ನ.17ರೊಳಗೆ ರಾಮ ಮಂದಿರ ನಿರ್ಮಿಸುತ್ತೇವೆ- ಬಿಜೆಪಿ ಶಾಸಕ

Public TV
2 Min Read

ಜೈಪೂರ್: ಅಯೋಧ್ಯೆ ಭೂ ವಿವಾದ ಪ್ರಕರಣದ ಕುರಿತು ಇನ್ನು ಹತ್ತು ಜನರನ್ನು ವಿಚಾರಣೆ ನಡೆಸುವುದು ಬಾಕಿ ಇದೆ. ಈಗಲೇ ಬಿಜೆಪಿ ಶಾಸಕರೊಬ್ಬರು ನವೆಂಬರ್ 17ರೊಳಗೆ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದಾರೆ.

ರಾಜಸ್ಥಾನದ ಪಾಲಿಯಲ್ಲಿ ನಡೆದ ರಾಮಲೀಲಾ ಕಾರ್ಯಕ್ರಮದಲ್ಲಿ ಪಾಲಿಯ ಬಿಜೆಪಿ ಶಾಸಕ ಜ್ಞಾನಚಂದ್ ಪರಾಖ್ ಈ ಕುರಿತು ಹೇಳಿಕೆ ನೀಡಿದ್ದು, ನವೆಂಬರ್ 17ರೊಳಗೆ ರಾಮ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಘೋಷಿಸಿದ್ದಾರೆ. ಅಂದೇ ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ.

ಪ್ರಕರಣದ ವಿಚಾರಣೆ ಅಕ್ಟೋಬರ್ 17ರೊಳಗೆ ಪೂರ್ಣಗೊಳ್ಳಲಿದೆ. ನವೆಂಬರ್ 18ರ ವೇಳೆಗೆ ರಾಮಜನ್ಮಭೂಮಿಯಲ್ಲಿ ದೇವಾಲಯ ನಿರ್ಮಿಸಲಾಗುವುದು. ಹೀಗಾಗಿ ಈ ವರ್ಷ ನಮಗೆ ಅತ್ಯಂತ ಶುಭವಾಗಿದೆ ಎಂದು ಹೇಳೀದ್ದಾರೆ.

ರಾಮ ಮಂದಿರ ನಿರ್ಮಿಸುವ ಕುರಿತು ತುಂಬಾ ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದೇವೆ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ನಂತರ ಬಿಜೆಪಿ ಶಾಸಕರು ಈ ಹೇಳಿಕೆ ನೀಡಿದ್ದಾರೆ. ನಾವು ರಾಮನ ಭಕ್ತರು, ಭಕ್ತಿಯಲ್ಲಿ ಸಾಕಷ್ಟು ಶಕ್ತಿಯಿದೆ. ಶೀಘ್ರವೇ ನಾವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಅಯೋಧ್ಯೆ ಕುರಿತು ಪ್ರಸ್ತಾಪಿಸದೆ ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು.

ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಕುರಿತು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಮುಖ್ಯಮಂತ್ರಿಗಳಿಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ್ದರು.

ಅಯೋಧ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ದಿನ ನಿತ್ಯ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಗೆ ಅಕ್ಟೋಬರ್ 17 ಗಡುವನ್ನು ವಿಧಿಸಿದೆ. ಮುಸ್ಲಿಂ ಪರ ವಾದವನ್ನು ಅಕ್ಟೋಬರ್ 14ರೊಳಗೆ ಮುಗಿಸುವಂತೆ ಹಾಗೂ ನಂತರ ಎರಡು ದಿನ ಅಕ್ಟೋಬರ್ 16ರ ವರೆಗೆ ಹಿಂದೂ ಪರ ವಾದವನ್ನು ಮಂಡಿಸುವಂತೆ ತಿಳಿಸಿದೆ. ಅಲ್ಲದೆ ಅಕ್ಟೋಬರ್ 17 ವಿಚಾರಣೆಗೆ ಕೊನೇಯ ದಿನವಾಗಿದ್ದು, ಅಂದು ಎರಡೂ ಕಡೆಯವರು ಅಂತಿಮ ವಾದವನ್ನು ಮಂಡಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಎ.ಬಾಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ.ನಜೀರ್ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಅಕ್ಟೋಬರ್ 18ರ ಗಡುವನ್ನು ನೀಡಿತ್ತು. ಅಲ್ಲದೆ ಈ ಪ್ರಕರಣದ ತೀರ್ಪನ್ನು ನವೆಂಬರ್ 17ರೊಳಗೆ ಪ್ರಕಟಿಸುವುದಾಗಿಯೂ ಸಹ ಡೆಡ್‍ಲೈನ್ ವಿಧಿಸಲಾಗಿದೆ. ಅಂದೇ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನಿವೃತ್ತಿ ಹೊಂದಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *