ಮುಂದೆ ಬಿವೈವಿ ನೇತೃತ್ವದಲ್ಲಿ 135 ಸ್ಥಾನ ಗೆಲ್ತೀವಿ: ರೇಣುಕಾಚಾರ್ಯ

Public TV
1 Min Read

ದಾವಣಗೆರೆ: ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ (Congress) ಭ್ರಷ್ಟಾಚಾರದ ಹಣ ಬಲ, ತೋಳ್ ಬಲ, ಅಧಿಕಾರದ ಬಲದಿಂದ ಗೆದ್ದಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಜನಾದೇಶ ನಮ್ಮ ವಿರುದ್ಧ ಇದೆ ಎಂದು ನಾನು ಹೇಳೋದಿಲ್ಲ. ಅವರು ಲೂಟಿ ಹೊಡೆದ ಹಣ ಚೆಲ್ಲಿ ಚುನಾವಣೆ ಗೆದಿದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಯಾರೂ ಕೂಡ ಮನಸ್ಸಿಗೆ ನೋವು ಮಾಡಿಕೊಳ್ಳಬಾರದು. ಸೋಲೇ ಗೆಲುವಿನ ಮೆಟ್ಟಿಲು. ರಾಜ್ಯದಲ್ಲಿ ಮುಂದೆ ವಿಜಯೇಂದ್ರ ಅವರ ನೇತೃತ್ವದಲ್ಲಿ 135 ಸ್ಥಾನ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ 2023ರ ಚುನಾವಣೆಯಲ್ಲಿ ಬಿಜೆಪಿ (BJP) ಸೋತ ವಿಚಾರವಾಗಿ, ವಿಧಾನಸೌಧದ ಹೊರಗೆ ಒಳಗೆ ನಾಲಗೆ ಹರಿಬಿಟ್ಟಿದ್ರು ಅವರೇ ಚುನಾವಣೆಯ ಸೋಲಿಗೆ ಕಾರಣ. ವಿಜಯೇಂದ್ರ (B.Y Vijayendra) ಅವರನ್ನು ನೇಮಕ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರನ್ನು ವಿರೋಧ ಮಾಡುವುದು ಒಂದೇ ಹೈಕಮಾಂಡ್‍ನ ವಿರುದ್ಧ ಮಾತನಾಡುವುದು ಒಂದೇ ಎಂದು ಯತ್ನಾಳ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಿಂದ ಬಂದ ಮೂರ್ನಾಲ್ಕು ಜನ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸೈಕಲ್ ತುಳಿದು ಪಕ್ಷ ಕಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ನಿಮ್ಮ ಹರಕು ಬಾಯಿಯಿಂದ ವಿರೋಧ ಮಾಡುವುದು ಸರಿ ಅಲ್ಲ. ನಿಮ್ಮ ಹರಕು ಬಾಯಿಯಿಂದ ಮೂರು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಅವರ‍್ಯಾರು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಲ್ಲ. ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಮಂತ್ರಿ ಆಗಿಲ್ಲ ಎಂಬ ಒಂದೇ ಕಾರಣಕ್ಕೆ ಅಷ್ಟೆಲ್ಲ ಮಾತಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article