Article 370 Verdict: ಸುಪ್ರೀಂ ಆದೇಶವನ್ನು ಗೌರವಯುತವಾಗಿ ಒಪ್ಪುವುದಿಲ್ಲ: ಪಿ ಚಿದಂಬರಂ

Public TV
2 Min Read

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು (Jammu and Kashmir Special Status) ರದ್ದು ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸರಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ (Supreme Court) ಐತಿಹಾಸಿಕ ತೀರ್ಪು ನೀಡಿದ್ದು, ಈ ಆದೇಶವನ್ನು ಗೌರವಯುತವಾಗಿ ಒಪ್ಪುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ಆರ್ಟಿಕಲ್‌ 370 ರದ್ದತಿ ಆದೇಶದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಕಟ್ಟುನಿಟ್ಟಾಗಿ ತಿದ್ದುಪಡಿ ಮಾಡುವವರೆಗೆ 370 ಗೌರವಕ್ಕೆ ಅರ್ಹವಾಗಿದೆ. ರಾಜ್ಯವನ್ನು ವಿಭಜಿಸುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಅದರ ಸ್ಥಾನಮಾನವನ್ನು ಕಡಿಮೆ ಮಾಡುವ ಪ್ರಶ್ನೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ಧರಿಸದಿರುವುದು ನಮಗೆ ನಿರಾಶೆಯಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ (Congress) ಯಾವಾಗಲೂ ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿರುವ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಒತ್ತಾಯಿಸುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಕೂಡಲೇ ಸಂಪೂರ್ಣ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು, ಲಡಾಖ್ ಜನರ ಆಶೋತ್ತರಗಳನ್ನೂ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ನಾವು ಸ್ವಾಗತಿಸುತ್ತೇವೆ. ಅದಾಗ್ಯೂ, ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು, ಒಂದು ವರ್ಷ ಕಾಯಲು ನಿಖರ ಕಾರಣಗಳಿಲ್ಲ ಎಂದು ಚಿದಂಬರಂ (P Chidambaram) ಹೇಳಿದ್ದಾರೆ.

2019ರ ಆಗಸ್ಟ್‌ 6 ರಂದು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಕೇಂದ್ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ಪ್ರಕಟಿಸಿ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

Share This Article