ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಸಲ್ಲ: ಎಂಬಿ ಪಾಟೀಲ್

Public TV
1 Min Read

ಬೆಂಗಳೂರು: ಮಳೆಗಾಗಿ ನಡೆಸುವ ವಿಶೇಷ ಪೂಜೆಗೆ ಸರ್ಕಾರದ ಹಣ ಬಳಕೆ ಮಾಡುವುದಿಲ್ಲ. ಈ ಪೂಜೆಯ ವೆಚ್ಚಕ್ಕೆ ತಗಲುವ ಖರ್ಚನ್ನು ನಾನು ಮತ್ತು ಸ್ನೇಹಿತರು ಭರಿಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಅಗತ್ಯವಾಗಿ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ಹೇಳಿಕೆಯಲ್ಲಿ ಏನಿದೆ?
ಕೃಷ್ಣಾ ಮತ್ತು ಕಾವೇರಿ ನದಿಗಳು ಕರ್ನಾಟಕದ 6 ಕೋಟಿ ಜನತೆಯ ಜೀವನಾಡಿಗಳು. ಕುಡಿಯುವ ನೀರನ್ನು ಒದಗಿಸುವ ಹಾಗೂ ರೈತರ ಪಾಲಿಗೆ ಈ ನದಿಗಳು ದೇವತೆ ಸಮಾನವಾಗಿದ್ದು, ಈ ಎರಡೂ ನದಿಗಳಿಗೆ ಪೂಜಾ ಕೈಂಕರ್ಯ ನಡೆಸುವುದು, ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಧರ್ಮದ ಭಾಗವಾಗಿದೆ.

ಈ ಎರಡೂ ನದಿಗಳಿಂದ ರಾಜ್ಯದ ಜನತೆಗೆ ಉಪಕಾರವಾಗಿದ್ದು, ಹಾಗೂ ಮುಂದಿನ ದಿನಗಳಲ್ಲೂ ತಾಯಿಯ ಕರುಣೆಯನ್ನು ಬಯಸಿ ಕೃತಜ್ಞತಾ ಪೂರ್ವಕವಾಗಿ ನಮನ ಸಲ್ಲಿಸಲು ಈ ಹಿಂದೆ ಕಾವೇರಿ ನಿಗಮದ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಈ ಉದ್ದೇಶಕ್ಕೆ ತಲಾ 10 ಲಕ್ಷ ರೂ. ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಪೂಜಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ನಾನು ಮತ್ತು ಸ್ನೇಹಿತರು ಭರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಸರ್ಕಾರದ ಒಂದು ರೂಪಾಯಿ ಹಣವನ್ನು ಈ ಪೂಜೆಗೆ ಬಳಸುವುದಿಲ್ಲ.

ಇಂದು ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾಬಲೇಶ್ವರದಲ್ಲಿ ಮೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ತರಹದ ಪೂಜೆಯನ್ನು ಕಾವೇರಿಯ ಉಗಮಸ್ಥಳವಾದ ಭಾಗಮಂಡಲದಲ್ಲಿ ಜೂನ್ 4ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ಈ ಭಾಗದ ಜನಪ್ರತಿನಿಧಿಗಳು ಸೇರಿದಂತೆ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರು ಭಾಗಿಯಾಗುತ್ತಿದ್ದಾರೆ ಎಂದು ಎಂಬಿ ಪಾಟೀಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *