‘Proud Of You’ – ಏರ್ ಇಂಡಿಯಾ ಸೇವೆಗೆ ಪಾಕ್ ಮೆಚ್ಚುಗೆ

Public TV
2 Min Read

ನವದೆಹಲಿ: “ನಿಮ್ಮ ಬಗ್ಗೆ ನಮಗೆ ಹೆಮ್ಮೆ ಆಗುತ್ತಿದೆ” – ಹೀಗೆ ಕರೆಯುವ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಭಾರತದ ಸಹಕಾರವನ್ನು ಪಾಕಿಸ್ತಾನ ಶ್ಲಾಘಿಸಿದೆ.

ಹೌದು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರುದ್ಧ ಸದಾ ದೂರಿಕೊಂಡೇ ಬರುತ್ತಿರುವ ಪಾಕಿಸ್ತಾನ ಕೊರೊನಾದಿಂದ ಆಗಿರುವ ಸಮಸ್ಯೆಯನ್ನು ಏರ್ ಇಂಡಿಯಾ ಬಗೆ ಹರಿಸುತ್ತಿರುವುದನ್ನು ನೋಡಿ ಮೆಚ್ಚುಗೆ ಸೂಚಿಸಿದೆ.

ಆಗಿದ್ದೇನು?
ಲಾಕ್‍ಡೌನ್ ಘೋಷಣೆಯಾದ ಬಳಿಕ ಭಾರತ ಸರ್ಕಾರ ಸಂಪೂರ್ಣವಾಗಿ ವಿದೇಶಿ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಈ ನಿಷೇಧ ಕೈಗೊಳ್ಳುವ ಮುನ್ನವೇ ಹಲು ದೇಶಗಳಿಂದ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದರು. ವಿಮಾನ ಸೇವೆ ರದ್ದಾದ ಹಿನ್ನೆಲೆಯಲ್ಲಿ ವಿವಿಧ ರಾಯಭಾರ ಕಚೇರಿಗಳ ಮನವಿಗೆ ಸ್ಪಂದಿಸಿದ ಭಾರತ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಈ ಪ್ರಯಾಣಿಕರನ್ನು ವಿದೇಶಕ್ಕೆ ಕಳುಹಿಸಿಕೊಡುತ್ತಿದೆ.

ಏಪ್ರಿಲ್ 2 ರಂದು ಮುಂಬೈ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣಕ್ಕೆ ಯುರೋಪ್ ಪ್ರಜೆಗಳನ್ನು ಹೊತ್ತುಕೊಂಡು ಏರ್ ಇಂಡಿಯಾ ಸಾಗುತಿತ್ತು. ಏರ್ ಇಂಡಿಯಾ ಪಾಕಿಸ್ತಾನದ ಫ್ಲೈಟ್ ಇನ್ಫಾರ್ಮೆಶನ್ ರಿಜನ್(ಎಫ್‍ಐಆರ್) ತಲುಪುತ್ತಿದ್ದಂತೆ ಪಾಕಿಸ್ತಾನ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಅಸಲಾಂ ವಾಲಿಕುಮ್ ಎಂದು ಹೇಳಿ ಸ್ವಾಗತಿಸಿದ್ದಾರೆ.

“ಇದು ಫ್ರಾಂಕ್‍ಫರ್ಟ್‍ಗೆ ತೆರಳುತ್ತಿರುವ ಪರಿಹಾರ ವಿಮಾನವಲ್ಲವೇ ದೃಢಪಡಿಸಿ” ಎಂದು ಪಾಕ್ ಎಟಿಸಿ ಹೇಳಿದೆ. ಇದಕ್ಕೆ ಕ್ಯಾಪ್ಟನ್, “ಹೌದು” ಎಂದು ಉತ್ತರಿಸಿದ್ದಾರೆ.

ಈ ವೇಳೆ “ಇಂತಹ ಕಠಿಣ ಪರಿಸ್ಥಿತಿಯಲ್ಲೂ ನೀವು ವಿಶೇಷ ವಿಮಾನ ಸೇವೆ ನೀಡುತ್ತಿದ್ದೀರಿ. ನಮಗೆ ತುಂಬಾ ಹೆಮ್ಮೆ ಆಗುತ್ತಿದೆ. ಗುಡ್ ಲಕ್” ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನು ಕೇಳಿ ಭಾರತದ ಕ್ಯಾಪ್ಟನ್ ಆಶ್ಚರ್ಯಗೊಂಡು “ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದರೆ.

ಪ್ರಯಾಣದ ಸಂದರ್ಭದಲ್ಲಿ ಭಾರತದ ವಿಮಾನಕ್ಕೆ ಇರಾನ್ ವಾಯುಸೀಮೆಯ ರೇಡಾರ್ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ. ಈ ವಿಚಾರವನ್ನು ಭಾರತದ ಕ್ಯಾಪ್ಟನ್ ಪಾಕಿಸ್ತಾನದ ಎಟಿಸಿಗೆ ತಿಳಿಸಿದ್ದಾರೆ. ಕೂಡಲೇ ಪಾಕ್ ಎಟಿಸಿ ಇರಾಕ್ ಟೆಹರಾನ್ ಎಟಿಸಿ ಜೊತೆ ಸಂಪರ್ಕಿಸಿ ಸಹಾಯ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಏರ್ ಇಂಡಿಯಾ ಪೈಲಟ್ ಮಾತನಾಡಿ, “ನನ್ನ ಜೀವನದಲ್ಲಿ ಮೊದಲ ಬಾರಿಗೆ ನೇರವಾದ ದಾರಿಯಲ್ಲಿ ಪ್ರಯಾಣಿಸಿದ್ದೇನೆ. ಇರಾನ್ ನೇರ ಮತ್ತು ಹತ್ತಿರವಾದ ದಾರಿಯನ್ನು ಏರ್‍ಲೈನ್ಸ್ ಕಂಪನಿಗಳಿಗಳಿಗೆ ನೀಡುವುದು ಬಹಳ ಅಪರೂಪ. ಈ ವಾಯು ದಾರಿ ಇರಾನಿನ ರಕ್ಷಣೆಗೆ ಮಾತ್ರ ಮೀಸಲು. ಆದರೆ ಇರಾನ್ ಎಟಿಸಿ ನೇರವಾದ ದಾರಿಯನ್ನು ನೀಡಿದ್ದು ಮಾತ್ರವಲ್ಲದೇ ಅವರ ವಾಯು ಸೀಮೆಯನ್ನು ದಾಟುವಾಗ ‘ಆಲ್ ದಿ ಬೆಸ್ಟ್’ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು ಎಂಬುದಾಗಿ ತಿಳಿಸಿದ್ದಾರೆ.

ಇರಾನ್ ಬಳಿಕ ಟರ್ಕಿ ವಾಯು ಸೀಮೆಯನ್ನು ಬಳಸಿ ಏರ್ ಇಂಡಿಯಾ ವಿಮಾನ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಏರ್ ಇಂಡಿಯಾ ವಿಮಾನ ಬೆಳಗ್ಗೆ 9:15ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಪಾಕಿಸ್ತಾನ ಮತ್ತು ಎಟಿಸಿ ಅಧಿಕಾರಿಗಳ ಸಹಾಯದಿಂದ 45 ನಿಮಿಷ ಬೇಗ ಅಂದರೆ 8:30ಕ್ಕೆ ಲ್ಯಾಂಡ್ ಆಗಿದೆ.

ಜರ್ಮನಿ, ಫ್ರಾನ್ಸ್, ಐರ್ಲೆಂಡ್ ಮತ್ತು ಕೆನಡಾದ ರಾಯಭಾರ ಕಚೇರಿ ಮನವಿಯ ಮೇರೆಗೆ ಏರ್ ಇಂಡಿಯಾ ಭಾರತದಲ್ಲಿ ಅತಂತ್ರರಾಗಿರುವ ಆ ದೇಶಗಳ ಪ್ರಜೆಗಳನ್ನು 18 ವಿಶೇಷ ವಿಮಾನಗಳ ಮೂಲಕ ಕಳುಹಿಸಿ ಕೊಡುತ್ತಿದೆ. ಈ ವಿಮಾನದಲ್ಲೇ ಚೀನಾದಿಂದ ಬರುತ್ತಿರುವ ಕೊರೊನಾಗೆ ಸಂಬಂಧಿಸಿದ ವೈದ್ಯಕೀಯ ಪರಿಕರಗಳನ್ನು ಏರ್ ಇಂಡಿಯಾ ವಿಮಾನಗಳು ವಿದೇಶಕ್ಕೆ ಕಳುಹಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *