ದೀದಿ ಆಡಳಿತದ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ: ರಾಮೇಶ್ವರಂ ಕೆಫೆ ಬಾಂಬರ್‌ ಅರೆಸ್ಟ್‌ ಬಗ್ಗೆ ಅಮಿತ್‌ ಮಾಳವಿಯ ಮಾತು

Public TV
2 Min Read

ನವದೆಹಲಿ: ಮಮತಾ ಬ್ಯಾನರ್ಜಿ (Mamata Banerjee) ಆಡಳಿತದಲ್ಲಿ ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ (West Bengal) ಸುರಕ್ಷಿತ ಸ್ವರ್ಗವಾಗಿದೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ (Amit Malviya) ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ (Rameshwaram Cafe Blast) ಪ್ರಕರಣದ ಬಾಂಬರ್‌ ಪಶ್ಚಿಮ ಬಂಗಾಳದಲ್ಲಿ ಬಂಧನಕ್ಕೊಳಗಾಗಿರುವ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅಮಿತ್‌, ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ. ದುರದೃಷ್ಟವಶಾತ್ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭಯೋತ್ಪಾದಕರಿಗೆ ಪ.ಬಂಗಾಳ ಸುರಕ್ಷಿತ ಸ್ವರ್ಗವಾಗಿದೆ ಎಂದು ದೀದಿ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್

ಅಮಿತ್ ಮಾಳವಿಯ ಟೀಕೆಗೆ ಬಂಗಾಳ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳವು ಎಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿಲ್ಲ. ರಾಜ್ಯ ಪೊಲೀಸರು ತನ್ನ ಜನರನ್ನು ಕೆಟ್ಟ ಚಟುವಟಿಕೆಗಳಿಂದ ಸುರಕ್ಷಿತವಾಗಿರಿಸುವಲ್ಲಿ ಸದಾ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಅಸತ್ಯವು ಅತ್ಯಂತ ಕೆಟ್ಟದಾಗಿದೆ. ಆರೋಪಿಗಳ ಬಂಧನಕ್ಕೆ ಬಂಗಾಳ ಪೊಲೀಸರೂ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಪುರ್ಬಾ ಮೇದಿನಿಪುರದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ಸುರಕ್ಷಿತವಾಗಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

ಕೂಚ್‌ಬೆಹಾರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ ಜನರು ಬಂಗಾಳ ಸುರಕ್ಷಿತವಲ್ಲ ಎಂದು ಹೇಳುತ್ತಾರೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ದೆಹಲಿ ಸುರಕ್ಷಿತವಾಗಿದೆಯೇ? ಅವರು ಏನು ಕೆಲಸ ಮಾಡಿದ್ದಾರೆಂದು ಅವರನ್ನು ಕೇಳಿ ಎಂದು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

Share This Article