ಕುಟುಂಬ ಸಮೇತ ಕೊಲೆಯಾದವ RSS ವ್ಯಕ್ತಿ ಅಲ್ಲ: ಪೊಲೀಸ್ ಸ್ಪಷ್ಟನೆ

Public TV
1 Min Read

ಕೋಲ್ಕತ್ತಾ: ಗುರುವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ಕುಟುಂಬ ಸಮೇತ ಕೊಲೆಯಾದ ವ್ಯಕ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್)ಕ್ಕೆ ಸೇರಿದ ವ್ಯಕ್ತಿಯಲ್ಲ. ಆರ್‍ಎಸ್‍ಎಸ್‍ಗೂ ಈ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಪಶ್ಚಿಮ ಬಂಗಾಳ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮುರ್ಷಿದಾಬಾದ್‍ನ ಜಿಯಾಗಂಜ್ ಬಡಾವಣೆಯಲ್ಲಿ ವಾಸವಿದ್ದು, ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಪಾಲ್ ಮತ್ತು ಆತನ ಗರ್ಭಿಣಿ ಪತ್ನಿ ಬ್ಯೂಟಿ ಪಾಲ್ ಹಾಗೂ 6 ವರ್ಷದ ಮಗ ಆನಂದ್‍ನನ್ನು ಅವರ ನಿವಾಸದಲ್ಲೇ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಕುಟುಂಬ ಸಮೇತನಾಗಿ ಕೊಲೆಯಾದ ಪ್ರಕಾಶ್ ಪಾಲ್, ಆರ್‍ಎಸ್‍ಎಸ್‍ನ ಕಾರ್ಯಕರ್ತನಾಗಿದ್ದು ಈ ಕೊಲೆ ರಾಜಕೀಯ ವಿಚಾರಕ್ಕೆ ಆಗಿರಬಹುದು ಎಂದು ದೇಶದಾದ್ಯಂತ ಸಖತ್ ಸುದ್ದಿಯಾಗಿತ್ತು. ಈ ಪ್ರಕರಣವನ್ನು ತನಿಖೆ ಮಾಡಿರುವ ಮುರ್ಷಿದಾಬಾದ್ ಪೊಲೀಸರು, ಪ್ರಕಾಶ್ ಆರ್‍ಎಸ್‍ಎಸ್ ಕಾರ್ಯಕರ್ತನಲ್ಲ. ಈ ಕೊಲೆಗೂ ರಾಜಕೀಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಕೊಲೆ ವೈಯಕ್ತಿಕ ದ್ವೇಷದಿಂದ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸರು, ಪ್ರಕಾಶ್ ಪಾಲ್‍ಗು ಮತ್ತು ಆರ್‍ಎಸ್‍ಎಸ್‍ಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ನಾವು ಆತನ ಕುಟುಂಬದವರು ಮತ್ತು ಸ್ಥಳೀಯರನ್ನು ವಿಚಾರಿಸಿದಾಗ ಆತ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿಲ್ಲ ಎಂಬುದು ಗೊತ್ತಾಗಿದೆ. ಇದರ ಜೊತೆಗೆ ಆತನ ಮನೆಯನ್ನೂ ನಾವು ಪರಿಶೀಲನೆ ಮಾಡಿದ್ದು, ರಾಜಕೀಯಕ್ಕೆ ಅಥವಾ ಆರ್‍ಎಸ್‍ಎಸ್ ಸಂಬಂಧಿಸಿದ ಯಾವುದೇ ದಾಖಲೆ ನಮಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಮೃತ ವ್ಯಕ್ತಿ ಶಿಕ್ಷಕ ವೃತ್ತಿಯ ಜೊತೆಗೆ ವಿಮೆ ಕಂಪನಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಗೊಂಡಿದ್ದನು. ಆರ್ಥಿಕ ವಿಚಾರವಾಗಿಯೇ ಇಲ್ಲ ವೈಯಕ್ತಿಕ ದ್ವೇಷದಿಂದ ಈ ವ್ಯಕ್ತಿ ಕುಟುಂಬ ಸಮೇತ ಕೊಲೆಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *