ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

Public TV
2 Min Read

ಬ್ರಿಡ್ಜ್‌ಟೌನ್: ವೆಸ್ಟ್ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು 2 ವಿಶ್ವದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ 12 ಸಿಕ್ಸರ್ ಸಿಡಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ 3 ಬಾರಿ 10ಕ್ಕೂ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದರ ಜೊತೆಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆಯನ್ನ ತಮ್ಮ ಹೆಸರಿಗೆ ಗೇಲ್ ವರ್ಗಾಯಿಸಿಕೊಂಡಿದ್ದಾರೆ.

39 ವರ್ಷದ ಗೇಲ್ ಕಳೆದ ವರ್ಷದ ಮಾರ್ಚ್ ನಲ್ಲಿ ಯುಎಇ ವಿರುದ್ಧ 11 ಸಿಕ್ಸ್ ಸಿಡಿಸಿದ್ದರೆ, 2015ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 16 ಸಿಕ್ಸ್ ಚಚ್ಚಿದ್ದರು.

ಯಾರು ಎಷ್ಟು ಸಿಕ್ಸ್ ಹೊಡೆದಿದ್ದಾರೆ?
ಏಕದಿನದಲ್ಲಿ ಗೇಲ್ 479 ಸಿಕ್ಸ್ ಹೊಡೆಯುವ ಮೂಲಕ ಈಗ ಅಗ್ರಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ 476, ನ್ಯೂಜಿಲೆಂಡಿನ ಬ್ರೆಂಡನ್ ಮೆಕ್ಕಲಂ 398 ಸಿಕ್ಸ್ ಹೊಡೆಯುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲೂ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ 905 ಸಿಕ್ಸ್ ಹೊಡೆದಿದ್ದರೆ, ವೆಸ್ಟ್ ಇಂಡೀಸಿನ ಕಿರಾನ್ ಪೊಲಾರ್ಡ್ 563, ಮೆಕ್ಕಲಂ 485 ಸಿಕ್ಸ್ ಚಚ್ಚಿದ್ದಾರೆ.

ಇದರ ಜೊತೆಯಲ್ಲೇ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಗೇಲ್ ಇಂಗ್ಲೆಂಡ್ ವಿರುದ್ಧ 100 ಸಿಕ್ಸ್ ಹೊಡೆದಿದ್ದಾರೆ. 31 ಏಕದಿನದಲ್ಲಿ 57 ಸಿಕ್ಸ್, 11 ಟಿ20ಯಲ್ಲಿ 28 ಸಿಕ್ಸ್, 20 ಟೆಸ್ಟ್ ಪಂದ್ಯಗಳಲ್ಲಿ 15 ಸಿಕ್ಸ್ ಹೊಡೆದಿದ್ದಾರೆ. ಈ ಮೂಲಕ ತಂಡವೊಂದರ ವಿರುದ್ಧ 100 ಸಿಕ್ಸರ್ ಹೊಡೆದ ಮೊದಲ ಆಟಗಾರ ಎನ್ನುವ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.

ಸಿಕ್ಸರ್‌ಗಳ ಸುರಿಮಳೆ:
ಆರಂಭಿಕರಾಗಿ ಅಂಗಳಕ್ಕೆ ಇಳಿದ ಗೇಲ್ 76 ಎಸೆತಗಳಲ್ಲಿ 50 ರನ್(2 ಬೌಂಡರಿ, 3 ಸಿಕ್ಸ್) ಹೊಡೆದಿದ್ದರೆ ನಂತರ ಕೇವಲ 24 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ 50 ರನ್ ಚಚ್ಚಿದ್ದರು. 100 ರನ್(3 ಬೌಂಡರಿ, 9 ಸಿಕ್ಸ್) ಹೊಡೆದ ಬಳಿಕ ಅಂತಿಮವಾಗಿ 135 ರನ್(129 ಎಸೆತ, 3 ಬೌಂಡರಿ, 12 ಸಿಕ್ಸ್) ಗಳಿಸಿ ತಂಡದ ಮೊತ್ತ 317 ರನ್ ಆಗಿದ್ದಾಗ 6ನೇಯವರಾಗಿ ಔಟಾದರು.

ಕ್ರಿಸ್ ಗೇಲ್ ಉತ್ತಮ ಆಟದಿಂದಾಗಿ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದರೂ ಇಂಗ್ಲೆಂಡ್ ಈ ಮೊತ್ತವನ್ನು ಚೇಸ್ ಮಾಡಿ 6 ವಿಕೆಟ್ ಗಳ ಜಯವನ್ನು ಗಳಿಸಿದೆ. ಆರಂಭಿಕ ಆಟಗಾರ ಜೇಸನ್ ರೇ 123 ರನ್(85 ಎಸೆತ, 15 ಬೌಂಡರಿ, 3 ಸಿಕ್ಸ್), ಜೋ ರೂಟ್ 102 ರನ್(97 ಎಸೆತ, 9 ಬೌಂಡರಿ) ಸಿಡಿಸಿದ ಪರಿಣಾಮ ಇಂಗ್ಲೆಂಡ್ 48.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿ ಗುರಿಮುಟ್ಟಿತು. ಸ್ಫೋಟಕ ಶತಕ ಸಿಡಿಸಿದ ಜೇಸನ್ ರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *