ತಿಂಗಳಿಗೆ 2.28 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ

Public TV
3 Min Read

– ಎಫ್‌ಸಿಐ ಅಕ್ಕಿ ಕೊಡಲು ಕೇಂದ್ರ ಅಡ್ಡಗಾಲು
– ಕೇಂದ್ರ ಬಿಜೆಪಿ ಬಡವರ ವಿರೋಧಿ ಸರ್ಕಾರ
– ಛತ್ತಿಸ್‌ಗಡ, ತೆಲಂಗಾಣ ವಿವಿಧ ರಾಜ್ಯಗಳೊಂದಿಗೆ ಮಾತುಕತೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸುತ್ತೇವೆ ಅಂತಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಒಪ್ಪಿಕೊಂಡು, ಈಗ ಕೇಂದ್ರ ಸರ್ಕಾರದ ಕೊಡದಂತೆ ತಡೆಹಿಡಿದಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಎಫ್‌ಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿ ಮಾಡೋದಕ್ಕೆ ನಮ್ಮ ಎಫ್‌ಸಿಎ ಜತೆ ನಮ್ಮ ಅಧಿಕಾರಿಗಳು ಮಾತಾಡಿದ್ದರು. ನಾನೂ ಕೂಡ ನೇರವಾಗಿ ಮಾತನಾಡಿದ್ದೆ. 10 ಕೆಜಿ ಅಕ್ಕಿ ಕೊಡಲು ನಮಗೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು ಅಂತಾ ಹೇಳಿದ್ದೆ. ಪ್ರತಿ ಕೆಜಿಗೆ 34 ರೂ. + 2 ರೂ. 60 ಪೈಸೆ ಟ್ರಾನ್ಸ್‌ಪೋರ್ಟ್‌ ಶುಲ್ಕ ಸೇರಿ ಒಂದು ಕೆಜಿ ಅಕ್ಕಿಗೆ 36.60 ರೂ.ಗೆ ಖರೀದಿ ಮಾಡಲು ತೀರ್ಮಾನ ಮಾಡಿದ್ದೆವು. ಎಫ್‌ಸಿಐ ಸಹ ಒಪ್ಪಿಕೊಂಡಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ ತಿಂಗಳಿಗೆ 840 ಕೋಟಿ ರೂ.ನಂತೆ ವರ್ಷಕ್ಕೆ 10,092 ಕೋಟಿ ರೂ. ನಮಗೆ ಬೇಕಾಗುತ್ತದೆ. ನಮ್ಮ ಕ್ಯಾಬಿನೆಟ್‌ನಲ್ಲೂ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ನುಡಿದರು.

ನಾವು ಜೂನ್ 9 ರಂದು ಅಕ್ಕಿ ಕೋರಿ ಪತ್ರ ಬರೆದಿದ್ದೆವು. ಅಕ್ಕಿ ಕೊಡುತ್ತೇವೆ ಅಂತಾ ಒಪ್ಪಿ ಜೂನ್ 12 ರಂದು ಎಫ್‌ಸಿಐ ನಮಗೆ ಪತ್ರ ಬರೆದಿದ್ದರು. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋದಕ್ಕೆ ಒಪ್ಪಿ ಪತ್ರ ಕಳಿಸಿದ್ರು. 13,819.485 ಮೆಟ್ರಿಕ್ ಟನ್ ಅಕ್ಕಿ ಕಳಿಸುವ ಬಗ್ಗೆ ಮತ್ತೊಂದು ಪತ್ರವನ್ನೂ ಬರೆದಿದ್ರು. ಒಟ್ಟು ಎರಡು ಒಪ್ಪಿಗೆ ಪತ್ರ ಬರೆದಿದ್ದರು. ಅದಾದ ಮೇಲೆ ಕೇಂದ್ರ ಸರ್ಕಾರ ಜೂನ್ 13 ರಂದು ಎಫ್‌ಸಿಐ ನವರಿಗೆ ಕೇಂದ್ರ ಸರ್ಕಾರದ ಗ್ರಾಹಕರ ಸರಬರಾಜು ಇಲಾಖೆ ಪತ್ರ ಬರೆದಿದೆ. ಓಪನ್ ಮಾರ್ಕೆಟ್ ನಲ್ಲಿ ಅಕ್ಕಿ, ಗೋದಿ ಮಾರಾಟ ನಿಲ್ಲಿಸುವ ಬಗ್ಗೆ ಕೇಂದ್ರ ಪತ್ರ ಬರೆದಿದೆ. ಗ್ರಾಹಕರ ಸರಬರಾಜು ಇಲಾಖೆಯಿಂದ ಎಫ್‌ಸಿಐಗೆ ಬರೆದ ಪತ್ರದಲ್ಲಿ ಅಕ್ಕಿ, ಗೋಧಿ ಮಾರಾಟ ಸ್ಥಗಿತ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಪ್ರಸ್ತಾಪಿಸಿದರು.

ಎಫ್‌ಸಿಐ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡೋದಾಗಿ ಒಪ್ಪಿದ್ದರಿಂದ ನಾವು ಅಕ್ಕಿ ಜುಲೈ 1 ರಿಂದ ಕೊಡೋದಾಗಿ ಘೋಷಣೆ ಮಾಡಿದ್ವಿ. ಇವರ ಮೇಲೆ ನಂಬಿಕೆಯಿಟ್ಟು ಅಕ್ಕಿ ಕೊಡೋದಾಗಿ ಘೋಷಣೆ ಮಾಡಿದ್ದವು. ಈ ಕೇಂದ್ರ ಸರ್ಕಾರ ಈ ರೀತಿ ತೀರ್ಮಾನ ಮಾಡ್ತಿರೋದು ರಾಜಕೀಯ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತು. ಅಕ್ಕಿ ಇಟ್ಟುಕೊಂಡು ಕೊಡೋದಿಲ್ಲ ಅಂತಾ ಹೇಳ್ತಿರೋದು ಜನವಿರೋಧಿ ನೀತಿಯಾಗಿದೆ. ಈ ಯೋಜನೆಯಿಂದ ಕಾಂಗ್ರೆಸ್ ಸರ್ಕಾರದಕ್ಕೆ ಒಳ್ಳೆಯ ಹೆಸರು ಬರುತ್ತದೆ. ಅವರು ಜನಕಲ್ಯಾಣ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಅಸೂಯೆಯಿಂದ ಮಹಾತ್ವಾಕಾಂಶಿ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುವ ಪ್ರಯತ್ನ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಬೇರೆ ರಾಜ್ಯಗಳೊಂದಿಗೆ ಮಾತುಕತೆ: ನಮ್ಮ ಅನ್ನಭಾಗ್ಯ ಯೋಜನೆಯನ್ನ ನಿಲ್ಲಿಸೋದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ನಮಗೆ ಅಕ್ಕಿ ಸಿಗದಂತೆ ಮಾಡ್ತಿದೆ. ನಾವು ಈಗ ತೆಲಂಗಾಣ, ಛತ್ತೀಸ್‌ಗಡ, ತೆಲಂಗಾಣ ಸರ್ಕಾರದವರ ಜತೆ ಅಕ್ಕಿ ಕೊಡುವಂತೆ ಮಾತುಕತೆ ಮಾಡ್ತಿದೀವಿ. ಪಂಜಾಬ್‌ನಲ್ಲಿ ಅಕ್ಕಿ ಇಲ್ಲ ಅಂದಿದ್ದಾರೆ. ನಮ್ಮ ಸರ್ಕಾರ ಬಡವರ ಕಲ್ಯಾಣ ಮಾಡಲು ಹೊರಟರೇ ಕೇಂದ್ರದವರು ಅದಕ್ಕೆ ಅಡ್ಡಗಾಲು ಹಾಕ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಬಡವರ ವಿರೋಧಿಗಳು. ಅಕ್ಕಿ ಇಟ್ಟುಕೊಂಡು ಇಲ್ಲಾ ಅಂತಿದ್ದಾರೆ. ಅವರೇನು ಪುಕ್ಕಟ್ಟೆ ಕೊಡಲ್ಲ. ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಇಲ್ಲ ಅಂತಿದ್ದಾರೆ ಎಂದಿ ಕಿಡಿ ಕಾರಿದರು.

Share This Article