ಕಲಬುರಗಿ ವ್ಯಕ್ತಿ ರಿಪೋರ್ಟ್ ನಿನ್ನೆ ರಾತ್ರಿ 9 ಗಂಟೆಗೆ ಬಂತು: ರಾಮುಲು ಸ್ಪಷ್ಟನೆ

Public TV
2 Min Read

– ಪಾಸಿಟಿವ್ ಐವರ ಮೇಲೆ ತೀವ್ರ ನಿಗಾ

ಬೆಂಗಳೂರು: ಕಲಬುರಗಿ ವ್ಯಕ್ತಿ ಮೃತಪಟ್ಟ ಬಗ್ಗೆ ಗುರುವಾರ ರಾತ್ರಿ 9 ಗಂಟೆಗೆ ವರದಿ ಬಂದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 5 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಐಸೊಲೇಟೆಡ್ ಕೇಂದ್ರದಲ್ಲಿ ಈ 5 ಮಂದಿಯ ಮೇಲೆ ನಿಗಾ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಸೂಚನೆ ಕೊಟ್ಟಿದೆ. ಕಲಬುರಗಿ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸರ್ಕಾರ ಮತ್ತು ಸಿಎಂ ಮುಂಜಾಗೃತಾ ಕ್ರಮಗಳ ಬಗ್ಗೆ ನಿಗಾ ವಹಿಸಿದ್ದಾರೆ ಎಂದರು.

ಕಲಬುರಗಿ ಮೃತಪಟ್ಟ ವ್ಯಕ್ತಿ ಕುಟುಂಬದ 7 ಮಂದಿಯನ್ನು ಐಸೊಲೇಟೆಡ್ ನಲ್ಲಿಟ್ಟು ಪರೀಕ್ಷೆ ಮಾಡಲಾಗುತ್ತದೆ. ಕಲಬುರಗಿ, ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಅಧಿಕ ಬೆಲೆಗೆ ಮಾಸ್ಕ್ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಈಗಾಗಲೆ ನಿರ್ಧರಿಸಲಾಗಿದೆ. ಎರಡು ಮೆಡಿಕಲ್ ಸ್ಟೊರ್‍ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಲಬುರಗಿ ವೃದ್ಧನ ಲ್ಯಾಬ್ ರಿಪೋರ್ಟ್ ಈಗಷ್ಟೇ ನಮ್ಮ ಕೈಸೇರಿದೆ. ವರದಿಯಲ್ಲಿ ಕೊರೊನಾ ವೈರಸ್‍ನಿಂದಲೇ ಸಾವನ್ನಪ್ಪಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ಗುರುವಾರ ರಾತ್ರಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದರು. ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೃದ್ಧನ ಸಾವನ್ನು ಖಚಿತಪಡಿಸಿದ್ದರು.

ಫಬ್ರವರಿ 29ರಂದು ಸೌದಿಯಿಂದ ಕಲಬುರಗಿ ನಗರಕ್ಕೆ ವೃದ್ಧ ಆಗಮಿಸಿದ್ದರು. ಮಾರ್ಚ್ 5ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ವೃದ್ಧ ಸಾವನ್ನಪ್ಪಿರುವ ಬೆನ್ನಲ್ಲೇ ಅಧಿಕಾರಿಗಳು ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

Share This Article
Leave a Comment

Leave a Reply

Your email address will not be published. Required fields are marked *