ಬ್ಯಾಟಿಂಗ್ ವೇಳೆ ನಾನು ಮೃತಪಟ್ಟರೂ ದು:ಖವಿಲ್ಲ: ವಿವಿಯನ್ ರಿಚರ್ಡ್ಸ್

Public TV
1 Min Read

ಸಿಡ್ನಿ: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರು ಹೆಲ್ಮೆಟ್ ಇಲ್ಲದೆ ವೇಗದ ಬೌಲರ್ ಗಳ ಎಸೆತಗಳನ್ನು ಎದುರಿಸುತ್ತಿದ್ದರು. ಈ ವಿಚಾರವಾಗಿ ಮಾತನಾಡಿರುವ ಅವರು, ಬ್ಯಾಟಿಂಗ್ ಮಾಡುವಾಗ ನಾನು ಮೃತಪಟ್ಟರೂ ದು:ಖವಿಲ್ಲ ಎಂದು ಹೇಳಿದ್ದಾರೆ.

ವಿವಿಯನ್ ರಿಚರ್ಡ್ಸ್ ಅವರು ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಶೇನ್ ವ್ಯಾಟ್ಸನ್ ನಡೆಸಿದ ಆನ್‍ಲೈನ್‍ನಲ್ಲಿ ಚಾಟ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬ್ಯಾಟಿಂಗ್ ಮಾಡುವಾಗ ಸತ್ತರೂ ಯಾವುದೇ ದುಃಖವಿಲ್ಲ ಅಂತ ರಿಚರ್ಡ್ಸ್ ಹೇಳಿದ್ದರು ಎಂದು ವ್ಯಾಟ್ಸನ್ ತಿಳಿಸಿದರು.

ರಿಚರ್ಡ್ಸ್ ಅವರು 121 ಟೆಸ್ಟ್ ಪಂದ್ಯಗಳನ್ನು ಆಡಿ 8,540 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರ 187 ಏಕದಿನ ಪಂದ್ಯಗಳಲ್ಲಿ 6,721 ರನ್ ದಾಖಲಿಸಿದ್ದಾರೆ. ರಿಚಡ್ರ್ಸ್ ಕಾಲದಲ್ಲಿ ಜೆಫ್ ಥಾಮನ್ಸ್, ಡೆನಿಸ್ ಲಿಲ್ಲಿ, ರಿಚರ್ಡ್ ಹ್ಯಾಡ್ಲಿ, ಮಾಲ್ಕಮ್ ಮಾರ್ಷಲ್ ಹಾಗೂ ಜೊಯೆಲ್ ಗಾರ್ನರ್ ಅವರಂತಹ ವಿಶ್ವದ ಅತ್ಯಂತ ಬಲಿಷ್ಠ ವೇಗದ ಬೌಲರ್‍ಗಳಿದ್ದರು. ಬಹುತೇಕ ಅವರು ಗಂಟೆಗೆ 150 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದರು. ಆದರೂ ಕೂಡ ವಿವಿಯನ್ ರಿಚರ್ಡ್ಸ್ ಹೆಲ್ಮೆಟ್ ಧರಿಸದೆಯೇ ಆಟವಾಡಿ ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಆಟದ ಬಗೆಗಿನ ಉತ್ಸಾಹ ಹೇಗಿರುತ್ತದೆ ಅಂದ್ರೆ ನಾನು ಪ್ರೀತಿಸುವ ಆಟವನ್ನು ಆಡುತ್ತಾ ಸತ್ತರೂ ಅದು ನೋಯಿಸುವುದಿಲ್ಲ. ಹೀಗೆ ಅನೇಕ ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನು ಗೌರವಿಸುವವರನ್ನು ನಾನು ನೋಡುತ್ತಿದ್ದೆ. ಫಾರ್ಮುಲಾ-1ನಲ್ಲಿ ರೇಸರ್ ಕಾರು ಚಾಲನೆ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೆ. ಇದಕ್ಕಿಂತ ಹೆಚ್ಚು ಅಪಾಯಕಾರಿ ಯಾವುದಿದೆ? ನನ್ನ ದಂತವೈದ್ಯರು ನನಗೆ ಮೌತ್‍ಪೀಸ್ ನೀಡಿದ್ದರು. ಆದರೆ ಮೌತ್‍ಪೀಸ್‍ನಿಂದಾಗಿ ಚೂಯಿಂಗಮ್ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅದನ್ನು ನಾನು ಕೆಲವೇ ದಿನಗಳು ಬಳಸಿದ್ದೆ ಎಂದು ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *