ಅಭಿಮಾನ್ ಸ್ಟುಡಿಯೋದಲ್ಲಿದ್ದ ದಾದಾ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿಷ್ಣುವರ್ಧನ್ ಸ್ಮಾರಕ (Vishnuvardhan Memorial) ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ ಎಂದು ನಟ ಅನಿರುದ್ಧ (Actor Anirudh) ವಿಷ್ಣು ಅಭಿಮಾನಿಗಳ ಪರವಾಗಿ ನಿಂತಿದ್ದಾರೆ.
ವಿಷ್ಣುವರ್ಧನ್ ಪುಣ್ಯ ಭೂಮಿ ಉಳಿವಿಗೆ ಹೋರಾಟ ಹಾಗೂ ಸಮಾಧಿ ನೆಲಸಮ ವಿಚಾರವಾಗಿ ಅನಿರುದ್ಧ ಅವರು ಇಂದು ಬೆಂಗಳೂರಿನ ಜಯನಗರದಲ್ಲಿರುವ ವಿಷ್ಣುವರ್ಧನ್ ನಿವಾಸದಲ್ಲಿ ಸಭೆ ನಡೆಸಿದರು. ಈ ವೇಳೆ ವಿಷ್ಣು ಅಭಿಮಾನಿಗಳು ಹಾಗೂ ಮಾಧ್ಯಮಗಳೊಂದಿಗೆ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ರು.
ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ನಡೆದ ಘಟನೆ ಖಂಡನೀಯ. ನಮಗೆಲ್ಲರಿಗೂ ದುಃಖ ಆಗಿದೆ. ನಮ್ಮ ಕುಟುಂಬದ ಮೇಲೆ ಒಂದಷ್ಟು ಜನ ಆರೋಪ ಮಾಡ್ತಿದ್ದಾರೆ. ಹೀಗಾಗಿ ಈ ಬಗ್ಗೆ ಮೊದಲು ನಾನು ಮಾತನಾಡುತ್ತೇನೆ. ಇದೇ ಮೊದಲ ಬಾರಿ ಅಲ್ಲ, ಇದಕ್ಕೂ ಮುನ್ನ ಸಾಕಷ್ಟು ಬಾರಿ ಸಭೆ ಮಾಡಿದ್ದೀನಿ. ಎರಡು ವಿಡಿಯೋ ಇದೆ, ಒಂದು ಮೈಸೂರಲ್ಲಿ ಸ್ಮಾರಕ ಉದ್ಘಾಟನೆಗೂ ಮುಂಚೆ ಹಾಗೂ ಹಳೆ ಮನೆಯಲ್ಲಿ ಸಭೆ ಮಾಡಿದ್ದೇವೆ ಎಂದು ವಿಡಿಯೋ ತೋರಿಸಿದರು.ಇದನ್ನೂ ಓದಿ: ಪ್ರೇಯಸಿಯ ಒತ್ತಡಕ್ಕೆ ಮಣಿದು ಪತ್ನಿಯನ್ನೇ ಹತ್ಯೆಗೈದ ಬಿಜೆಪಿ ನಾಯಕ
ಇದೆಂಥಾ ವಿಕೃತ ಮನಸ್ಸು?
ಸಮಾಧಿ ತೆರವು ವಿಚಾರ ನಮಗೆ ಗೊತ್ತಿತ್ತು, ಆ ವಿಚಾರದಲ್ಲಿ ದುಡ್ಡು ಬಂದಿದೆ ಅಂತೆಲ್ಲ ಕೆಲವರು ಹೇಳುತ್ತಿದ್ದಾರೆ. ಆದರೆ ದಾದಾ ಸಮಾಧಿ ತೆರವು ವಿಚಾರದಲ್ಲಿ ನಾವು ಸಂತೋಷಪಡೋಕೆ ಆಗುತ್ತಾ? ಇದೆಂಥಾ ವಿಕೃತ ಮನಸ್ಸು, ತಂದೆ ಸ್ಮಾರಕ ತೆರವುಗೊಳಿಸೋಕೆ ನಾವು ದುಡ್ಡು ತೆಗೆದುಕೊಳ್ತೀವಾ? ಈ ರೀತಿ ಒಂದಷ್ಟು ಜನ ಆರೋಪ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಸಂಸ್ಕಾರ ಮಾಡೋಕೆ ಪ್ಲ್ಯಾನ್ ಮಾಡಿದ್ದೆವು. ಆದರೆ ಸರ್ಕಾರ ಹಾಗೂ ಅಂಬರೀಶ್ ಅವರ ಒತ್ತಾಯದಂತೆ ಅಭಿಮಾನ್ ಸ್ಟುಡಿಯೋದಲ್ಲಿ ಸಂಸ್ಕಾರ ಮಾಡಿದ್ವಿ. ಆದರೆ ಆ ಅವಸರದಲ್ಲಿ ಅದು ವಿವಾದಿತ ಜಾಗ ಅನ್ನೋದು ಅವ್ರಿಗೆ ಗೊತ್ತಾಗಿಲ್ಲ ಅನ್ನಿಸುತ್ತದೆ. 20 ಎಕರೆ ಜಾಗವನ್ನು ಸರ್ಕಾರ ಬಾಲಣ್ಣ ಅವರಿಗೆ ಕೊಟ್ಟಿತ್ತು. ಅದರಲ್ಲಿ 10 ಎಕರೆ ಜಾಗ ಮಾರಿಕೊಂಡಿದ್ದರು. ಉಳಿದ 10 ಎಕರೆ ಜಾಗದಲ್ಲಿ ಸ್ಟುಡಿಯೋ ಮಾಡ್ತೀವಿ ಎಂದು ಒಪ್ಪಿಕೊಂಡಿದ್ದರು. ಆದರೆ ಇದೆಲ್ಲವೂ ಅಕಸ್ಮಾತ್ ಆಗಲಿಲ್ಲ, ಸರ್ಕಾರ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ತೀವಿ ಎಂದು ಉಲ್ಲೇಖ ಮಾಡಿದೆ. ನಾವು ಸ್ಮಾರಕ ಮಾಡ್ಬೇಕು ಅಂದರೆ, 2 ಎಕರೆ ಜಾಗ ಬೇಕು. ಆದರೆ ಜಾಗದ ಗಲಾಟೆ ಇತ್ಯರ್ಥ ಆಗಲಿಲ್ಲ. ಗೀತಾ ಬಾಲಿ ಅವರನ್ನು ಸಾಕಷ್ಟು ಬಾರಿ ಕೇಳಿಕೊಂಡ್ವಿ. ಅವರು ಇತ್ಯರ್ಥ ಮಾಡಬೇಕಂದ್ರೆ ಕೇಸ್ ವಿಥ್ ಡ್ರಾ ಮಾಡ್ಬೇಕು. ಒಂದು ವೇಳೆ ವಿಥ್ ಡ್ರಾ ಮಾಡಿಕೊಂಡರೆ ಅವರ ಸಹೋದರರು ಜಾಗ ಕಿತ್ತುಕೊಳ್ಳುತ್ತಾರೆ ಎನ್ನುವ ಭಯ ಅವರಿಗಿತ್ತು ಅನಿಸುತ್ತದೆ ಎಂದು ಸ್ಪಷ್ಟನೆ ನೀಡಿದರು.
ನಮ್ಮ ಜೇಬಿಗೆ ದುಡ್ಡು ಬರಲ್ಲ
ಇನ್ನೂ ದಾದಾರನ್ನು ಹೂತುಹಾಕಿರಲಿಲ್ಲ, ದಹನ ಮಾಡಿದ್ದು. ಭಾರತಿಯಮ್ಮ ಅವರ ಅಸ್ಥಿಯನ್ನ ಎರಡು ವರ್ಷ ಆಪ್ತರ ಮನೆಯಲ್ಲಿ ಇಟ್ಟಿದ್ದರು. ಮೈಸೂರಿನಲ್ಲಿ ಅಪ್ಪಾಜಿಯವರ ಸ್ಮಾರಕದಲ್ಲಿ ಅವರ ಅಸ್ತಿ ಇದೆ. ಎರಡು ವರ್ಷ ಅಭಿಮಾನ್ ಸ್ಟುಡಿಯೋದಲ್ಲಿ ಯಾವುದೇ ರೀತಿ ಅಭಿವೃದ್ಧಿ ಆಗಿರಲಿಲ್ಲ. ಅಮ್ಮ ಅಭಿವೃದ್ಧಿ ಮಾಡಿದ್ದು, ಅನಂತ್ ಕುಮಾರ್ ನೇತೃತ್ವದಲ್ಲಿ ಅಭಿವೃದ್ಧಿ ಆಯಿತು. ಈ ವಿಚಾರದಲ್ಲಿ ಅದೆಷ್ಟು ದಿನ ಕಚೇರಿಗೆ ಅಲೆದಿದ್ದೇವೆ ಅನ್ನೋದು ನಮಗೆ ಮಾತ್ರ ಗೊತ್ತು. ಮೈಸೂರಿನಲ್ಲಿ ವ್ಯಾಪಾರೀಕರಣ ಆಗ್ತಿದೆ, ನನಗೆ 10ಲಕ್ಷ ರೂ. ಬರುತ್ತೆ ಅಂತ ಆರೋಪಿಸಿದ್ದರು. ಆದ್ರೆ ಹೇಗೆ ಬರುತ್ತೆ? ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ಸ್ಮಾರಕ ಇದೆ. ಅದರ ಆಡಳಿತ ವಿಜಯಾನಂದ ಅವರ ನೇತೃತ್ವದಲ್ಲಿ ಆಗುತ್ತದೆ. ಸರ್ಕಾರದಿಂದ ಇದಕ್ಕೆ ಎಷ್ಟು ದುಡ್ಡು ಮಂಜೂರಾಗುತ್ತದೆ ಎಂದು ಅವರನ್ನು ಕೇಳಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಟ್ರಸ್ಟ್ ನಡೆಯುತ್ತದೆ. ಸ್ಮಾರಕ ನಿರ್ವಹಣೆಗೆ ಸರ್ಕಾರ ದುಡ್ಡು ನೀಡುತ್ತದೆ. ನಮ್ಮ ಜೇಬಿಗೆ ದುಡ್ಡು ಬರುವುದಿಲ್ಲ ಎಂದು ತಿಳಿಸಿದರು.
ಭಾರತಿ ಅಮ್ಮ ಕಣ್ಣೀರಿಟ್ಟು ಕೇಳಿಕೊಂಡಿದ್ದಾರೆ
2016ರಿಂದ ಈ ಜಾಗದ ಬಗ್ಗೆ ಯೋಚನೆ ಬಿಟ್ಟಿದ್ದೆವು. ಇದೇ ವೇಳೆ ಒಂದು ವಾಹಿನಿಯಲ್ಲಿ ಕುಳಿತು ಬಾಲಣ್ಣ ಅವರ ಮಗ ಕೆಟ್ಟದಾಗಿ ಮಾತಾಡಿದ್ದರು. ಸಮಾಧಿ ವಿವಾದ ಬಗೆಹರಿಸೋಕೆ ಭಾರತಿ ಅಮ್ಮ ಕಣ್ಣೀರಿಟ್ಟು ಕೇಳಿಕೊಂಡಿದ್ದಾರೆ. ಭಾರತಿಯವರು ವಿಷ್ಣುವರ್ಧನ್ ಪತ್ನಿ ಅನ್ನೋದಕ್ಕಿಂತ ಮೊದಲು ಹಿರಿಯ ಕಲಾವಿದೆ, ಪಂಚಭಾಷಾ ತಾರೆ. ಅಂತವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಅದಾದ ಬಳಿಕ ಅಲ್ಲಿಗೆ ಹೋಗೋದನ್ನು ನಿಲ್ಲಿಸಿದ್ವಿ. ಅಭಿಮಾನಿಗಳಿಗಾಗಿ ಆ ಜಾಗ ಬಿಟ್ಟುಕೊಡಿ ಅಂತಾ ಕೇಳಿದಿವಿ. ಇನ್ನೂ ಸರ್ಕಾರ ನಮಗೆ ಮೈಸೂರಿನಲ್ಲಿ ಜಾಗ ಕೊಡುವಾಗ ಒಂದು ಕಡೆ ಕೊಟ್ಟಮೇಲೆ ಮತ್ತೊಂದು ಕಡೆ ಜಾಗ ಕೇಳುವಂತಿಲ್ಲ ಎಂದು ಸೂಚಿಸಿತ್ತು. ಹೀಗಾಗಿ ನಾವು ಈಗ ಸರ್ಕಾರಕ್ಕೆ ಕೇಳುವ ಹಾಗೆ ಇಲ್ಲ. ಸಂಸ್ಕಾರ ಆದ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ನಿಮ್ಮ ಜೊತೆ ನಾವಿದ್ದೀವಿ ಎಂದರು.
ದಾದಾ ಹೆಸರಿನಲ್ಲಿ ವ್ಯಾಪಾರೀಕರಣ ಬೇಡ
ಜಾಗ ಸಿಕ್ಕು ಅದನ್ನು ಕೊಂಡುಕೊಂಡು ಸ್ಮಾರಕ ನಿರ್ಮಾಣ ಮಾಡೋಕೆ ಮುಂದಾದರೆ ಒಳ್ಳೆಯದು. ಅಭಿಮಾನಿಗಳು ಅಂತಾ ಹೆಸರು ಹೇಳಿಕೊಂಡು, ಮುಖವಾಡ ಹಾಕಿಕೊಂಡು ಅಪ್ಪಾಜಿಯವರ ಹೆಸರು ಹೇಳಿಕೊಂಡು ವ್ಯಾಪಾರೀಕರಣ ಮಾಡಬಾರದು. ದುಡ್ಡು ಯಾರು ಕೊಡುತ್ತಾರೆ? ಯಾರೆಲ್ಲ ಇರುತ್ತಾರೆ? ಅಂದರೆ ದುಡ್ಡಿನ ವ್ಯವಹಾರದಲ್ಲಿ ನಾವಿರುವುದಿಲ್ಲ. ಸರ್ಕಾರ ನಿರ್ಮಾಣ ಮಾಡಿದ ಸ್ಮಾರಕಕ್ಕೂ ಇದಕ್ಕೂ ಹೋಲಿಸಬೇಡಿ. ಸುಮಾರು ವರ್ಷಗಳಿಂದ ನಮ್ಮ ತಪ್ಪಿಲ್ಲದೇ ಇಲ್ಲಸಲ್ಲದ ಆರೋಪ ಹೊರಿಸುತ್ತಾ ಬರುತ್ತಿದ್ದಾರೆ. ಆರೋಪ ಹೊರಿಸೋದು ಬೇಡ. ಸುಮಾರು ಆರೋಪ, ಕೆಟ್ಟ ಮಾತು ಕೇಳಿ ಆಗಿದೆ. ಹೀಗಾಗಿ ನಮ್ಮ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕ್ರಮ ಜರುಗಿಸುತ್ತೇವೆ. ಸಾಮಾಜಿಕ ಮಾಧ್ಯಮ, ವೇದಿಕೆಯಲ್ಲಿ ಕೆಟ್ಟದಾಗಿ ಮಾತಾಡಿದ್ರೆ ಕಂಪ್ಲೆಂಟ್ ಕೊಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ನಾವು ಮೈಸೂರಿಗೆ ಹೋಗೋದಕ್ಕೆ ಕಾರಣ ಇದೆ. ನಮಗೆ ಅಭಿಮಾನ್ ಸ್ಟುಡಿಯೋ ಬಳಿ ಜಾಗ ತೋರಿಸಿದರು. ಅದು ಅರಣ್ಯ ಪ್ರದೇಶ ಅಂತಾ ಆಯ್ತು, ಎರಡ್ಮೂರು ಕಡೆ ಜಾಗ ನೋಡಿದ್ರು ಹೊಂದಾಣಿಕೆ ಆಗಲಿಲ್ಲ. ಬೆಂಗಳೂರಿನಲ್ಲಿ ಅವರಿಗೆ ಜಾಗನೇ ಇಲ್ವಾ ಅಂತಾ ನಾವು ಮೈಸೂರಿನಲ್ಲಿ ಸ್ಮಾರಕ ಮಾಡೋಕೆ ಜಾಗ ಕೇಳಿದ್ವಿ. ಸ್ಮಾರಕ ಮತ್ತೆ ನಿರ್ಮಾಣ ಮಾಡೋಕೆ ನಾವು, ನಮ್ಮ ಕುಟುಂಬ ಸದಾ ನಿಮ್ಮ ಜೊತೆ ಇರುತ್ತೇವೆ. ವಿಷ್ಣುವರ್ಧನ್ ಕುಟುಂಬದ ಪರವಾಗಿ ಸಭೆಗೆ ಕರೆದಿದ್ದೆ. ಇಷ್ಟು ಅಭಿಮಾನಿಗಳು ಸಭೆಗೆ ಬಂದು ಗೌರವ ಸಲ್ಲಿಸಿದ್ದೀರಿ ಎಂದು ಹೇಳಿದರು.ಇದನ್ನೂ ಓದಿ: 71 ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ ಬೆನ್ನಲ್ಲೇ ಭಿನ್ನಮತ ಸ್ಫೋಟ – ʻಕೈʼಗೆ ತಟ್ಟಿದ ಸಾಮೂಹಿಕ ರಾಜೀನಾಮೆ ಬಿಸಿ