ದಿಸ್ಪುರ: ನಾವು ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೆ ತರುತ್ತೇವೆ. ಇದರಿಂದ ನುಸುಳುಕೋರರು 4 ಬಾರಿ ಮದುವೆಯಾಗಲು ಸಾಧ್ಯವಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.
ಅಸ್ಸಾಂನ (Assam) ಗೋಲ್‌ಪಾರ ಜಿಲ್ಲೆಯ ದುಧ್‌ನೋಯ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ನುಸುಳುಕೋರರು ನಾಲ್ಕು ಬಾರಿ ಮದುವೆಯಾಗಲು ಸಾಧ್ಯವಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬುಡಕಟ್ಟು ಅಭಿವೃದ್ಧಿಗಾಗಿ ಸಮಗ್ರ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಇದರ ಸಂಪೂರ್ಣ ಅನುಷ್ಠಾನವು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಹೆಲಿಕಾಪ್ಟರ್‌ನಲ್ಲಿ ಇಳಿಯುವಾಗ ತಾಂತ್ರಿಕ ದೋಷ – ಅಸ್ಸಾಂ ರ‍್ಯಾಲಿ ರದ್ದು
ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಜಾರಿಗೆ ತರಲು ಬಿಜೆಪಿಗೆ ಮತ ಹಾಕಿ ಎಂದು ಜನತೆಗೆ ಮನವಿ ಮಾಡಿದ್ದಾರೆ.
ಮೋದಿ ಅವರ ನಾಯಕತ್ವದಲ್ಲಿ ದೇಶವು ತನ್ನ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯನ್ನು ಪಡೆದುಕೊಂಡಿತು. ಕಾಂಗ್ರೆಸ್ ಎಂದಿಗೂ ಆದಿವಾಸಿ ಮಹಿಳೆಯನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಲಿಲ್ಲ. ಆದರೆ, ಮೋದಿ ಅದನ್ನು ಬದಲಾಯಿಸಿದರು. ದ್ರೌಪದಿ ಮುರ್ಮು ರಾಷ್ಟ್ರದ ಪ್ರಥಮ ಪ್ರಜೆಯಾದರು ಎಂದು ತಿಳಿಸಿದ್ದಾರೆ.
ನೆರೆಯ ಮೇಘಾಲಯದಲ್ಲಿ ಇತ್ತೀಚೆಗೆ ಉಂಟಾಗಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿ ಅಮಿತ್ ಶಾ ಮಾತನಾಡಿದರು. ಒಳನುಸುಳುಕೋರರು ಬುಡಕಟ್ಟು ಮಹಿಳೆಯರನ್ನು ಮದುವೆಯಾಗುವ ಮೂಲಕ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿಯಲ್ಲಿ ರಾಜಕೀಯ ಪ್ರಭಾವ ಸಾಧಿಸಲು ಪ್ರಯತ್ನಿಸಿದ್ದಾರೆ. ಇದು ಅಶಾಂತಿಗೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದ್ದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನದ ಸೂಚಕ: ಜೋಶಿ ಟೀಕೆ
ನಮಗೆ ಅಸ್ಸಾಂನಲ್ಲಿ ಇನ್ನೂ ಐದು ವರ್ಷ ಅವಕಾಶ ನೀಡಿ. ನಾವು ರಾಜ್ಯದಿಂದ ನುಸುಳುಕೋರರನ್ನು ಮುಕ್ತಗೊಳಿಸಿ ವಾಪಸ್ ಕಳುಹಿಸುತ್ತೇವೆ. ಅಸ್ಸಾಂನಲ್ಲಿ ಬಿಜೆಪಿ ಶಾಂತಿಯನ್ನು ಪುನಃಸ್ಥಾಪಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದುಹೋದ ನೆಲೆಯನ್ನು ಮರಳಿ ಪಡೆದರೆ ಅಸ್ಥಿರತೆ ಮರಳಬಹುದು. ನಾವು ಅಸ್ಸಾಂಗೆ ಶಾಂತಿ ತಂದಿದ್ದೇವೆ. ಕಾಂಗ್ರೆಸ್ ಕೆಲವು ಸ್ಥಾನಗಳನ್ನು ಗೆದ್ದರೂ, ರಾಜ್ಯವು ಮತ್ತೆ ಅಸ್ಥಿರತೆಗೆ ಸಾಕ್ಷಿಯಾಗುತ್ತದೆ ಎಂದು ಜನತೆಗೆ ಎಚ್ಚರಿಸಿದ್ದಾರೆ.

