ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್‌!

Public TV
2 Min Read

ಗಯಾನಾ: ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಉಗಾಂಡಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 134 ರನ್‌ಗಳ ಅಂತರದಿಂದ ಗೆದ್ದು T20 ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದೆ. ಟಿ20 ವಿಶ್ವಕಪ್‌ ಇತಿಹಾಸದಲ್ಲೇ 2ನೇ ಅತಿ ದೊಡ್ಡ ಅಂತರದ ಗೆಲುವು ಇದಾಗಿದೆ. ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ 2007ರ ಚೊಚ್ಚಲ ಟೂರ್ನಿಯಲ್ಲಿ ಶ್ರೀಲಂಕಾ 172 ರನ್‌ಗಳಿಂದ ಕೀನ್ಯಾ ತಂಡವನ್ನು ಸೋಲಿಸಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ತಂಡ 20 ಓವರ್‌ಗಳಲ್ಲಿ 173 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಉಗಾಂಡಾ ತಂಡ ಕೇವಲ 39 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. 173 ರನ್‌ಗಳ ಸ್ಪರ್ಧಾತ್ಮಕ ರನ್‌ ಗುರಿ ಬೆನ್ನತ್ತಿದ್ದ ಉಗಾಂಡಾ ತಂಡದ ಪರ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರದ ಕಾರಣ 12 ಓವರ್‌ಗಳಲ್ಲಿ 39 ರನ್‌ನ್‌ಗಳಿಗೆ ಸರ್ವಪತನ ಕಂಡಿತು.

ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ವಿಂಡೀಸ್‌ ಪರ ಬೌಲಿಂಗ್‌ನಲ್ಲಿ ಅಕೇಲ್ ಹೊಸೈನ್ ಅಬ್ಬರಿಸಿ ಬೊಬ್ಬಿರಿದರು. ಉಗಾಂಡಾ ಬ್ಯಾಟರ್ಸ್‌ಗಳನ್ನ ದುಸ್ವಪ್ನವಾಗಿ ಕಾಡಿದರು. 4 ಓವರ್‌ ಬೌಲಿಂಗ್‌ ಮಾಡಿದ ಹೊಸೈನ್‌ ಕೇವಲ 11 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಅಲ್ಝಾರಿ ಜೋಸೆಫ್‌ 2 ವಿಕೆಟ್‌ ಹಾಗೂ ರೊಮಾರಿಯೋ ಶೆಫರ್ಡ್ಚ್‌, ಆಂಡ್ರೆ ರಸ್ಸೆಲ್‌, ಗುಡಾಕೇಶ್ ಮೋತಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ಪರ ಜಾನ್ಸನ್ ಚಾರ್ಲ್ಸ್ 44 ರನ್‌, ಬ್ರಾಂಡನ್‌ ಕಿಂಗ್ಸ್‌ 13 ರನ್‌, ನಿಕೋಲಸ್‌ ಪೂರನ್‌ 22 ರನ್‌, ರೋವ್ಮನ್‌ ಪೋವೆಲ್‌ 23 ರನ್‌, ಶೆರ್ಫೇನ್ ರುದರ್ಫೋರ್ಡ್ 22 ರನ್‌, ಆಂಡ್ರೆ ರಸೆಲ್‌ 30 ರನ್‌ ಹಾಗೂ ರೋಮಾರಿಯೋ ಶೆಫರ್ಡ್‌ 5 ರನ್‌ ಗಳಿಸಿದರು.

T20 ವಿಶ್ವಕಪ್‌ನಲ್ಲಿ ದೊಡ್ಡ ಗೆಲುವು ಸಾಧಿಸಿದ ತಂಡಗಳು
* ಶ್ರೀಲಂಕಾ – 172 ರನ್‌ – ಕೀನ್ಯಾ ವಿರುದ್ಧ – 2007ರಲ್ಲಿ
* ವೆಸ್ಟ್ ಇಂಡೀಸ್ – 134 ರನ್‌ – ಉಗಾಂಡಾ ವಿರುದ್ಧ – 2024ರಲ್ಲಿ
* ಅಫ್ಘಾನಿಸ್ತಾನ – 130 ರನ್‌ – ಸ್ಕಾಟ್‌ಲೆಂಡ್‌ ವಿರುದ್ಧ – 2021ರಲ್ಲಿ
* ದಕ್ಷಿಣ ಆಫ್ರಿಕಾ – 130 ರನ್‌ – ಸ್ಕಾಟ್‌ಲೆಂಡ್‌ ವಿರುದ್ಧ – 2009 ರಲ್ಲಿ
* ಅಫ್ಘಾನಿಸ್ತಾನ – 125 ರನ್‌ – ಉಗಾಂಡಾ ವಿರುದ್ಧ – 2024ರಲ್ಲಿ
* ಇಂಗ್ಲೆಂಡ್ – 116 ರನ್‌ – ಅಫ್ಘಾನಿಸ್ತಾನ ವಿರುದ್ಧ – 2012ರಲ್ಲಿ

Share This Article