ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ!

Public TV
2 Min Read

– 20 ಅಡಿ ಆಳದಲ್ಲಿ ಹೂತುಹೋಗಿರುವ ಗ್ರಾಮ, 340ರ ಗಡಿ ದಾಟಿದ ಸಾವಿನ ಸಂಖ್ಯೆ

ವಯನಾಡು: ಭೀಕರ ಭೂಕುಸಿತಕ್ಕೆ (Wayanad Landslides) ದೇವರನಾಡೇ ನಲುಗಿ ಹೋಗಿದೆ. ಸಾವಿನ ಸುರಿʻಮಳೆʼಗೆ ವಯನಾಡಲ್ಲಿ ಮೃತರ ಸಂಖ್ಯೆ 340ರ ಗಟಿ ದಾಟಿದ್ದು, 5ನೇ ದಿನಕ್ಕೆ ಸೇನಾ ಕಾರ್ಯಾಚರಣೆ ಕಾಲಿಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರೇ (Doctors) ಸುಸ್ತಾಗಿದ್ದಾರೆ. ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ.

ಭೂಕುಸಿತ, ಪ್ರವಾಹಕ್ಕೆ ಛಿದ್ರಗೊಂಡಿರುವ ದೇಹಗಳು ಘಟನೆಯ ಭೀಕರತೆ ಬಿಚ್ಚಿಡುತ್ತಿವೆ. ಚಲಿಯಾರ್ ನದಿಯಲ್ಲೇ 135ಕ್ಕೂ ಹೆಚ್ಚು ದೇಹಗಳ ಅಂಗಾಂಗಳು ಪತ್ತೆಯಾಗಿವೆ. ಯಾರ ದೇಹ ಯಾರದ್ದು ಅನ್ನೋದೇ ತಿಳಿಯದಂತಹ ಪರಿಸ್ಥಿತಿ. ಪ್ರವಾಹದ (Flood) ರಭಸಕ್ಕೆ ದೇಹಗಳು ನಜ್ಜುಗುಜ್ಜಾಗಿ ಹೋಗಿವೆ. ದುರಂತ ಸ್ಥಳದ ಒಂದೊಂದು ದೃಶ್ಯಗಳು ಕಣ್ಣೀರು ತರಿಸುತ್ತೆ.

ಮುಂಡಕ್ಕೈ, ಚೂರಲ್‌ಮಲದಲ್ಲಿ (Chooralmala) ಸೇನಾ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ (ಆ.3ರಂದು) ಸಹ 3 ಸಾವಿರ ಜನರು ಶವಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಬಂಡೆಗಳ ಕೆಳಗೆ, ಕೆಸರು, ಕಾಡಿನ ಅಂಚಿನಲ್ಲಿ ಶೋಧ ನಡೆಸ್ತಿದ್ದು, 50ಕ್ಕೂ ಹೆಚ್ಚು ಜೆಸಿಬಿಗಳು ಕಾರ್ಯಾಚರಣೆಗಿಳಿದಿವೆ. ಕೆಲ ಗ್ರಾಮಗಳು 20 ಅಡಿ ಆಳದಲ್ಲಿ ಹೂತು ಹೋಗಿರುವ ಕಾರಣ ಅಲ್ಲಿಂದ ಶವಗಳ ಹೊರ ತೆಗೆಯಲು ಭಾರೀ ಸಂಖ್ಯೆಯಲ್ಲಿ ಜೆಸಿಬಿಗಳ ಬಳಸಲಾಗುತ್ತಿದೆ. ನಾಪತ್ತೆಯಾಗಿರುವ 250ಕ್ಕೂ ಹೆಚ್ಚು ಜನರಿಗಾಗಿ ಶೋಧ ಕಾರ್ಯ ಭರದಿಂದ ಸಾಗುತ್ತಿದೆ.

Wayanad landslides

30 ಶವ ಪತ್ತೆ ಹಚ್ಚಿರುವ `ಡಿಕ್ಸಿʼ:
ಇನ್ನು ದುರಂತ ಸ್ಥಳ ಚೂರಲ್‌ಮಲ ಭಾಗದಲ್ಲಿ ಉತ್ತರ ಪ್ರದೇಶದ ಮೇರಠ್‌ನಿಂದ ಬಂದಿರುವ ಶ್ವಾನಗಳು ಮೃತದೇಹಗಳ ಹುಡುಕಾಟದಲ್ಲಿ ತೊಡಗಿವೆ. ಈಗಾಗಲೇ 30 ಶವಗಳನ್ನು ಪತ್ತೆ ಹಚ್ಚಿದ್ದು, ಡಿಕ್ಸಿ ಹೆಸರಿನ ಶ್ವಾನ ಇದಕ್ಕೆ ಎಕ್ಸ್‌ಪರ್ಟ್‌ ಆಗಿದೆ. ಈ ಮಧ್ಯೆ ಮುಂಡಕೈ ಗ್ರಾಮಕ್ಕೆ ನಟ ಹಾಗೂ ಸೇನಾಧಿಕಾರಿ ಮೋಹನ್ ಲಾಲ್ ಭೇಟಿ ನೀಡಿ ದುರಂತ ಸ್ಥಳ ವೀಕ್ಷಿಸಿದ್ದಾರೆ.

ಕೇರಳದ (Kerala) ವಯನಾಡಿನಲ್ಲಿ ಭಯಾನಕ ಭುಕುಸಿತ ಸಂಭವಿಸಿ 5 ದಿನವಾದರೂ ಸಾವಿನ ಕೇಕೆ, ಸಂತ್ರಸ್ತರ ಆಕ್ರಂದನ ನಿಂತಿಲ್ಲ. ಈ ನಡುವೆ ಗುಡ್ಡ ಕುಸಿತವಾದ ಮೊದಲ ಸ್ಥಳದ ದೃಶ್ಯಗಳು ಡ್ರೋನ್ ಕಣ್ಣಲ್ಲಿ ಸೆರೆಯಾಗಿವೆ. ಬೆಟ್ಟದ ಮೇಲಿನಿಂದ ಭೂಕುಸಿತ ಆರಂಭವಾಗಿತ್ತು. ಬೆಟ್ಟದ ಸಾಲುಗಳಿಂದ ನೀರು ಹರೀತಿದೆ. ಅಕ್ಕ-ಪಕ್ಕ ಹಸಿರಿನ ರಾಶಿಯನ್ನೇ ಆವರಿಸಿರುವ ಬೆಟ್ಟ ಸಾವಿನ ಗುಡ್ಡವಾಗಿ ಪರಿಣಮಿಸಿದ ಆರಂಭದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇನ್ನೂ ವಯನಾಡಿನಲ್ಲಿ ಮತ್ತೆ ಭಾರೀ ಮಳೆಯ ಆತಂಕ ಎದುರಾಗಿದ್ದು, ವಯನಾಡು, ಕೋಝಿಕ್ಕೋಡ್, ಕಣ್ಣೂರು ಕಾಸರಗೋಡು ಜಿಲ್ಲೆಗಳಲ್ಲಿ ಆಗಸ್ಟ್ 7ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿರುಗಾಳಿ ಸಹಿತ 65 ಮಿಲಿಮೀಟರ್‌ನಿಂದ 115 ಮಿಲಿಮೀಟರ್‌ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Share This Article