ಕೈಮುಗಿದು ಮನವಿ ಮಾಡಿದ್ದೇವೆಯೇ ಹೊರತು, ರೈತರ ಮೇಲೆ ದೌರ್ಜನ್ಯ ಮಾಡಿಲ್ಲ: ಬೆಳಗಾವಿ ಡಿಸಿ

Public TV
1 Min Read

ಬೆಳಗಾವಿ: ರೈತರ ವಿರೋಧದ ನಡುವೆಯೂ ನಡೆದ ಮಚ್ಚೆ – ಹಲಗಾ ಬೈಪಾಸ್ ರಸ್ತೆ ಕಾಮಗಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ರೈತರ ಮನವೊಲಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ನಾನು ರೈತರಿಗೆ ಕೈಮುಗಿದು ಕೇಳಿದ್ದೇನೆಯೇ ಹೊರತು ಯಾರ ಮೇಲೂ ದೌರ್ಜನ್ಯ ಮಾಡಿಲ್ಲ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ ಮತ್ತು ಸರ್ಕಾರ ಯಾವಾಗಲೂ ರೈತರ ಜೊತೆಗಿದೆ. ಅಭಿವೃದ್ಧಿಗೆ ಕೈಜೋಡಿಸಬೇಕು. ಯಾರಿಗಾದರೂ ರೈತರಿಗೆ ತೊಂದರೆಯಾಗಿದ್ದರೆ ಜಿಲ್ಲಾಡಳಿತ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿಸಿ ಮನವಿ ಮಾಡಿದರು. ಇದನ್ನೂ ಓದಿ: ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ರಕ್ಷಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ರೈತರ ವಿರೋಧದ ನಡುವೆಯೂ ಮಚ್ಚೆ-ಹಲಗಾ ಬೈಪಾಸ್‌ ರಸ್ತೆ ಕಾಮಗಾರಿಗೆ ಜಿಲ್ಲಾಡಳಿತ ಮುಂದಾಗಿತ್ತು. ರೈತರನ್ನು ನಿಯಂತ್ರಿಸಲು ನೂರಾರು ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು. ಈ ವೇಳೆ ರೈತರು ಕಾಮಗಾರಿ ವಿರೋಧಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಆಗ ರೈತರನ್ನು ಪೊಲೀಸರು ಬಂಧಿಸಲು ಮುಂದಾದರು. ಇದನ್ನೂ ಓದಿ: ಬಿಟ್‍ಕಾಯಿನ್ ಬಗ್ಗೆ ಸುಳ್ಳಿನ ಪ್ರಚಾರ, ಬೇಜವಾಬ್ದಾರಿ ಹೇಳಿಕೆ ನೀಡಿದ್ರೆ ದೂರು: ಟೆಂಗಿನಕಾಯಿ ಮಹೇಶ್

ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನನ್ನು ಕಾಮಗಾರಿಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಪ್ರತಿಭಟನಾನಿರತ ರೈತ, ಕುಡುಗೋಲಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಲು ಮುಂದಾದರು. ಅಲ್ಲದೇ ಮತ್ತೊಬ್ಬ ರೈತ, ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ಘಟನೆ ಗುರುವಾರ ನಡೆದಿತ್ತು. ವಿರೋಧದ ಗಂಭೀರತೆ ಅರಿತ ಜಿಲ್ಲಾಡಳಿತ ಈಗ ರೈತರ ಮನವೊಲಿಸಲು ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *