ ಸ್ಥಳವಾಗಿದೆ. ಇಲ್ಲಿ ಯಾರೇ ತಮ್ಮ ಮಾನಸಿಕ ದುಗುಡಗಳನ್ನು ಹಾಕಿಕೊಂಡರೆ ಯಾರೂ ಸಹ ತೀರ್ಪುರಹಿತಗಳನ್ನು ನೀಡುವುದಿಲ್ಲ. ಇದು ಕೇವಲ ಬೆಂಬಲ ನೀಡುವ ಅಪರಿಚಿತರು ಮುಕ್ತವಾಗಿ ಕೇಳಲು ಸಿದ್ಧರಿರುವ ಸ್ಥಳವಾಗಿದೆ.

ಎಲ್ಲೆಲ್ಲಿ ಈ  ಕ್ಲಬ್‌ಗಳು ಇವೆ?

ಇತ್ತೀಚೆಗೆ ಮುಂಬೈನಲ್ಲಿ (Mumbai) ದಿ ಕ್ರೈ ಕ್ಲಬ್ ಇಂತಹದೊಂದು ನೂತನ ಪರಿಕಲ್ಪನೆಯನ್ನು ಪರಿಚಯಿಸಿದೆ. ಸೂರತ್‌ನಲ್ಲಿ 2017 ರಿಂದ ಆರೋಗ್ಯಕರ ಕ್ರೈಯಿಂಗ್ ಕ್ಲಬ್ ಇದೆ, ಅಲ್ಲಿ ಜನರು ತಿಂಗಳಿಗೊಮ್ಮೆ ಅಳಲು ಸೇರುತ್ತಾರೆ. 

ಅಳುವ ಕ್ಲಬ್‌ಗಳು ಏಕೆ ಫೇಮಸ್ ಆಗುತ್ತಿವೆ? 

ಭಾವನೆಗಳನ್ನು ನಿಯಂತ್ರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಪರಿಹಾರವನ್ನು ಉತ್ತೇಜಿಸಲು ಅಳುವುದು ಮಾನಸಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತದೆ.

ಭಾವನಾತ್ಮಕ ವಿಚಾರಕ್ಕೆ ಅಳುವುದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದು ಒತ್ತಡದ ನಂತರ ದೇಹದ ಮನಸ್ಥಿತಿಯನ್ನು ಶಾಂತಗೊಳಿಸುತ್ತದೆ. ಮನಸ್ಥಿತಿಯನ್ನು ಸುಧಾರಿಸುವ ಮತ್ತು ನೋವನ್ನು ನಿವಾರಿಸುವ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. 

AI ಚಿತ್ರ

ಅಳು ದುಃಖವನ್ನು ಸೂಚಿಸುವ ಮೂಲಕ ಮತ್ತು ಭಾವನಾತ್ಮಕ ಸಂಪರ್ಕವನ್ನು ಬೆಳೆಸುವ ಮೂಲಕ ಸಾಮಾಜಿಕ ಬೆಂಬಲವನ್ನು ಬಯಸುತ್ತದೆ. ಇಂತಹ ಎಲ್ಲ ಮನಸ್ಥಿತಿಗಳಿಗೆ ಬೆಂಬಲವನ್ನು ನೀಡುವ ಮೂಲಕ ಅಳುವ ಕ್ಲಬ್ ಜನಪ್ರಿಯಗಳಿಸುತ್ತಿದೆ.

ಅಳುವ ಕ್ಲಬ್‌ ಎಲ್ಲಿಂದ ಬಂತು?

ಇದು ಜಪಾನ್‌ನಿಂದ (Japan) ಬಂದಿದೆ. ಜಪಾನ್‌ನಲ್ಲಿ ಈ ಕ್ಲಬ್ ಅನ್ನು ರುಯಿಕಾಟ್ಸು ಎಂದು ಕರೆಯುತ್ತಾರೆ. ಅಂದರೆ ಕಣ್ಣೀರಿನ ಚಟುವಟಿಕೆ ಎಂದರ್ಥ. ಇದು ಜಪಾನ್‌ನಲ್ಲಿ ಜನರ ಒತ್ತಡವನ್ನು ನಿವಾರಿಸಲು, ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಲು ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಉದ್ದೇಶಪೂರ್ವಕವಾಗಿ ಆರಂಭಿಸಿದ್ದಾರೆ. 

ರುಯಿಕಾಟ್ಸುನಲ್ಲಿ ಭಾಗವಹಿಸುವವರು ಭಾವನಾತ್ಮಕ ಚಲನಚಿತ್ರಗಳನ್ನು ವೀಕ್ಷಿಸಲು, ಕಥೆಗಳನ್ನು ಕೇಳಲು ಅಥವಾ ಹೃದಯಸ್ಪರ್ಶಿ ಪತ್ರಗಳನ್ನು ಓದಲು ಒಟ್ಟುಗೂಡುತ್ತಾರೆ. ಅಳುವು ಜನರ ಭಾವನೆಗಳನ್ನು ಮನಸ್ಸಿನಿಂದ ಹೊರಹಾಕಲು ಸಹಾಯ ಮಾಡುತ್ತದೆ ಎಂಬುದು ಈ ರುಯಿಕಾಟ್ಸುನ ಕಲ್ಪನೆ. 

ಜಪಾನ್‌ನಲ್ಲಿ ಈ ಪರಿಕಲ್ಪನೆ ಹೇಗೆ ಬಂತು?

ಮೊದಲು 2013ರ ಸುಮಾರಿಗೆ ಜಪಾನಿನ ಉದ್ಯಮಿ ಹಿರೋಕಿ ಟೆರೈ ಅವರು ಪರಿಚಯಿಸಿದರು. ಅವರು ಮೊದಲು ‘ಡಿವೋರ್ಸ್ ಸೆರೆಮನಿ’ ಮಾಡುವ ಮೂಲಕ ಎಲ್ಲರ ಗಮನಸೆಳೆದರು. ಒತ್ತಡದ ಜೀವನವನ್ನು ನಡೆಸುತ್ತಿರುವ ಜನರು ಸಾಮಾನ್ಯವಾಗಿ ಅತ್ತ ನಂತರ ಅವರ ಮನಸ್ಸು ಹಗುರವಾಗುತ್ತದೆ ಎಂದು ಅವರು ಗಮನಿಸಿದ್ದರು. ಇದರಿಂದ ಅವರು ಜನರ ಭಾವನಾತ್ಮಕ ಒತ್ತಡವನ್ನು ನಿವಾರಿಸಲು ಇದನ್ನು ಪ್ರಾರಂಭಿಸಿದರು.

ಜಪಾನ್‌ನಲ್ಲಿ ಕೆಲಸಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಇಂತಹ ವಾತಾವರಣದಲ್ಲಿ, ಒತ್ತಡ ಹಾಗೂ ಭಾವನೆಗಳನ್ನು ಹೊರಹಾಕಲು ರುಯಿಕಾಟ್ಸು ಒಂದು ಒಳ್ಳೆಯ ಸ್ಥಳವೆಂದು ಅಲ್ಲಿನ ಜನರು ಭಾವಿಸುತ್ತಾರೆ. ಈ ಒಂದು ಚಟುವಟಿಕೆಯು ಒತ್ತಡವನ್ನು ಹೆಚ್ಚು ಮಾಡುವಂತಹ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಲ್ಲಿನ ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.

ಜಪಾನಿನಲ್ಲೇ ಪ್ರಾರಂಭವಾದ ಅಳುವ ಕ್ಲಬ್ ಇದೀಗ ಭಾರತದಲ್ಲೂ ಜನಪ್ರಿಯತೆಯನ್ನು ಪಡೆಯುತ್ತಿದೆ. ಒಂಟಿತನ, ಕೆಲಸದ ಒತ್ತಡ, ಮಾನಸಿಕ ಖಿನ್ನತೆ, ಭಾವನೆಗಳನ್ನು ನಿಯಂತ್ರಣ ಮಾಡಲು ಈ ಅಳುವ ಕ್ಲಬ್ ಸಹಾಯ ಮಾಡುತ್ತದೆ ಎಂಬುದು ಕೆಲವು ತಜ್ಞರ ಅನಿಸಿಕೆಯಾಗಿದೆ.

Share This Article