206 ಮಂದಿ ನಾಪತ್ತೆ – ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಶೋಧ ಕಾರ್ಯ

Public TV
2 Min Read

– ಪಬ್ಲಿಕ್‌ ಟಿವಿಗೆ ಡಿಸಿ ಮೇಘಾಶ್ರೀ ಪ್ರತಿಕ್ರಿಯೆ

ವಯನಾಡು: ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಪತ್ತೆ ಮಾಡುವ ಕಾರ್ಯ ನಡೆಯಲಿದೆ ಎಂದು ವಯನಾಡು (Wayanad) ಜಿಲ್ಲಾಧಿಕಾರಿ ಮೇಘಾಶ್ರೀ (Meghashree) ತಿಳಿಸಿದ್ದಾರೆ.

ಕರ್ನಾಟಕ ಚಿತ್ರದುರ್ಗ ಮೂಲದ ಮೇಘಾಶ್ರೀ ಅವರನ್ನು ಪಬ್ಲಿಕ್‌ ಟಿವಿ ಚೂರಲ್ಮಲದಲ್ಲಿ (Chooralmala) ಮಾತನಾಡಿಸಿದೆ. ಈ ವೇಳೆ ಅವರು, ಸಾವಿನ ಅಧಿಕೃತ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಕ್ಷಣ ಕ್ಷಣಕ್ಜೂ ಪಟ್ಟಿ ಬೆಳೆಯುತ್ತಿದೆ. ಮೃತಪಟ್ಟವರಲ್ಲಿ ಪ್ರವಾಸಿಗರು ಇದ್ದಾರೆ. ಇದುವರೆಗೂ 3 ಸಾವಿರ ಜನರ ರಕ್ಷಣೆ ಮಾಡಲಾಗಿದೆ ಎಂದು ಹೇಳಿದರು.

ಭೂಕುಸಿತಗೊಂಡ ಜಾಗದಲ್ಲಿ ಎಷ್ಟು ಮನೆಗಳು ಇದ್ದವು ಎನ್ನುವುದರ ಬಗ್ಗೆ ರೇಷನ್‌ ಕಾರ್ಡ್‌, ವೋಟರ್‌ ಐಡಿ ಡೇಟಾದ ಮೂಲಕ ಮಾಹಿತಿಗಳನ್ನು ನಾವು ಈಗ ಸಂಗ್ರಹ ಮಾಡುತ್ತಿದ್ದೇವೆ. ಇದಕ್ಕೆ ಸ್ಥಳೀಯ ಜನರು ಸಹಕಾರ ನೀಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಂದ ಅವರ ಮನೆಯಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ 206 ಜನ ನಾಪತ್ತೆಯಾಗಿದ್ದಾರೆ. ಆದರೆ ಇದೇ ಅಧಿಕೃತವಲ್ಲ ಎಂದು ಮಾಹಿತಿ ನೀಡಿದರು.  ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಐವರು ಸಾವು, 50 ಮಂದಿ ಕಣ್ಮರೆ

ಭೂಕುಸಿತ ನಡೆದ ಜಾಗ ಬಹಳ ದೊಡ್ಡದಿದೆ. ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಮಕ ದಳ ಸೇರಿದಂತೆ ಎಲ್ಲಾ ತಂಡಗಳನ್ನು ಸೇರಿಸಿದ್ದರೆ ಅಂದಾಜು 3 ಸಾವಿರ ಮಂದಿ ಈಗ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕೆಲಸಕ್ಕೆ ಸ್ಥಳೀಯರ ಅಗತ್ಯ ನೆರವು ಬೇಕು. ಸ್ಥಳೀಯರ ನೆರವು ಇಲ್ಲದೇ ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರ ಸಹಕಾರ ಪಡೆದು ಪತ್ತೆ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.

 

ಈ ವೇಳೆ ನಾಪತ್ತೆಯಾಗಿರುವ ಪ್ರವಾಸಿಗರ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರವಾಸಿಗರು ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಎಷ್ಟು ಮಂದಿ ಬಂದಿದ್ದಾರೆ? ಎಲ್ಲಿ ಅವರು ತಂಗಿದ್ದರು ಎಂಬ ಮಾಹಿತಿಯನ್ನು ನಾವು ಈಗ ಇಲ್ಲಿರುವ ಹೋಮ್‌ಸ್ಟೇಗಳಿಂದ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಮೊದಲ ಭೂಕುಸಿತ ಸಂಭವಿಸಿದ ಒಂದು ಗಂಟೆಯ ಒಳಗಡೆ ನಮ್ಮ ರಕ್ಷಣಾ ತಂಡ ಈ ಸ್ಥಳವನ್ನು ತಲುಪಿತ್ತು. ಸೇತುವೆ ಕೊಚ್ಚಿ ಹೋಗಿದ್ದರಿಂದ ಕೂಡಲೇ ಇನ್ನೊಂದು ಬದಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

Share This Article