ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ಊಟದ ಹಾಲ್

Public TV
2 Min Read

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ಊಟದ ರೂಮ್ ನಿರ್ಮಿಸಲು ಸುತ್ತೋಲೆಯನ್ನು ಹೊರಡಿಸಿ ವಿವಾದಕ್ಕೆ ಕಾರಣವಾಗಿದೆ.

ಕೂಚ್‍ಬಿಹಾರ್ ಜಿಲ್ಲೆಯ ಶಾಲೆಗಳಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಮುಸ್ಲಿಂ ಮಕ್ಕಳೇ ಇದ್ದಾರೆ. ಇಲ್ಲಿ ಮಧ್ಯಾಹ್ನದ ಊಟಕ್ಕೆ ಪ್ರತ್ಯೇಕ ಊಟದ ಹಾಲ್‍ಗಳನ್ನು ನಿರ್ಮಿಸಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ಈ ಆದೇಶವನ್ನು ಜಾರಿ ಮಾಡಲು ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ಇಲಾಖೆ ಶೇ. 70ಕ್ಕಿಂತ ಹೆಚ್ಚು ಮುಸ್ಲಿಂ ಮಕ್ಕಳು ಇರುವ ಶಾಲೆಗಳ ಪಟ್ಟಿಯನ್ನು ಸಿದ್ಧ ಮಾಡಿದೆ ಎಂದು ಹೇಳಲಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೇಕಡವಾರು ಪ್ರಮಾಣವನ್ನು ನಮೂದಿಸಿರುವ ಮಾಹಿತಿಯೊಂದಿಗೆ ಸರ್ಕಾರಿ ಮತ್ತು ಸರ್ಕಾರಿ ಅನಿದಾನಿತ ಶಾಲೆಗಳ ಪಟ್ಟಿಯನ್ನು ಸಂಗ್ರಹ ಮಾಡಲು ಜಿಲ್ಲಾ ಶಿಕ್ಷಣಾಧಿಕಾರಿಗೆ ಸುತ್ತೋಲೆ ಕಳುಹಿಸಲಾಗಿದೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಜಾರಿ ಆಗಿರುವ ಸುತ್ತೋಲೆಯ ಬಗ್ಗೆ ಗೊತ್ತಿಲ್ಲ. ಈ ಸಂಬಂಧ ತನಿಖೆ ಮಾಡಿಸಲಾಗುತ್ತಿದ್ದು, ಆದೇಶವನ್ನು ಹಿಂಪಡೆಯಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿರುವ ಕಡೆಗಳಲ್ಲಿ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲು ತಾಂತ್ರಿಕವಾಗಿ ಈ ರೀತಿಯ ಮಾಹಿತಿಯನ್ನು ಕೇಳಿರಬಹುದು. ನಾನಾ ಇಲಾಖೆಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಹಿತಿ ಕೇಳಲಾಗುತ್ತದೆ. ಇದರಲ್ಲಿ ಮಕ್ಕಳ ನಡುವೆ ಬೇಧ ಕಲ್ಪಿಸುವ ಯಾವುದೇ ಸಂಚು ಇರುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಎಲ್ಲಾ ಕಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ವಿದ್ಯಾರ್ಥಿಗಳ ನಡುವೆ ಪ್ರತ್ಯೇಕತೆ ಉಂಟು ಮಾಡುವ ಈ ಸುತ್ತೋಲೆ ಸರಿಯಲ್ಲ ಎಂದು ಹೇಳಿದ್ದಾರೆ. ಟ್ವಿಟರ್‍ನಲ್ಲಿ ಸುತ್ತೋಲೆಯನ್ನು ಪೋಸ್ಟ್ ಮಾಡಿರುವ ಅವರು, ಇದರ ಹಿಂದಿನ ದುರುದ್ದೇಶವೇನು ಎಂದು ಕಟುವಾಗಿ ಪ್ರಶ್ನಿಸಿದ್ದಾರೆ,

ಸುತ್ತೋಲೆಯಲ್ಲಿ ಏನಿದೆ?
ಕೂಚ್‍ಬಿಹಾರ್ ಜಿಲ್ಲಾಧಿಕಾರಿ ಕಚೇರಿಯ ಅಲ್ಪಸಂಖ್ಯಾತರ ವಿಭಾಗದಿಂದ ಕಳುಹಿಸಲಾಗಿರುವ ಸುತ್ತೋಲೆಯಲ್ಲಿ ಜಿಲ್ಲೆಯಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಮುಸ್ಲಿಂ ಮಕ್ಕಳಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಎಷ್ಟಿವೆ ಎನ್ನುವ ಮಾಹಿತಿಯನ್ನು ತಕ್ಷಣ ನೀಡಿ. ಈ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಸೇವನೆಗೆ ಪ್ರತ್ಯೇಕ ಊಟದ ಹಾಲ್ ನಿರ್ಮಿಸುವ ಪ್ರಸ್ತಾವನೆ ಕಳುಹಿಸಬೇಕಾಗಿದೆ ಎಂದು ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *