5 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶ – ಇಬ್ಬರ ಬಂಧನ

Public TV
2 Min Read

ಕಾರವಾರ: ಐದು ಕೋಟಿ ಮೌಲ್ಯದ ನಿಬರ್ಂಧಿತ ತಿಮಿಂಗಿಲದ ವಾಂತಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಡಿವೈಎಸ್‍ಪಿ ರವಿ ಡಿ ನಾಯ್ಕ್ ಅವರ ನೇತೃತ್ವದಲ್ಲಿ ಸಿಪಿಐ ರಾಮಚಂದ್ರ ನಾಯಕ್, ಪಿಎಸ್‍ಐ ಭೀಮಾಶಂಕರ್, ಪಿಎಸ್‍ಐ ಈರಯ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು ಐದು ಕೋಟಿ ಮೌಲ್ಯದ ಐದು ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಅನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಮೂಲದ ಸಂತೋಷ್ ಕಾಮತ್, ಶಿರಸಿಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳಾಗಿದ್ದು, ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳು!

ಏನಿದು ತಿಮಿಂಗಿಲದ ವಾಂತಿ?
ಸಮುದ್ರದಲ್ಲಿ ತಿಮಿಂಗಿಲವು ತಿಂದ ಆಹಾರವು ಜೀರ್ಣಿಸಿಕೊಳ್ಳಲಾಗದೇ ಮರಳಿ ಅದನ್ನು ಹೊರ ಕಕ್ಕುತ್ತವೆ. ಈ ಹೊರ ಕಕ್ಕಿದ ಆಹಾರವು ದ್ರವರೂಪದಲ್ಲಿ ಗಟ್ಟಿಯಾಗಿರುತ್ತದೆ. ಇದಕ್ಕೆ ಅಂಬರ್ ಗ್ರೀಸ್ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಈ ದ್ರವರೂಪದ ಗಟ್ಟಿಯಾದ ವಸ್ತುವು ಮೊದಲು ಸಮುದ್ರ ಆಳದಲ್ಲಿ ಇದ್ದು ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತವೆ. ಹೀಗೆ ತೇಲಿದ ತಿಮಿಂಗಿಲದ ವಾಂತಿಯು ಅತೀ ಅಮುಲ್ಯವಾಗಿದ್ದು ಕೆಟ್ಟ ವಾಸನೆ ಇದ್ದರೂ ಸಹ ಇದು ಕೋಟಿಗಟ್ಟಲೇ ಬೆಲೆಬಾಳುತ್ತದೆ. ಅರಣ್ಯ ಕಾಯ್ದೆಯಡಿ ಈ ತಿಮಿಂಗಿಲದ ವಾಂತಿಯನ್ನು ಮಾರಾಟಮಾಡುವುದು ಭಾರತದಲ್ಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಹಾಲಿ ಶಾಸಕನಿಗೆ ಬಾಗಿಲು ಮುಚ್ಚಿದ ಜೆಡಿಎಸ್ – ದೇವೇಗೌಡರಿಂದ್ಲೇ ಡೋರ್ ಕ್ಲೋಸ್ ಸಂದೇಶ

ಕೋಟಿ ಮೌಲ್ಯ ಏಕೆ?
ಈ ತಿಮಿಂಗಿಲದ ವಾಂತಿ ಅಪರೂಪದ್ದಾಗಿದೆ. ಇವುಗಳನ್ನು ಹೊರದೇಶಗಳಲ್ಲಿ ಸುಗಂದ ದ್ರವ್ಯ ತಯಾರಿಸಲು ಬಳಸಲಾಗುತ್ತದೆ. ಇದರಿಂದ ತಯಾರಾದ ಸುಗಂಧ ದ್ರವ್ಯಕ್ಕೆ ಗಲ್ಛ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಸಹ ಇದೆ. ಹಲವು ದೇಶದಲ್ಲಿ ತಿಮಿಂಗಿಲದ ವಾಂತಿ ಮಾರಾಟಕ್ಕೆ ಅವಕಾಶಗಳಿವೆ. ಅತೀ ವಿರಳವಾಗಿ ಸಿಗುವುದರಿಂದ ಇವುಗಳಿಗೆ ಬೇಡಿಕೆ ಇದ್ದು ಭಾರತದಲ್ಲಿ ನಿರ್ಬಂಧ ಇರುವುದರಿಂದ ಮುಂಬೈ ಮೂಲಕ ಇತರೆ ದೇಶಗಳಿಗೆ ಇವುಗಳನ್ನು ಕಳ್ಳಹಾದಿಯಲ್ಲಿ ಸಾಗಿಸಿ ಹಣ ಸಂಪಾದಿಸುತ್ತಾರೆ. ಜಿಲ್ಲೆಯಲ್ಲಿ ಈ ಹಿಂದೆ ಮುರುಡೇಶ್ವರದಲ್ಲಿ ಒಂದು ಕೆಜಿಗೂ ಹೆಚ್ಚು ಮೌಲ್ಯದ ಅಂಬರ್ ಗ್ರೀಸ್ ಇತ್ತೀಚೆಗೆ ದೊರಕಿತ್ತು. ಇದನ್ನು ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆದರೆ ಇದೀಗ ಐದು ಕೆಜಿಯಷ್ಟು ತೂಕದ ತಿಮಿಂಗಿಲದ ವಾಂತಿ ದೊರೆತಿದ್ದು ಇದೇ ಮೊದಲ ಘಟನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *