ಶಿರಸಿ ನಗರಸಭೆಯಲ್ಲಿ 21 ಲಕ್ಷ ಮೌಲ್ಯದ ಐರನ್ ಪೈಪ್ ಕಳ್ಳತನ ಕೇಸ್‌ – ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ ಸೇರಿ 7 ಆರೋಪಿಗಳು

Public TV
2 Min Read

ಕಾರವಾರ: ಹಣದ ಆಸೆಗೆ ಬಿದ್ದ ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ ಹಾಗೂ ಸದಸ್ಯರೇ ಸೇರಿ ಲಕ್ಷಾಂತರ ಮೌಲ್ಯದ ಕಬ್ಬಿಣದ ಪೈಪುಗಳನ್ನು ಕಳ್ಳತನ ಮಾಡಿ ಕೊನೆಗೆ ಪೊಲೀಸರ ಅಥಿತಿಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಕೆಂಗ್ರೆ ನೀರು ಸರಬರಾಜು ಘಟಕದಿಂದ ಶಿರಸಿ ನಗರಕ್ಕೆ ಪೂರೈಕೆಯ ಹಳೆಯ ಕಾಸ್ಟ್ ಐರನ್ ಪೈಪ್‌ಗಳು ಪೆ.27 ರಂದು ಕಳ್ಳತನವಾಗಿದೆ. ಈ ಕುರಿತು ಮಾರ್ಚ್‌ 4 ರಂದು ನಗರಸಭೆಯ ಕಿರಿಯ ಅಭಿಯಂತರ ಸೂಫಿಯಾನ್ ಅಹಮ್ಮದ ಬ್ಯಾರಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಂಟು ಕಿಲೋಮೀಟರ್ ಉದ್ದದ ಈ ಪೈಪ್‌ಲೈನ್‌ನಲ್ಲಿ 900 ಮೀಟರ್ ಉದ್ದದ 116 ಪೈಪ್‌ಗಳು ಕಳ್ಳತನವಾಗಿದ್ದು, ಒಟ್ಟು 21,18,624 ರೂ. ಮೊತ್ತದ್ದಾಗಿದೆ. ಈ ಪೈಪ್‌ಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಝಕ್ರಿಯಾ ಸಯ್ಯದ್ ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಲಕ್ಷಾಂತರ ಮೌಲ್ಯದ ಐರನ್ ಪೈಪ್‌ಗಳನ್ನು ಹಾಡಹಗಲೇ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಅಧಿಕಾರಿಗಳು ಶಾಮೀಲಾಗಿರುವ ಕುರಿತು ನಗರಸಭಾ ಸದಸ್ಯರು ಸಹ ಆರೋಪ ಮಾಡಿದ್ದರು. ಇದಲ್ಲದೇ, ಸಮರ್ಪಕ ತನಿಖೆ ಕೈಗೊಳ್ಳದಿದ್ದರೇ ಸಾಮೂಹಿಕ ರಾಜೀನಾಮೆ ಕೊಡುವುದಾಗಿ ನಗರಸಭಾ ಸದಸ್ಯರು ಪಟ್ಟು ಹಿಡಿದಿದ್ದರು. ಈ ಪ್ರಕರಣ ಕುರಿತು ಲೋಕಾಯುಕ್ತಕ್ಕೆ ಸಹ ದೂರು ನೀಡಲಾಗಿತ್ತು. ಆದರೆ, ತನಿಖೆ ಕೈಗೊಂಡ ಗ್ರಾಮೀಣಾ ಠಾಣೆ ಪೊಲೀಸರು ನಗರಸಭೆ ಕಮಿಷನರ್, ಸಹಾಯಕ ಇಂಜಿನಿಯರ್, ಎಇಇ, ನಗರಸಭೆ ಅಧ್ಯಕ್ಷ, ಸದಸ್ಯರೇ ಕಳ್ಳತನ ಮಾಡಿರುವುದನ್ನು ದಾಖಲೆ ಸಮೇತ ಪತ್ತೆ ಮಾಡಿ ದೂರು ನೀಡಿದ ಅಧಿಕಾರಿ ಸೇರಿ ಏಳು ಆರೋಪಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಪ್ರಕರಣ ಬೆನ್ನುಬಿದ್ದ ಗ್ರಾಮೀಣ ಠಾಣೆ ಪೊಲೀಸರು ಝಕ್ರಿಯಾ ಸಯ್ಯದ್‌ನನ್ನು ಬಂಧಿಸಿ ತನಿಖೆ ಕೈಗೊಂಡಾಗ ಈ ಹಿಂದೆ ನಗರದ ಹಳೆಯ ಪೈಪ್‌ಗಳನ್ನು ತೆಗೆಯಲು ಟೆಂಟರ್ ಪಡೆದಿದ್ದು, ಅದು ನಷ್ಟವಾಗಿದ್ದರಿಂದ ಇದನ್ನು ಸರಿದೂಗಿಸಲು ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ ಹಾಗೂ ಸಹಾಯಕ ಇಂಜಿನಿಯರ್ ಗಮನಕ್ಕೆ ತಂದು ಪೈಪ್‌ಗಳನ್ನು ಕಿತ್ತು ತೆಗೆದುಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಇದಕ್ಕಾಗಿ ನಗರಸಭಾ ಸದಸ್ಯ ಯಶವಂತ್ ಮರಾಠೆ ಖಾತೆಗೆ ಹಣ ಹಾಕಿರುವುದು ತಿಳಿದಿದೆ. ಈತನನ್ನು ವಿಚಾರಿಸಿದಾಗ ನಗರಸಭೆ ಕಮಿಷನರ್, ಮಾಜಿ ಅಧ್ಯಕ್ಷ, ಸದಸ್ಯರು ಸಹ ಭಾಗಿಯಾಗಿರುವುದು ಬಯಲಿಗೆ ಬಂದಿದೆ.

ಈ ಪ್ರಕರಣ ಸಂಬಂಧ ಸರ್ಕಾರಿ ಅಧಿಕಾರಿಗಳಾದ ನಗರಸಭೆ ಕಮಿಷನರ್ ಕಾಂತರಾಜು, ಕಳ್ಳತನವಾಗಿರುವ ದೂರು ನೀಡಿದ್ದ ಜೂನಿಯರ್ ಇಂಜಿನಿಯರ್ ಸುಫಿಯಾನ್ ಅಹಮ್ಮದ ಬ್ಯಾರಿ, ಎಇಇ ಪ್ರಶಾಂತ ವರ್ಣೇಕರ್, ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ನಗರಸಭೆ ಸದಸ್ಯ ಕುಮಾರ್ ಬೋರ್ಕರ್, ಯಶವಂತ್ ಮರಾಠೆ ಯನ್ನು ತನಿಖೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ ಎರಡು ಲಾರಿ ಹಾಗೂ ಪ್ರಮುಖ ಆರೋಪಿ ಗುಜರಿ ವ್ಯಾಪಾರಿ ಝಕ್ರಿಯಾ ಸಯ್ಯದ್‌ನಿಂದ ಕಬ್ಬಿಣ ಮಾರಿದ ಏಳು ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿರುವುದಾಗಿ ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

ತಾವು ಮಾಡಿದ ತಪ್ಪಿಗೆ ಏಳು ಜನ ಆರೋಪಿಗಳು ದೂರು ದಾಖಲಾದಾಗಲೇ ಕೋರ್ಟ್‌ನಲ್ಲಿ ಬೇಲ್ ಪಡೆದಿದ್ದು, ಬೀಸುವ ದೊಣ್ಣೆಯಿಂದ ಸದ್ಯ ಬಚಾವ್ ಆಗಿದ್ದಾರೆ. ಮೂವರು ಸರ್ಕಾರಿ ಅಧಿಕಾರಿ ಹಾಗೂ ಮೂರು ಜನ ಜನಪ್ರತಿನಿಧಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅಧಿಕಾರಿಗಳನ್ನು ಅಮಾನತು ಮಾಡಲು ಹಾಗೂ ನಗರಸಭೆ ಸದಸ್ಯರ ಅನರ್ಹತೆಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ನಂತರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ಟ್‌ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.

Share This Article