ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ, ಇದು ಜೋಕ್ ಅಲ್ಲ: ಸುದೀಪ್

Public TV
3 Min Read

ಬೆಂಗಳೂರು: ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ. ಕಷ್ಟವಾದರೂ, ಪೆಟ್ಟುಬಿದ್ದರೂ ಸಹಿಸಿಕೊಂಡು ಅಭಿನಯಿಸಿದ್ದೇನೆ. ಇದು ಜೋಕ್ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಸಂದರ್ಶದಲ್ಲಿ ಮಾತನಾಡಿದ ಅವರು, ಬಾಕ್ಸಿಂಗ್ ಕಷ್ಟವಾಗಿತ್ತು ನನಗೆ, ತುಂಬಾ ಪೆಟ್ಟಾಗುತ್ತಿತ್ತು. ಅದನ್ನೆಲ್ಲ ಸಹಿಸಿಕೊಂಡು ಕ್ಯಾಮೆರಾ ಮುಂದೆ ಅಭಿನಯ ಮಾಡಬೇಕಿತ್ತು. ಅವರು ಹೊಡೆದರೆ ಹೊಡೆದ ಹಾಗೆ ಅನಿಸಿಕೊಳ್ಳಬೇಕು. ಆ ನೋವನ್ನು ತೋರಿಸಬೇಕು. ಅದು ಬರೀ ಅಭಿನಯವಾಗಿರಲಿಲ್ಲ. ನಿಜವಾಗಿಯೂ ಸುಸ್ತಾಗುತ್ತಿತ್ತು. ಬಾಕ್ಸಿಂಗ್ ಸೀನ್‍ಗೆ ನಾವು 28 ದಿನ ಶೂಟಿಂಗ್ ಮಾಡಿದ್ದೇವೆ. ಇದು ಜೋಕ್ ಅಲ್ಲ. 28 ದಿನ ಸತತವಾಗಿ ರಿಂಗಿಗೆ ಹೋಗಿ, ಅಭ್ಯಾಸ ಮಾಡಿ, ಫೈಟ್ ಮಾಡಿ ತುಂಬಾ ಶ್ರಮಪಟ್ಟಿದ್ದೇವೆ. ಒಂದೊಂದು ಶಾಟ್ ತೆಗೆಯಲು ತುಂಬಾ ಸಮಯ ತೆಗೆದುಕೊಂಡು ಶೂಟಿಂಗ್ ಮಾಡಿದ್ದೇವೆ ಎಂದರು.  ಇದನ್ನೂ ಓದಿ:ಎಲ್ಲಿ ಹೋದ್ರೂ ಜನ ಪ್ರೀತಿಸ್ತಾರೆ, ನನಗಷ್ಟೇ ಸಾಕು- ಸ್ಟಾರ್‌ಡಮ್ ಬಗ್ಗೆ ಕಿಚ್ಚನ ಮಾತು

ಇವತ್ತು ಅದಷ್ಟೂ ಶ್ರಮ ಜನಗಳ ಕಣ್ಣಿಗೆ ಕಾಣಿಸಿದೆ. ಮೊದಲೇ ನಾವು ಹೇಳಿರುವ ಹಾಗೆ ರಿಯಲ್ ಫೀಲ್ ಬರುವಂತೆ ಬಾಕ್ಸಿಂಗ್ ಸೀನ್‍ಗಳನ್ನು ತೆಗೆದಿದ್ದಾರೆ. ಅದಕ್ಕೊಂದು ಗ್ರಾಫ್ ಇದೆ, ಅದು ಸುಮ್ಮನೆ ಮಾಡಿಲ್ಲ. ನಾಯಕ ಯಾಕೆ ಬಾಕ್ಸಿಂಗ್ ಮಾಡುತ್ತಿದ್ದಾನೆ? ಯಾಕೆ ಫೈಟ್ ಮಾಡುತ್ತಿದ್ದಾನೆ ಎನ್ನುವ ಉದ್ದೇಶ ಚೆನ್ನಾಗಿತ್ತು. ಅಲ್ಲಿ ನಿರ್ದೇಶಕರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಬಾಕ್ಸಿಂಗ್ ಸೀನ್ ಬಗ್ಗೆ ಹೇಳಿದರು. ಇದನ್ನೂ ಓದಿ:ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

ಅವಿನಾಶ್ ಅವರ ಜೊತೆಗೆ ನನ್ನ ಮಾತುಕಥೆ ಸೀನ್ ಚೆನ್ನಾಗಿತ್ತು. ನಿಜವಾಗಿಯೂ ಅದೊಂದು ಬ್ಯುಟಿಫುಲ್ ಸೀನ್. ಅದು ನನಗೆ ತುಂಬಾ ಇಷ್ಟ. ಆ ಸೀನ್‍ನಲ್ಲಿ ಬರುವ ಡೈಲಾಗ್‍ಗಳು, ತೆಗೆದಿರುವ ರೀತಿ ಬಹಳ ಚೆನ್ನಾಗಿದೆ. ಅದರಲ್ಲೂ ನನ್ನನ್ನು ತಲೆಯಲ್ಲಿ ಇಟ್ಟುಕೊಂಡು ಈ ಸೀನ್ ಡೈಲಾಗ್ ಬರೆದಿದ್ದಾರೆ. ನಾನು ಹೇಗೆ ಮಾತನಾಡುತ್ತೇನೆ ಅದೇ ರೀತಿ ಡೈಲಾಗ್ ಬರೆದಿದ್ದಾರೆ. ನಾನು ಸಹಜವಾಗಿ ಮಾತನಾಡುತ್ತಿದ್ದಾಗ ಬಳಸುವ ಪದಗಳನ್ನೇ ಡೈಲಾಗ್ ಮಾಡಿದ್ದಾರೆ. ಆದ್ದರಿಂದ ಆ ಸೀನ್ ತುಂಬಾ ಚೆನ್ನಾಗಿ ಮೂಡಿಬಂತು ಎಂದು ತಿಳಿಸಿದರು.

ಸಿನಿಮಾದಲ್ಲಿ ಬಹುತೇಕ ಸೀನ್ ಡೈಲಾಗ್ ಕೇಳಿದರೆ ಫ್ಯಾನ್ಸ್ ಬಗ್ಗೆ ಹೇಳಿದ ಹಾಗೆ ಅನಿಸುತ್ತದೆ ಎಂದು ಪ್ರಶ್ನಿಸಿದಾಗ, ಹೌದು ಸಂಬಂಧಿಸಬೇಕು ಸ್ಪಂದಿಸಬೇಕು. ಫ್ಯಾನ್ಸ್ ಬಗ್ಗೆ ಬಿಡಿ, ಒಂದು ಭಾವಾನಾತ್ಮಕ ಸೀನ್ ಇದೆ ಅಂದುಕೊಳ್ಳಿ. ತಂದೆ ಮಗಳ ಸೀನ್ ಇದೆ ಅಂದಾಗ ಅದರಲ್ಲಿ ಬರುವ ಡೈಲಾಗ್‍ಗಳು, ಛಾಯಾಗ್ರಹಣ ಪ್ರೇಕ್ಷಕರಿಗೆ ಕನೆಕ್ಟ್ ಆದರೆ ತಾನೆ ಇಷ್ಟ ಆಗೋದು. ಅದೇ ರೀತಿ ನಾವು ಹೇಳುವ ಡೈಲಾಗ್, ಅಭಿನಯ ಅಭಿಮಾನಿಗಳಿಗೆ ಇಷ್ಟವಾದರೆ ತಾನೆ ಅವರು ವಿಶಿಲ್ ಹೊಡೆದು ಖುಷಿ ಪಡೋದು. ಇಷ್ಟವಾಗಿಲ್ಲ ಎಂದರೆ ಚಿತ್ರಮಂದಿರಕ್ಕೆ ಬಂದು ಸುಮ್ಮನೆ ಕೂತು ಸಿನಿಮಾ ನೋಡಿಕೊಂಡು ಹೋಗುತ್ತಾರೆ. ಅದೇ ರೀತಿ ಪೈಲ್ವಾನ್ ಚಿತ್ರದಲ್ಲಿ ಯಾರ‍್ಯಾರಿಗೆ ಲೈನ್ಸ್ ಕನೆಕ್ಟ್ ಆಗಬೇಕು ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಡೈಲಾಗ್ ಬರೆದಿದ್ದೇವೆ ಎಂದು ಉತ್ತರಿಸಿದರು. ಇದನ್ನೂ ಓದಿ:ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

ಸಿನಿಮಾದಲ್ಲಿ ಮದುವೆ ಮನೆಗೆ ಬಾಡಿಗಾರ್ಡ್‌ಗಳ ಜೊತೆ ನನ್ನ ಎಂಟ್ರಿ ಸೀನ್ ಕ್ರೆಡಿಟ್ ಕೃಷ್ಣಾ ಅವರಿಗೆ ಕೊಡಬೇಕು. ಅದು ಸಂಪೂರ್ಣ ಕೃಷ್ಣಾ ಅವರ ಐಡಿಯಾ. ಅದಕ್ಕೆ ಪ್ರಿಯಾ ಕೂಡ ಟ್ವೀಟ್ ಮಾಡಿದ್ದರು. ಮನೆಯಲ್ಲಿ ಇದ್ದವರಿಗೆ ಆ ಸೀನ್ ಅಷ್ಟು ಇಷ್ಟವಾಗಿರುವಾಗ, ಹೊರಗಿನವರಿಗೆ ಇನ್ನೆಷ್ಟು ಇಷ್ಟವಾಗಿರಬೇಕು ಅಂತ ಯೊಚಿಸಬೇಕು. ಆ ಸೀನ್ ತುಂಬಾ ಚೆನ್ನಾಗಿ ತೆಗೆದಿದ್ದಾರೆ. ಸೀನ್‍ನಲ್ಲಿ ಇರುವ ಫೀಲ್ ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಆ ಸೀನ್ ತುಂಬಾ ಚೆನ್ನಾಗಿ ತೆಗೆದಿದ್ದಾರೆ. ನಾನು ಅಂತ ಅಲ್ಲ, ಆ ಸ್ಥಾನದಲ್ಲಿ ಯಾವ ಹೀರೋ ಇದ್ದರೂ ಅದನ್ನು ಚಿತ್ರಿಸಿರುವ ರೀತಿ ಚೆನ್ನಾಗಿರುವ ಕಾರಣಕ್ಕೆ ಅದನ್ನು ನೋಡಿದ ತಕ್ಷಣ ಅದರಲ್ಲಿರುವ ಫೀಲ್ ಪ್ರೇಕ್ಷಕರಿಗೆ ತಲುಪುತ್ತದೆ ಎಂದು ಸಿನಿಮಾ ಮೇಕಿಂಗ್ ಬಗ್ಗೆ ಕಿಚ್ಚ ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *