ಕಾಶಿ, ಮಥುರಾ ಮಸೀದಿ ಧ್ವಂಸ ಮಾಡಿ ದೇವಾಲಯ ಕಟ್ಟುತ್ತೇವೆ: ಈಶ್ವರಪ್ಪ

Public TV
2 Min Read

ಚಾಮರಾಜನಗರ: 2024ಕ್ಕೆ ಮತ್ತೇ ನರೇಂದ್ರ ಮೋದಿ ಸರ್ಕಾರ ಬರಲಿದೆ. ಕಾಶಿ, ಮಥುರಾ ಮಸೀದಿ ಧ್ವಂಸ ಮಾಡಿ ಮಂದಿರ ಕಟ್ಟುತ್ತೇವೆ ಎಂದು ಮಾಜಿ ಸಚಿವ ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದಾರೆ.

ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ (BJP) ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಕಾಶಿಯಲ್ಲಿ ಹಾಗೂ ಮಥುರಾದಲ್ಲಿ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೆ. ಅವೆರಡೂ ಮಸೀದಿಗಳನ್ನು (Mosque) ಧ್ವಂಸ ಮಾಡಿ ಮಂದಿರ ಕಟ್ಟುತ್ತೇವೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಉದ್ಘಾಟನೆಯಾದ ಬಳಿಕ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಬರಲಿ. ಅವರ ಪಾಪವಾದರೂ ಕಡಿಮೆಯಾಗಲಿದೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.

ಆಣೆ-ಪ್ರಮಾಣ ಸವಾಲು: ತಮ್ಮ ಪದವಿಗೆ ಆಕಾಂಕ್ಷಿ ಎಂದು ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ (Siddaramaiah) ಸೋಲಿಸಿದರು. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಪರಮೇಶ್ವರ್ ಶಿಷ್ಯರು, ಅಭಿಮಾನಿಗಳು ಬಂದು ಸಿದ್ದರಾಮಯ್ಯರನ್ನು ಸೋಲಿಸಿದರು. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ, ಅವರು ಹೇಳಿದ ಹಾಗೆ ಕೇಳುತ್ತೇನೆ ಎಂದು ಸವಾಲೆಸೆದರು.

ದಲಿತರ ಶಾಪದಿಂದಲೇ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಸಿದ್ದರಾಮಯ್ಯಗೆ ಇನ್ನೂ ಕ್ಷೇತ್ರವೇ ಗೊತ್ತಾಗಿಲ್ಲ. ಅವರು ಕೋಲಾರಕ್ಕೆ ಹೋದರೆ ಬ್ರಹ್ಮ ಬಂದರೂ ಗೆಲ್ಲುವುದಿಲ್ಲ. ಕೋಲಾರದಲ್ಲಿ ಎಲ್ಲಾ ಸಮುದಾಯದವರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಕಾಂಗ್ರೆಸ್‌ನವರು ಜಾತಿವಾದಿಗಳು. ನಾವು ರಾಷ್ಟ್ರೀಯವಾದಿಗಳು. ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಇವರಿಬ್ಬರೂ ಜಿನ್ನಾ ಸಂತತಿಯವರು ಎಂದು ಕಟುವಾಗಿ ಟೀಕಿಸಿದರು. ಇದನ್ನೂ ಓದಿ: 40 ಲಕ್ಷ ಲಂಚ – ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರ

ಒಬ್ಬರ ಕಾಲು ಒಬ್ಬರು ಎಳೆಯುವುದೇ ಕಾಂಗ್ರೆಸ್ ಕೆಲಸವಾಗಿದೆ. ಚುನಾವಣೆಯಾಗದೇ ಅವರವರೇ ಸಿಎಂ ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಯಲ್ಲಿ ಅಮಿತ್ ಶಾ, ವಿಶ್ವನಾಯಕ ಮೋದಿ ಇದ್ದಾರೆ. ಅದಕ್ಕಾಗಿ ಅವರನ್ನು ನಾವು ರಾಜ್ಯಕ್ಕೆ ಕರೆದುಕೊಂಡು ಬಂದಿದ್ದೇವೆ. ನೀವು ನಿಮ್ಮ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬನ್ನಿ. ರಾಗಾ, ಸೋನಿಯಾ ಹೋದ ಕಡೆಯಲೆಲ್ಲಾ ಅವರ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ – ಮೇಘಾಲಯ ಅತಂತ್ರ

ನನಗೆ ಭರವಸೆ ಇದೆ ಈ ಬಾರಿ ಚಾಮರಾಜನಗರದ 4 ಕ್ಷೇತ್ರಗಳಲ್ಲಿ ಕಮಲ ಅರಳಲಿದೆ. ಈ ಬಾರಿ ನಿರಂಜನ್ ಕುಮಾರ್ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *