4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿ – ಲೆಕ್ಕಕೊಟ್ಟ ಮೋದಿ ವಿರುದ್ಧ ಖರ್ಗೆ ಕಿಡಿ!

Public TV
3 Min Read

– ಮೋದಿ ಮುಂದೆ ಮೂರು ಪ್ರಶ್ನೆಗಳನ್ನಿಟ್ಟ ಎಐಸಿಸಿ ಅಧ್ಯಕ್ಷ

ನವದೆಹಲಿ: ಕಳೆದ 4 ವರ್ಷಗಳಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರವಾಗಿ ಖಂಡಿಸಿದ್ದಾರೆ. ನಿರುದ್ಯೋಗದ ಬಗ್ಗೆ ನಕಲಿ ನಿರೂಣೆಗಳನ್ನು ಹರಡುತ್ತಾ ಸುಳ್ಳಿನ ಜಾಲವನ್ನೇ ಹೆಣೆಯುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಮುಂಬೈನಲ್ಲಿ ಪ್ರಧಾನಿ ಮೋದಿ 29,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಆರ್‌ಬಿಐ ವರದಿ ಉಲ್ಲೇಖಿಸಿ ಮಾತನಾಡಿದ್ದರು. ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು (Jobs) ದೇಶದಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಖರ್ಗೆ ಖಂಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮುಂದೆ ಮೂರು ಪ್ರಶ್ನೆಗಳನ್ನೂ ಇಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

ಮೋದಿ ಮುಂದಿಟ್ಟ ಮೂರು ಪ್ರಶ್ನೆ:
ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ನರೇಂದ್ರ ಮೋದಿಜೀ ನಮಗೆ ಮೂರು ಪ್ರಶ್ನೆಗಳಿವೆ. ರಾಷ್ಟ್ರೀಯ ನೇಮಕಾತಿ ಏಜೆನ್ಸಿಯ (NRA) ಕಳೆದ 4 ವರ್ಷಗಳಿಂದ ಒಂದೇ ಒಂದು ಪರೀಕ್ಷೆಯನ್ನೂ ನಡೆಸಿಲ್ಲ, ಏಕೆ? ಎನ್‌ಆರ್‌ಎಗೆ 1,517.57 ಕೋಟಿ ರೂ. ಹಣ ನೀಡಿದ್ದರೂ ಕಳೆದ 4 ವರ್ಷಗಳಲ್ಲಿ ಕೇವಲ 58 ಕೋಟಿ ರೂ. ಮಾತ್ರ ಬಳಕೆಯಾಗಿದೆ ಏಕೆ? ಎನ್‌ಆರ್‌ಎ ಅನ್ನು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಸಲು ಒಂದು ಸಂಸ್ಥೆಯಾಗಿ ರಚಿಸಲಾಗಿದೆ. ಆದ್ರೆ ಸರ್ಕಾರ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್‌ (ಆರ್ಥಿಕ ದುರ್ಬಲ ವರ್ಗ) ಯುವಜನರ ಮೀಸಲಾತಿ ಹಕ್ಕನ್ನು ಕಸಿದುಕೊಳ್ಳಲು ಉದ್ದೇಶಪೂರ್ವಕವಾಗಿಯೇ ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು ನಿಕ್ಷ್ರಿಯಗೊಳಿಸಲಾಗಿದೆಯೇ? ಎಂದು ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸದ್ಯ ಈ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಧಾನಿ ಮೋದಿ ಹೇಳಿದ್ದೇನು?
ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಆರ್‌ಬಿಐ ನೀಡಿದ ಈ ಅಂಕಿ-ಅಂಶಗಳು ಸುಳ್ಳು ಸುದ್ದಿ ಹರಡುವವರು, ಅಜೆಂಡಾ ಬಿತ್ತುವವರನ್ನು ಸುಮ್ಮನಾಗಿಸಿವೆ. ಯಾರು ಹೂಡಿಕೆ, ಮೂಲ ಸೌಕರ್ಯ ಹಾಗೂ ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರೋ, ಅವರೆಲ್ಲರ ಬಣ್ಣ ಈಗ ಬಯಲಾಗಿದೆ. ಇಂತಹ ಪಿತೂರಿಗಳನ್ನು ದೇಶದ ಜನ ತಿರಸ್ಕರಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ಕುಟುಕಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

ದೇಶದ ಜನರಿಗೆ ಎನ್‌ಡಿಎ ಮೇಲೆ ಅಪಾರ ವಿಶ್ವಾಸವಿದೆ. ಎನ್‌ಡಿಎ ಸರ್ಕಾರ ಮಾತ್ರ ಸ್ಥಿರತೆಯನ್ನು ಕಾಪಾಡಲು ಸಾಧ್ಯ ಎಂದು ನಮ್ಮನ್ನು 3ನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಸಣ್ಣ ಹಾಗೂ ಬೃಹತ್‌ ಹೂಡಿಕೆದಾರರು ನಮ್ಮ ಸರ್ಕಾರ ಮತ್ತೆ ಬಂದಿರುವುದನ್ನು ಸ್ವಾಗತಿಸಿದ್ದಾರೆ. 3ನೇ ಅವಧಿಯಲ್ಲಿ ನಮ್ಮ ಕೆಲಸವು ಇನ್ನಷ್ಟು ಕ್ಷಿಪ್ರವಾಗುತ್ತದೆ, ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಎಂಬುದಾಗಿ ಹೇಳಿದ್ದೆ. ಅದರಂತೆ ಈಗ ವೇಗವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಶ್ಲಾಘಿಸಿದ್ದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಆಯ್ತು ಈಗ ವಕ್ಫ್‌ ಬೋರ್ಡ್‌ನಲ್ಲೂ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ 

Share This Article