ಬಿಜೆಪಿ ಅಭ್ಯರ್ಥಿಯನ್ನು ಒದ್ದು ಪೊದೆಗೆ ತಳ್ಳಿದ ಕಾರ್ಯಕರ್ತರು

Public TV
2 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಮಧ್ಯೆ ಬಿಜೆಪಿ ಅಭ್ಯರ್ಥಿಯ ಮೇಲೆ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ನಾಡಿಯಾ ಜಿಲ್ಲೆಯ ಘಿಯಾಘಾಟ್ ನ ಇಸ್ಲಾಂಪುರ ಪ್ರಾಥಮಿಕ ಶಾಲಾ ಬೂತ್‍ನಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದ ಅಭ್ಯರ್ಥಿಯನ್ನು ಬಿಜೆಪಿ ಕರಿಂಪೂರಿ ಕ್ಷೇತ್ರದ ಜೆ. ಪ್ರಕಾಶ್ ಮಜುಂದಾರ್ ಎನ್ನಲಾಗಿದೆ. ಜೆ. ಪ್ರಕಾಶ್ ಮೇಲೆ ಕೆಲ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕಾಲಿನಿಂದ ಒದ್ದು, ಅವರನ್ನು ರಸ್ತೆಬದಿಯಲ್ಲಿರುವ ಪೊದೆಯೊಳಗೆ ತಳ್ಳಿದ್ದಾರೆ. ಇದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದು, ಈ ಹಲ್ಲೆ ಮಾಡಿದವರು ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರು ಆಗಿರುವ ಜೆ. ಪ್ರಕಾಶ್ ಮಜುಂದಾರ್ ಅವರು, ಇಸ್ಲಾಂಪುರ ಪ್ರಾಥಮಿಕ ಶಾಲಾ ಬೂತ್ ನ ಸ್ವಲ್ಪ ದೂರದಲ್ಲೇ ಕೆಲ ಜನರು ಮತದಾನದ ವೇಳೆ ಮತದಾರರಿಗೆ ನೀಡಲು ಅಪಾರ ಪ್ರಮಾಣದ ಆಹಾರ ತಯಾರಿಸುತ್ತಿದ್ದಾರೆ ಎಂದು ತಿಳಿದು ಆ ಸ್ಥಳಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಅಲ್ಲಿ 10 ರಿಂದ 11 ಜನ ಆಹಾರ ತಯಾರಿಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ರೀತಿ ಆಹಾರ ತಯಾರು ಮಾಡುತ್ತಿದ್ದಾರೆ ಎಂದು ಪ್ರಕಾಶ್ ಮಜುಂದಾರ್ ಅವರು ಜಿಲ್ಲಾ ಆಡಳಿತಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕಾರ್ಯಕರ್ತರು ಮುಜುಂದಾರ್ ಅವರ ಸುತ್ತಾ ಸುತ್ತಿಕೊಂಡು ಪ್ರತಿಭಟನೆ ಮಾಡಿದ್ದಾರೆ. ನಂತರ ಅವರ ಮೇಲೆ ಹಲ್ಲೆ ಮಾಡಿ ಅವರನ್ನು ಕಾಲಿನಿಂದ ಒದ್ದು ರಸ್ತೆಪಕ್ಕದ ಪೊದೆಯೊಳಗೆ ತಳ್ಳಿದ್ದಾರೆ. ನಂತರ ಕೇಂದ್ರ ಪಡೆ ಕಾರ್ಯಕರ್ತರ ಮೇಲೆ ಲಾಠಿ ಜಾರ್ಜ್ ಮಾಡಿ ಮುಜುಂದಾರ್ ಅವರನ್ನು ರಕ್ಷಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಜೆ. ಪ್ರಕಾಶ್ ಮಜುಂದಾರ್ ಅವರು, ಬೂತ್ ಅನ್ನು ವಶಪಡಿಸಿಕೊಳ್ಳುವ ಅವರ ಪಿತೂರಿಯನ್ನು ನಾನು ಬಹಿರಂಗಪಡಿಸಿದ ಕಾರಣ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಬೆನ್ನಿಗೆ ಕೈಗೆ ಗಾಯಗಳಾಗಿವೆ. ಈ ಗಾಯಗಳು ಹೋಗುತ್ತವೆ. ಆದರೆ ನಮ್ಮ ರಾಜ್ಯ ಈ ಗಾಯಗಳಿಂದ ಮುಕ್ತವಾಗುವುದು ಯಾವಾಗ? ಸಿಎಂ ಮಮತಾ ಬ್ಯಾನರ್ಜಿ ಸಹಚರರು ರಾಜ್ಯದ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಮಜುಂದಾರ್ ಅವರು ಬೂತ್ ಒಳಗೆ ಹೋಗಲು ಪ್ರಯತ್ನಿಸಿದಾಗ ಕೂಡ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೋ ಬ್ಯಾಕ್ ಎಂಬ ಘೋಷಣೆ ಕೂಗಿದ್ದರು. ಅದೂ ಅಲ್ಲದೇ ಕೆಲ ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡರು ಜೆ. ಪ್ರಕಾಶ್ ಮಜುಂದಾರ್ ಅವರು ಶಾಂತಿಯುತ ವಾತಾವರಣಕ್ಕೆ ಭಂಗ ತಂದಿದ್ದಾರೆ ಎಂದು ಆರೋಪಿಸಿದ್ದರು.

ಮಜುಂದಾರ್ ಅವರ ಈ ದಾಳಿಯ ಬೆನ್ನಲ್ಲೇ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇವರ ಜೊತೆಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನಿಲ್ ದೇವಧರ್ ಅವರು, ಮಜುಂದಾರ್ ಅವರ ಹಲ್ಲೆ ವಿಡಿಯೋ ಟ್ವೀಟ್ ಮಾಡಿ ಪಶ್ಚಿಮ ಬಂಗಳಾದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇಲ್ಲ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಯಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *