ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಸರ್ಕಾರ – ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ ಆಂಧ್ರ ಸಿಎಂ ಪುತ್ರ

Public TV
2 Min Read

ಅಮರಾವತಿ: 3 ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ರದ್ದಾಗಿದೆ. ಇದರ ಬೆನ್ನಲ್ಲೇ, ಏರೋಸ್ಪೇಸ್ ಉದ್ಯಮಿಗಳಿಗೆ (Aerospace Industry) ಆಂಧ್ರ (Andhra Pradesh) ಸಿಎಂ ಪುತ್ರ ಹಾಗೂ  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ (Nara Lokesh) ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್‌ನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಇದರ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ನಾರಾ ಲೋಕೆಶ್‌, ಈ ವಿಚಾರ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಉಪಾಯ ಇದೆ. ನೀವು ಆಂಧ್ರಪ್ರದೇಶದಲ್ಲಿ ಏಕೆ ಜಾಗ ನೋಡಬಾರದು? ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ ನಿಮಗಾಗಿ ಸಿದ್ಧವಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಬಯಸುತ್ತೇನೆ ಎಂದು ಅವರು ಏರೋಸ್ಪೇಸ್ ಉದ್ಯಮಿಗಳಿಗೆ ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ದೇವನಹಳ್ಳಿಯ ಭೂಸ್ವಾಧೀನ ಅಧಿಸೂಚನೆ ರದ್ದು – ಸಿಎಂ ಘೋಷಣೆ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರು, ಹೋರಾಟಗಾರರು, ಸಂಘಟನೆಗಳ ಸಭೆಯಲ್ಲಿ ನೋಟಿಫಿಕೇಶನ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ರೈತರು ಹೋರಾಟ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಳು ಮುಂದುವರೆಸುವ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ರದ್ದು ಮಾಡುತ್ತಿರೋದಾಗಿ ತಿಳಿಸಿದ್ದರು.

ಒಂದು ವೇಳೆ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿ ಸರ್ಕಾರ ಪಡೆಯಲಿದೆ. ಜೊತೆಗೆ ಸೂಕ್ತ ಪರಿಹಾರ ಕೊಡುವ ಜೊತೆಗೆ ಅಭಿವೃದ್ಧಿಪಡಿಸಿದ 50% ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕ್ಕಿ ಗಿರೀಶ್‌ ಹತ್ಯೆ ಕೇಸ್‌ – ಶುಭಾಗೆ ಕ್ಷಮಾದಾನ ಅವಕಾಶ ನೀಡಿದ ಸುಪ್ರೀಂ

Share This Article